ಕಲಾದಗಿ: ಉದಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯರು ಸೇರಿದಂತೆ ಪ್ರಮುಖ ಶಿಕ್ಷಕರ ಕೊರತೆಯಿದೆ.
ಶಾಲೆಯಲ್ಲಿ 1ರಿಂದ 8ನೇ ತರಗತಿ ನಡೆಯುತ್ತಿವೆ. ಒಟ್ಟು 114 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಗೆ ಒಬ್ಬರೇ ಕಾಯಂ ಶಿಕ್ಷಕರು, ಇನ್ನೂ ಮೂವರು ಶಿಕ್ಷಕರು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಅತಿಥಿ ಶಿಕ್ಷಕರ ಮೇಲೆ ದಿನನಿತ್ಯ ತರಗತಿ, ಆಟ-ಪಾಠಗಳು ನಡೆಯುತ್ತಿವೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಶಾಲೆಗೆ ಮುಖ್ಯೋಪಾಧ್ಯಾರು ಇಲ್ಲ, ಇದ್ದ ಒಬ್ಬ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರ ಪ್ರಭಾರಿ ಕೊಡಲಾಗಿದೆ. ಹೀಗಾಗಿ ಮಕ್ಕಳಿಗೆ ಪಠ್ಯಪುಸ್ತಕ ಪಠ್ಯಕ್ರಮ ಹಿಂದುಳಿಯುತ್ತಿವೆ. ಹೀಗಾದರೆ ಮಕ್ಕಳ ಶಿಕ್ಷಣಾಭ್ಯಾಸ ಹೇಗೆ ಎಂದು ಶಿಕ್ಷಣ ಪ್ರೇಮಿಗಳು ಗ್ರಾಮದ ಪ್ರಮುಖರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಳ್ಳುತ್ತಿದೆ. ಈ ಶಾಲೆಗೆ ಮೊದಲಿನಿಂದಲೂ ಅಗತ್ಯ ಶಿಕ್ಷಕರ ನೇಮಕ ಮಾಡುವಲ್ಲಿ ಶಿಕ್ಷಣ ಇಲಾಖೆ ನಿರಾಸಕ್ತಿ ವಹಿಸಿದೆ ಎನ್ನುತ್ತಾರೆ ಗ್ರಾಮದ ಗೋವಿಂದ ಜಕನಾರ
ಕೌನ್ಸೆಲಿಂಗ್‌ನಲ್ಲಿ ಹಾವೇರಿ ಜಿಲ್ಲೆಯಿಂದ ಮುಖ್ಯೋಪಾಧ್ಯಾಯರ ನೇಮಕಾತಿ ಮಾಡಲಾಗಿದೆ. ಯಾವ ಕಾರಣಕ್ಕಾಗಿ ಇಲ್ಲಿಗೆಬರುತ್ತಿಲ್ಲ ಎನ್ನುವುದು ಗೊತ್ತಾಗಿಲ್ಲ,ಅಲ್ಲಿನ ಡಿಡಿಪಿಐ ಅವರ ಜತೆ ಮಾತನಾಡುವೆ. ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳ ಸಲಹೆ ಸೂಚನೆ ಪಡೆದುಕೊಳ್ಳಲಾಗುವುದು.
-ಬಿ. ಹಿರೇಮಠ, ಬಾಗಲಕೋಟೆ ಬಿಇಒ
ಶಾಲೆಯಲ್ಲಿ ಪ್ರಭಾರಿ ಶಿಕ್ಷಕರೇ ಹೆಚ್ಚು. ಮತ್ತೆ ಮುಂದಿನ ಶೈಕ್ಷಣಿಕ ವರ್ಷ ಆರಂಭವಾದಾಗ ಅದೇ ಸಮಸ್ಯೆ. ಪ್ರತಿ ವರ್ಷವೂ ಗ್ರಾಮಸ್ಥರಿಗೆ ಶಾಲಾ ಶಿಕ್ಷಕರನ್ನು ಶಾಲೆಗೆ ಹಾಕಿಸಿಕೊಳ್ಳುವುದೇಕೆಲಸವಾಗಿದೆ. ಈ ಶಾಲೆಯತ್ತ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು.
–ಬಸುರಾಜ ಪುಂಡಿಕಟಗಿ, ಖಜ್ಜಿಡೋಣಿ ಗ್ರಾಪಂ ಮಾಜಿ ಅಧ್ಯಕ್ಷ
-ಚಂದ್ರಶೇಖರ ಹಡಪದ