Advertisement

ನೂರಾರು ಮಂದಿ ಭೇಟಿ ನೀಡುವ ಎಟಿಎಂಗಳಲ್ಲಿ ಸ್ಯಾನಿಟೈಜರೇ ಇಲ್ಲ!

06:32 PM Apr 02, 2020 | Suhan S |

ಶಿವಮೊಗ್ಗ: ಇಡೀ ದೇಶವೇ ಲಾಕ್‌ಡೌನ್‌ ಆಗಿ 7 ದಿನ ಕಳೆದಿದೆ. ಆದರೆ ಎಟಿಎಂಗಳು ಮಾತ್ರ ಸಾರ್ವಜನಿಕರಿಗೆ ಲಭ್ಯ ಇವೆ. ಪ್ರತಿ ದಿನ ನೂರಾರು ಮಂದಿ ಭೇಟಿ ಕೊಡುವ ಈ ಕೇಂದ್ರಗಳು ಕೋವಿಡ್ 19 ಮುಂಜಾಗ್ರತಾ ಕ್ರಮಗಳಿಂದ ದೂರವಿವೆ.

Advertisement

ಕೋವಿಡ್ 19  ಸೋಂಕು ದೇಶವ್ಯಾಪಿ ಹರಡುವ ಹಿನ್ನೆಲೆಯಲ್ಲಿ ಎಲ್ಲ ಎಟಿಎಂಗಳಲ್ಲೂ ಸ್ಯಾನಿಟೈಸರ್‌ ಬಳಸಬೇಕೆಂದು ವಿತ್ತ ಸಚಿವಾಲಯ ಸೂಚನೆ ನೀಡಿತ್ತು. ಸರಕಾರದಿಂದಲೇ ನಿರ್ದೇಶನ ಇದ್ದರೂ ಸ್ಯಾನಿಟೈಸರ್‌ ಇಡುವ ಬಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಅಷ್ಟೊಂದು ಗಂಭೀರತೆ ಕಂಡುಬಂದಿಲ್ಲ. ಜಿಲ್ಲೆಯಲ್ಲಿ ಒಟ್ಟು 434 ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಎಟಿಎಂಗಳಿದ್ದು ಇದರಲ್ಲಿ 84 ಎಟಿಎಂಗಳು ಶಿವಮೊಗ್ಗ ನಗರದಲ್ಲೇ ಇವೆ. ಆದರೆ ಬೆರಳೆಣಿಕೆ ಎಟಿಎಂಗಳಲ್ಲಿ ಮಾತ್ರ ಸ್ಯಾನಿಟೈಸರ್‌ ಅಳವಡಿಸಲಾಗಿದೆ.

ನಗರದ ಕೆನರಾ ಬ್ಯಾಂಕ್‌ ಹಾಗೂ ಎಸ್‌ ಬಿಐ ಎಟಿಎಂಗಳಲ್ಲಿ ಕೆಲವು ಕಡೆ ಸ್ಯಾನಿಟೈಸರ್‌ ಇಡಲಾಗಿದೆ. ಸೆಕ್ಯುರಿಟಿ ಇರುವ ಎಟಿಎಂಗಳಲ್ಲಿ ಸದ್ಬಳಕೆಯಾಗುತ್ತಿದೆ. ಕೆಲ ಸೆಕ್ಯುರಿಟಿ ಗಾರ್ಡ್‌ಗಳು ಬೇಗ ಖಾಲಿಯಾಗುತ್ತದೆ ಎಂಬ ಕಾರಣಕ್ಕೆ ಎತ್ತಿಟ್ಟಿರುವ ಘಟನೆಗಳು ನಡೆದಿವೆ. ಗ್ರಾಮಾಂತರ ಭಾಗದ ಎಟಿಎಂಗಳಲ್ಲಿ ಯಾವುದೇ ಮುನ್ನೆಚ್ಚರಿಕೆ ಪಾಲಿಸಿಲ್ಲ. ಅಂದಾಜು 600 ರೂ. ಮೌಲ್ಯದ ಸ್ಯಾನಿಟೈಸರ್‌ಗಳನ್ನು ಕೆನರಾ ಬ್ಯಾಂಕ್‌ ಎಟಿಎಂಗಳಲ್ಲಿ ಕಾಣಬಹುದು. ಸೆಕ್ಯೂರಿಟಿ ಇಲ್ಲದ ಎಟಿಎಂಗಳಲ್ಲಿ ಸ್ಯಾನಿಟೈಸರ್‌ ಕಳವು ಸಹ ಮಾಡಲಾಗಿದೆ. ಕೋವಿಡ್ 19 ಸೋಂಕು ವಿದೇಶದಿಂದ ಬಂದಿರದ ವ್ಯಕ್ತಿಗಳಲ್ಲೂ ಕಾಣಿಸಿಕೊಂಡಿದ್ದರೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ವಿಫಲವಾಗಿದೆ.

ದೆಹಲಿಯ ನಿಜಾಮುದ್ದೀನ್‌ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಹಲವು ಮಂದಿಯಲ್ಲಿ ಕೋವಿಡ್ 19  ಸೋಂಕು ಕಾಣಿಸಿಕೊಂಡಿರುವುದರಿಂದ ದೇಶವೇ ದಿಗ್ಭ್ರಮೆಗೊಂಡಿದೆ. ಈ ಸಮಾವೇಶದಲ್ಲಿ ಭಾಗವಹಿಸಿದ್ದರು ಎನ್ನಲಾದ ಆರು ಮಂದಿ ಶಿವಮೊಗ್ಗದಲ್ಲಿ ಪತ್ತೆಯಾಗಿರುವುದರಿಂದ ಸೋಂಕು ಹರಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

 

Advertisement

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next