Advertisement

ಸ್ವಚ್ಛತೆ ಮಹಿಳಾ ಕಾರ್ಮಿಕರಿಗೆ ಕೊಠಡಿಗಳಿಲ್ಲ !

08:35 PM Apr 14, 2019 | Sriram |

ವಿಶೇಷ ವರದಿಮಹಾನಗರ: “ಸ್ವಚ್ಛ ಮಂಗಳೂರು’ ಪರಿಕಲ್ಪನೆಯಡಿಯಲ್ಲಿ ಮಂಗಳೂರಿನ ತ್ಯಾಜ್ಯ ಸಂಗ್ರಹ ಮಾಡುತ್ತಿರುವ ಕಾರ್ಮಿಕರು ಕೆಲವು ವರ್ಷಗಳಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು,ಸ್ಥಳೀಯಾಡಳಿತ ಮೌನವಾಗಿದೆ.

Advertisement

ದಿನಂಪ್ರತಿ ಬೆಳಗ್ಗೆಯಿಂದ ಸಂಜೆವರೆಗೆ ದುಡಿಯುವ ಮಹಿಳಾ ಕಾರ್ಮಿಕರು ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ರಸ್ತೆ ಬದಿಯಲ್ಲೇ ಸಮವಸ್ತ್ರ ಬದಲಾಯಿಸುವ ಪರಿಸ್ಥಿತಿ ಇದೆ.ತ್ಯಾಜ್ಯ ವಿಲೇವಾರಿ ಮಾಡುವ ಆ್ಯಂಟನಿ ಸಂಸ್ಥೆಯು ಎಲ್ಲ ಕಾರ್ಮಿಕರಿಗೆ ಸಮವಸ್ತ್ರ ನೀಡಿದ್ದು,ಅದನ್ನು ಧರಿಸಲು ಪಾಲಿಕೆ ಅಥವಾ ಆ್ಯಂಟನಿ ಸಂಸ್ಥೆಯಿಂದ ಯಾವುದೇ ಕೊಠಡಿಯ ವ್ಯವಸ್ಥೆ ಮಾಡಿಲ್ಲ.

ನಗರದಲ್ಲಿ ಸುಮಾರು 80ಕ್ಕೂ ಹೆಚ್ಚು ತಾಜ್ಯ ಸಂಗ್ರಹ ವಾಹನಗಳಿದ್ದು, ಸುಮಾರು 800ಕ್ಕೂ ಹೆಚ್ಚಿನ ಮಂದಿ ದುಡಿಯುತ್ತಿದ್ದಾರೆ. ಅದರಲ್ಲಿ 170ಕ್ಕೂ ಹೆಚ್ಚು ಮಂದಿ ಮಹಿಳಾ ಕಾರ್ಮಿಕರು ದಿನಂಪ್ರತಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವು ಮಹಿಳಾ ಕಾರ್ಮಿಕರು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಬರುವಾಗಲೇ ಸಮವಸ್ತ್ರ ಧರಿಸಿಯೇ ಹಾಜರಾಗುತ್ತಾರೆ. ಆದರೆ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಬಟ್ಟೆ ಕೊಳೆಯಾಗಿರುತ್ತದೆ. ಅದೇ ಸಮವಸ್ತ್ರದಲ್ಲಿ ಬಸ್‌ನಲ್ಲಿ ಓಡಾಡುವಾಗ ಸಮಸ್ಯೆಯಾಗುವುದರಿಂದ ಬಟ್ಟೆ ಬದಲಾಯಿಸಲೇಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಕಾರ್ಮಿಕರಿಗೆ ಸಮರ್ಪಕವಾದ ಶೌಚಾಲಯ ವ್ಯವಸ್ಥೆ ಕೂಡ ಇಲ್ಲ.

ವಾಹನ ತಂಗಲು ಯಾರ್ಡ್‌ ಇಲ್ಲ
ತಾಜ್ಯ ವಿಲೇವಾರಿ ವಾಹನಗಳನ್ನು ರಾತ್ರಿಯಾದರೆ ನಿಲ್ಲಿಸಲು ನಗರದಲ್ಲಿ ಯಾರ್ಡ್‌ ವ್ಯವಸ್ಥೆ ಇಲ್ಲ. ಈಗ ನಗರದ ಅನೇಕ ಕಡೆಗಳಲ್ಲಿ ಹತ್ತತ್ತು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕೂಳೂರು ಬಳಿ ಈ ಹಿಂದೆ ಇದ್ದಂತಹ ಯಾರ್ಡ್‌ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಬಳಿಕ, ಸುರತ್ಕಲ್‌, ಪಚ್ಚನಾಡಿ, ಕಾವೂರು, ಮಲ್ಲಿಕಟ್ಟೆ, ಮಣ್ಣಗುಡ್ಡೆ, ಕಂಕನಾಡಿ, ಮಂಗಳಾದೇವಿ ಸೇರಿದಂತೆ ವಿವಿಧಡೆ ಸುಮಾರು ಹತ್ತತ್ತು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಕಸದ ವಾಸನೆಯಿಂದಾಗಿ ಸ್ಥಳೀಯ ಮಂದಿ ತಕರಾರು ಎತ್ತುತ್ತಿದ್ದಾರೆ.

ವಾರ್ಡ್‌ ಕಚೇರಿಗೆ ಬೀಗ
ಪ್ರತಿಯೊಂದು ವಾರ್ಡ್‌ನಲ್ಲಿಯೂ ವಾರ್ಡ್‌ ಕಚೇರಿಗಳಿವೆ. ಆದರೆ, ಇವುಗಳ ಉಪಯೋಗ ಕಸ ಸಂಗ್ರಹ ಮಾಡುವ ಕಾರ್ಮಿಕರಿಗಿಲ್ಲ. ಕಾರ್ಮಿಕರೊಬ್ಬರು ಹೇಳುವ ಪ್ರಕಾರ “ಕಾರ್ಮಿಕರು ಕೆಲಸಕ್ಕೆ ಆಗಮಿಸುವ ಬೆಳಗ್ಗಿನ ಸಮಯ ವಾರ್ಡ್‌ ಕಚೇರಿಗೆ ಬೀಗ ಜಡಿದಿರುತ್ತದೆ. ಆದ್ದರಿಂದ ಇದನ್ನು ಉಪಯೋಗಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ರಸ್ತೆ ಬದಿ, ವಾಹನಗಳ ಬದಿಗಳಲ್ಲಿ ಸಮವಸ್ತ್ರ ಧಿರಿಸಬೇಕು’ ಎನ್ನುತ್ತಾರೆ.

Advertisement

ಮುಖ್ಯಸ್ಥರು ಬರದೆ ವರ್ಷ ಆಯ್ತು
ಆ್ಯಂಟನಿ ಸಂಸ್ಥೆಯ ಮುಖ್ಯಸ್ಥರು ಸುಮಾರು ಒಂದು ವರ್ಷದ‌ ಹಿಂದೆ ಮಂಗಳೂರಿಗೆ ಆಗಮಿಸಿ, ಕಾರ್ಮಿಕರ ಮನವಿ ಆಲಿಸಿದ್ದರು. ಕಾರ್ಮಿಕರಿಗೆ ಈ ವೇಳೆ ಸಮಸ್ಯೆ ಇತ್ಯರ್ಥದ ಭರವಸೆ ನೀಡಿದ್ದರು. ಪ್ರತೀ ತಿಂಗಳು ಕಾರ್ಮಿಕರೊಡನೆ ಸಮಸ್ಯೆ ಆಲಿಸುತ್ತೇನೆ ಎಂದು ಹೇಳಿದ್ದರು. ಆದರೆ, ಕಂಪೆನಿ ಮುಖ್ಯಸ್ಥರು ಒಂದು ವರ್ಷದಿಂದ ಮತ್ತೆ ಆಗಮಿಸಲಿಲ್ಲ. ಸಮಸ್ಯೆಗಳೂ ಬಗೆಹರಿದಿಲ್ಲ.

 ಸೂಕ್ತ ಕ್ರಮ
ಕಸ ವಿಲೇವಾರಿ ವಾಹನಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಅದರಲ್ಲಿಯೂ ಮಹಿಳಾ ಕಾರ್ಮಿಕರಿಗೆ ಬಟ್ಟೆ ಬದಲಾಯಿಸಲು ಸೂಕ್ತ ಕೊಠಡಿ ನೀಡುವ ಬಗ್ಗೆ ಪಾಲಿಕೆ ಆಯುಕ್ತರ ಬಳಿ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ.
 - ಶಶಿಕಾಂತ್‌ ಸೆಂಥಿಲ್‌,
ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next