ಸಿದ್ದಾಪುರ: ಸರಕಾರ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಮಾತನಾಡುತ್ತಿದ್ದರೆ, ಇತ್ತ ಶಿಕ್ಷಣ ಇಲಾಖೆ ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ಸರಿಯಾಗಿ ನೇಮಕ ಮಾಡದೆ ಪರೋಕ್ಷವಾಗಿ ಸರಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡುವ ರೀತಿಯಂತಾಗಿದೆ ನೀತಿ. ಶಿಕ್ಷಕರು ಇದ್ದ ಕಡೆ ಮಕ್ಕಳು ಇಲ್ಲ.
ಮಕ್ಕಳು ಇದ್ದ ಕಡೆ ಶಿಕ್ಷಕರು ಹಾಗೂ ಕಟ್ಟಡ ಕೂಡ ಇಲ್ಲ. ಇದಕ್ಕೊಂದು ನಿದರ್ಶನವಾಗಿ ಕಂಡು ಬರುತ್ತಿದೆ ಅಮಾಸೆಬೈಲು ಗ್ರಾಮದ ಕೆಲಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಶಾಲೆ ಪ್ರಾರಂಭಗೊಂಡು ಕೆಲವು ದಿನಗಳು ಕಳೆದರೂ ಇಂದಿಗೂ ಶಾಲೆಗೆ ಖಾಯಂ ಶಿಕ್ಷಕರು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ನಕ್ಸಲ್ ಪೀಡಿತ ಕೆಲಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯ ತನಕ ತರಗತಿ ಇದೆ. ಒಟ್ಟು 29 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಆದರೆ ಶಾಲೆ ಪ್ರಾರಂಭಗೊಂಡು ಕೆಲವು ದಿನಗಳು ಕಳೆದರೂ ಇಂದಿಗೂ ಖಾಯಂ ಶಿಕ್ಷಕರು ಇಲ್ಲ. ಶಾಲೆಯ ಕಟ್ಟಡ ಹಾಗೂ ಮೇಲ್ಛಾವಣಿ ಆಗಲೋ ಈಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಶಾಲೆಯ ಒಳಗಡೆಯೇ ಹುತ್ತಗಳು. ಮಕ್ಕಳಿಗೆ ಊಟದ ಕೋಣೆ ಇಲ್ಲದೆ ಶಾಲೆಯ ವರಾಂಡದಲ್ಲಿಯೇ ಊಟ. ಮಳೆ ಬಂದರೆ ಊಟದ ತಟ್ಟೆಯ ಸಹಿತ ತರಗತಿಯ ಕೋಣೆಗೆ ಹೋಗಬೇಕಾದ ಸ್ಥಿತಿಯಾಗಿದೆ.
ಶಾಲೆ ಪ್ರಾರಂಭಗೊಂಡು ಕೆಲವು ದಿನಗಳು ಕಳೆದರೂ ಖಾಯಂ ಶಿಕ್ಷಕರು ಇಲ್ಲದಿರುವುದರಿಂದ ಶಾಲಾ ಎಸ್‌ಡಿಎಂಸಿ ಹಾಗೂ ಹೆತ್ತವರು ಶಾಲೆಗೆ ಶಿಕ್ಷಕರ ನೇಮಕಾತಿ ಮಾಡುವಂತೆ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಜಿ. ಕೊಡ್ಗಿ ಅವರಿಗೆ ಹಾಗೂ ಗ್ರಾ. ಪಂ.ಗೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಎ.ಜಿ. ಕೊಡ್ಗಿ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕೂಡಲೇ ಶಿಕ್ಷಕರ ಖಾಯಂ ನೇಮಕಾತಿ ಹಾಗೂ ಕಟ್ಟಡ ದುರಸ್ತಿ ಮಾಡಿಸುವಂತೆ ಸೂಚಿಸಿದರು. ಎ.ಜಿ. ಕೊಡ್ಗಿ ಅವರ ಮನವಿಗೆ ಸ್ಪಂದಿಸಿದ ಇಲಾಖೆ ಪ್ರತಿನಿಯುಕ್ತಿ ಶಿಕ್ಷಕ ಹಾಗೂ ಅತಿಥಿ ಶಿಕ್ಷಕಿಯರನ್ನು ನೇಮಿಸಿದರು. ಆದರೂ ಖಾಯಂ ಶಿಕ್ಷಕರು ಮಾತ್ರ ಇಂದಿಗೂ ನೇಮಕವಾಗಿಲ್ಲ.
ಶಿಕ್ಷಕರ ನೇಮಕಾತಿ ಇಲ್ಲದಿರುವುದರಿಂದ ಕೆಲಾ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ. ವರ್ಗಾವಣೆಯ ಮೂಲಕ ಯಾರೂ ಕೂಡ ಕೆಲಾ ಶಾಲೆಗೆ ಬರಲು ಒಪ್ಪುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರತಿನಿಯುಕ್ತಿ ಹಾಗೂ ಅತಿಥಿ ಶಿಕ್ಷಕರನ್ನು ಕೊಡಲು ಮಾತ್ರ ಸಾಧ್ಯ. ಅದರಂತೆ ಪ್ರತಿನಿಯುಕ್ತಿ ಶಿಕ್ಷಕ ಹಾಗೂ ಅತಿಥಿ ಶಿಕ್ಷಕಿಯರನ್ನು ನೇಮಿಸಿದ್ದೇವೆ. ಕಟ್ಟಡ ದುರಸ್ತಿಗಾಗಿ ತಾ. ಪಂ. ಸ್ಕೀಂನಲ್ಲಿ ಹಣ ನೀಡುವ ಬಗ್ಗೆ ಭರವಸೆಯಿತ್ತಿದ್ದೇವೆ. ಅಲ್ಲದೆ ಶಾಲೆಯ ಮೇಲ್ಛಾವಣಿ ದುರಸ್ತಿ ಮಾಡಿಸುವಂತೆ ಎಸ್‌ಡಿಎಂಸಿ ಅವರಿಗೆ ಹೇಳಿದ್ದೇವೆ.
-ದಿವಾಕರ ಶೆಟ್ಟಿ, ಜಿಲ್ಲಾ ಶಿಕ್ಷಣಾಧಿಕಾರಿ ಉಡುಪಿ
ಜಿಲ್ಲಾಧಿಕಾರಿಗಳು, ಜಿ. ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಶಿಕ್ಷಣಾಧಿಕಾರಿಗಳು ಈ ಹಿಂದೆ ಈ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಇಂದಿಗೂ ಶಾಲೆಗೆ ಖಾಯಂ ಶಿಕ್ಷಕ ನೇಮಕಾತಿ ಹಾಗೂ ಕಟ್ಟಡ ದುರಸ್ತಿ ನಡೆಸಲು ಸಾಧ್ಯವಾಗಿಲ್ಲ. ಈ ಬಾರಿಯೂ ಹಾಗೇ ಮುಂದುವರಿಯುವ ಲಕ್ಷಣ ಕಾಣುತ್ತಿದೆ. ಸಂಬಂಧಪಟ್ಟವರು ಕೂಡಲೇ ಶಿಕ್ಷಕರ ಖಾಯಂ ನೇಮಕಾತಿ ಹಾಗೂ ಕಟ್ಟಡ ದುರಸ್ತಿ ನಡೆಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ.
-ಚಂದ್ರ ಶೆಟ್ಟಿ ಕೆಲಾ, ಅಮಾಸೆಬೈಲು ಗ್ರಾ. ಪಂ. ಮಾಜಿ ಸದಸ್ಯ