Advertisement

ಖಾಯಂ ವೈದ್ಯರಿಲ್ಲ, ಆ್ಯಂಬುಲೆನ್ಸ್ ಕೂಡ ನಾಪತ್ತೆ!

11:32 AM Sep 23, 2018 | Team Udayavani |

ಬೆಳ್ಳಾರೆ: ಸುಳ್ಯ ತಾಲೂಕಿನ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರಿಲ್ಲದೆ ಬೆಳ್ಳಾರೆ ಹಾಗೂ ನೆರೆಯ ಗ್ರಾಮದ ರೋಗಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆರು ತಿಂಗಳಿಂದ ಇಲ್ಲಿ ಖಾಯಂ ವೈದ್ಯರಿಲ್ಲ. ಮಹಿಳಾ ವೈದ್ಯರೊಬ್ಬರು ಕೆಲವು ವರ್ಷಗಳಿಂದ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರೂ ಈಗ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿದ್ದರಿಂದ ಇಲ್ಲಿ ವೈದ್ಯರೇ ಇಲ್ಲದಂತಾಗಿದೆ.

Advertisement

ನಾಲ್ಕೈದು ವರ್ಷಗಳ ಹಿಂದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ದಿನದ 24 ಗಂಟೆಯೂ ಹೆರಿಗೆ ಮಾಡಿಸುವ ವ್ಯವಸ್ಥೆ ಹೊಂದಿತ್ತು. ಈಗ ಇಲ್ಲಿ ಖಾಯಂ ವೈದ್ಯರಿಲ್ಲದ ಕಾರಣ ಸಂಚಾರಿ ಗಿರಿಜನ ಘಟಕದ ಡಾ| ನಂದಕುಮಾರ್‌ ಹಾಗೂ ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಪಲ್ಲವಿ ಅವರು ವಾರದಲ್ಲಿ ತಲಾ ಮೂರು ದಿನ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಇಲಾಖೆಯ ಸಭೆ ಇತ್ಯಾದಿಗಳಿದ್ದರೆ ಬೆಳ್ಳಾರೆಯಲ್ಲಿ ವೈದ್ಯಕೀಯ ಸೇವೆ ಲಭ್ಯವಿರುವುದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಖಾಯಂ ವೈದ್ಯರಿದ್ದ ಸಂದರ್ಭದಲ್ಲಿ ನಿತ್ಯ ಸರಾಸರಿ 250 ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಈ ಸಂಖ್ಯೆ ತುಂಬಾ ಕಡಿಮೆಯಾಗಿದ್ದು, ಸರಾಸರಿ 50 ಜನರಷ್ಟೇ ಭೇಟಿ ಕೊಡುತ್ತಿದ್ದಾರೆ. ಉಳಿದವರೆಲ್ಲ ಅನಿವಾರ್ಯವಾಗಿ ಸುಳ್ಯ ಸಮುದಾಯ ಆರೋಗ್ಯ ಕೇಂದ್ರ ಅಥವಾ ಖಾಸಗಿ ಕ್ಲಿನಿಕ್‌ಗಳ ಕಡೆಗೆ ಮುಖ ಮಾಡಿದ್ದಾರೆ.

ಹುದ್ದೆಗಳು ಖಾಲಿ
ವೈದ್ಯಾಧಿಕಾರಿ, ಸ್ಟಾಫ್ ನರ್ಸ್‌, ಲ್ಯಾಬ್‌ ಟೆಕ್ನೀಶಿಯನ್‌, ಹಿರಿಯ ಆರೋಗ್ಯ ಸಹಾಯಕಿಯ ತಲಾ ಒಂದು ಹುದ್ದೆ, ಎ.ಎನ್‌. ಎಂ., ಗ್ರೂಪ್‌ ಡಿ ತಲಾ ಎರಡು ಹುದ್ದೆಗಳು ಖಾಲಿ ಇವೆ. ಲ್ಯಾಬ್‌ ಟೆಕ್ನೀಶಿಯನ್‌, ಇಬ್ಬರು ಗ್ರೂಪ್‌ ಡಿ ನೌಕರರನ್ನು ತಾತ್ಕಾಲಿಕ ನೆಲೆಯಲ್ಲಿ ಭರ್ತಿ ಮಾಡಿಕೊಳ್ಳಲಾಗಿದೆ. ಕೆಲವು ತಿಂಗಳಿಂದ ಬೆಳ್ಳಾರೆ ಪೇಟೆಯಲ್ಲಿ 108 ಆ್ಯಂಬುಲೆನ್ಸ್‌ ಇಲ್ಲ. ಸ್ಥಳೀಯ ಗ್ರಾ.ಪಂ. ಅಥವಾ ಆರೋಗ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಿಲ್ಲ. ಇದರಿಂದ ಬೇಸತ್ತಿರುವ ಜನರು ಇಲಾಖೆ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ವಾಣಿಜ್ಯ ಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಬೆಳ್ಳಾರೆ, ನೆರೆಯ ಹಲವು ಗ್ರಾಮಗಳಿಗೆ ವಿದ್ಯಾ ಕೇಂದ್ರವೂ ಆಗಿದೆ. ಪೇಟೆಗೆ ಬರುವ ಜನರು ಹಾಗೂ ವಾಹನಗಳ ಸಂಖ್ಯೆ ಹೆಚ್ಚಿದೆ. ಗ್ರಾಮದ ಜನಸಂಖ್ಯೆಯೂ ವೃದ್ಧಿಸುತ್ತಿದೆ. ಈ ಕಾರಣದಿಂದ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಓರ್ವ ಖಾಯಂ ವೈದ್ಯರನ್ನು ತತ್‌ಕ್ಷಣ ನೇಮಕ ಮಾಡಬೇಕು. 108 ಆ್ಯಂಬುಲೆನ್ಸ್‌ ಸೇವೆ ಮರು ಒದಗಿಸಿ ಕೊಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ಖಾಯಂ ವೈದ್ಯರು ಬೇಕು
ನಿಯೋಜನೆ ನೆಲೆಯಲ್ಲಿ ಇಬ್ಬರು ವೈದ್ಯರು ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು, ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಇಲ್ಲಿಗೆ ಒಬ್ಬರು ಖಾಯಂ ವೈದ್ಯರ ಅಗತ್ಯ ಇದೆ. ನಾನು ಆರೋಗ್ಯ ಇಲಾಖೆಗೆ ಅನೇಕ ಬಾರಿ ಪತ್ರ ಬರೆದಿದ್ದೇನೆ. ಇನ್ನು 15 ದಿವಸದಲ್ಲಿ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಬರುತ್ತಾರೆ ಎಂದು ಡಿಎಚ್‌ಒ ತಿಳಿಸಿದ್ದಾರೆ.
– ಶಕುಂತಳಾ ನಾಗರಾಜ್‌
 ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ

ಶೀಘ್ರ ಒದಗಿಸಿ
ಬೆಳ್ಳಾರೆ ಪ್ರಾ. ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರಿಲ್ಲದೆ ಜನರಿಗೆ ತೊಂದರೆಯಾಗಿದೆ. ಆರೋಗ್ಯ ಹದಗೆಟ್ಟರೆ ಸುಳ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ಬೆಳ್ಳಾರೆಯಲ್ಲಿ ಈಗ 108 ಆ್ಯಂಬುಲೆನ್ಸ್‌ ಸೇವೆಯೂ ಇಲ್ಲ. ನಮಗೆ ವೈದ್ಯರು ಹಾಗೂ ಆ್ಯಂಬುಲೆನ್ಸ್‌ ಸೇವೆ ಶೀಘ್ರ ಲಭಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ.
– ಪ್ರೇಮಚಂದ್ರ ಬೆಳ್ಳಾರೆ, ಸ್ಥಳೀಯರು

ನಿರೀಕ್ಷೆ ಇದೆ
108 ಆ್ಯಂಬುಲೆನ್ಸ್‌ ಬಗ್ಗೆ ನಮಗೆ ಮಾಹಿತಿ ಇಲ್ಲ. ಸದ್ಯದಲ್ಲಿ ಬೆಳ್ಳಾರೆಗೆ ವೈದ್ಯರ ನೇಮಕ ಆಗಬಹುದು ಎನ್ನುವ ನಿರೀಕ್ಷೆ ಇದೆ.
– ಡಾ| ಸುಬ್ರಹ್ಮಣ್ಯ, ಸುಳ್ಯ ತಾಲೂಕು ವೈದ್ಯಾಧಿಕಾರಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next