ಬೆಂಗಳೂರು: ರಾಜ್ಯದ ಬಹುತೇಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸ್ಥಿತಿ “ನಾವಿಕನಿಲ್ಲದ ದೋಣಿ’ಯಂತಾಗಿದೆ. ರಾಜ್ಯದ 1,204 ಸರ್ಕಾರಿ ಪಿಯು ಕಾಲೇಜುಗಳ ಪೈಕಿ 300ಕ್ಕೂ ಅಧಿಕ ಪಿಯು ಕಾಲೇಜಿನಲ್ಲಿ ಖಾಯಂ ಪ್ರಾಂಶುಪಾಲರಿಲ್ಲ. ಹಂಗಾಮಿ ಪ್ರಾಂಶುಪಾಲರೇ ಕಾಲೇಜಿನ ಶಿಕ್ಷಣ ಹಾಗೂ ಆಡಳಿತಾತ್ಮಕ ವ್ಯವಸ್ಥೆ ನಿಭಾಯಿಸುವಂತಾಗಿದೆ.
ಕಳೆದ ವರ್ಷ 400 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪ್ರಾಂಶುಪಾಲರು ಇರಲಿಲ್ಲ. ಇತ್ತೀಚೆಗೆ ನಡೆದ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿ ಜೇಷ್ಠತೆಯ ಆಧಾರದಲ್ಲಿ ಸುಮಾರು 200 ಹಿರಿಯ ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ನೀಡಲಾಗಿದೆ. ಈಗ ಸುಮಾರು 300ಕ್ಕೂ ಅಧಿಕ ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿಯಾಗಿದೆ.
ನೇರ ನೇಮಕಾತಿಗೆ ಪ್ರಸ್ತಾವನೆ: ಸರ್ಕಾರಿ ಪಿಯು ಕಾಲೇಜಿನಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗೆ ನೇರ ನೇಮಕಾತಿ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಕಳೆದ ವರ್ಷ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯದಲ್ಲಿ 1969ರಿಂದ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆಗೆ ನೇರ ನೇಮಕಾತಿ ನಡೆದಿಲ್ಲ.
ಪ್ರಾಂಶುಪಾಲರ ನಿವೃತ್ತಿ ಸೇರಿ ವಿವಿಧ ಕಾರಣಗಳಿಂದ ತೆರವಾದ ಹುದ್ದೆಗೂ ನೇಮಕಾತಿ ಮಾಡಿಕೊಂಡಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಪ್ರಾಂಶುಪಾಲರ ಖಾಲಿ ಹುದ್ದೆಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೈದರಾಬಾದ್ ಕರ್ನಾಟಕ ಭಾಗದ 50ಕ್ಕೂ ಅಧಿಕ ಕಾಲೇಜಿನಲ್ಲಿ ಪ್ರಾಂಶುಪಾಲರ ಹುದ್ದೆ ಖಾಲಿ ಇದೆ.
ಪ್ರಾಂಶುಪಾಲರ ನೇರ ನೇಮಕಾತಿಗಾಗಿ ಪ್ರಸ್ತಾವನೆಯನ್ನು ಕೆಪಿಎಸ್‌ಸಿಗೆ ಸಲ್ಲಿಸಿದ್ದೇವೆ. ಆದರೆ,ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಾಂಶುಪಾಲರ ಹುದ್ದೆ ಖಾಲಿ ಇರುವ ಕಾಲೇಜುಗಳಲ್ಲಿ ಹಂಗಾಮಿ ಪ್ರಾಂಶುಪಾಲರ ನೇಮಕ ಮಾಡಿದ್ದೇವೆ. ಪ್ರವೇಶಾತಿ ಸೇರಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಕಾರ್ಯ ಚಟುವಟಿಕೆಗಳು ಅವರ ಮೇಲುಸ್ತುವಾರಿಯಲ್ಲಿ ನಡೆಯುತ್ತಿವೆ.
-ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ