Advertisement

ಹಲವು ಅಂಗನವಾಡಿಗಳಲ್ಲಿ ಮಕ್ಕಳೇ ಇಲ್ಲ

02:27 PM May 01, 2019 | Team Udayavani |

ಕೋಲಾರ: ಅಧಿಕಾರಿಗಳು ಅಂಗನವಾಡಿಗಳಲ್ಲಿನ ಮಕ್ಕಳ ಸಂಖ್ಯೆಯ ಕುರಿತು ತಪ್ಪು ಮಾಹಿತಿ ನೀಡುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ, ಕನಿಷ್ಠ 10 ಕೇಂದ್ರಗಳಲ್ಲಿ ನೀವು ನೀಡುವ ಸಂಖ್ಯೆಗೆ ಅನುಗುಣವಾಗಿ ಹಾಜರಾತಿ ತೋರಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಡಿಎಚ್ಒ ಕಚೇರಿಯಲ್ಲಿ ಮಂಗಳವಾರ ನಡೆದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಮಕ್ಕಳ ಆರೋಗ್ಯ ಕಾಪಾಡಲು ಸಮೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಗಿತ್ತು. ಆದರೆ, ಯಾವ ತಾಲೂಕಿನಲ್ಲಿಯೂ ಸಮರ್ಪಕವಾದ ಮಾಹಿತಿ ನೀಡಿಲ್ಲ, ಬೇಕಾಬಿಟ್ಟಿ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಮಕ್ಕಳ ಬಗ್ಗೆ ಮಾಹಿತಿ ನೀಡಲ್ಲ: ಅಧಿಕಾರಿಗಳು ಈ ಮಟ್ಟಕ್ಕೆ ನಿರ್ಲಕ್ಷ್ಯವಹಿಸಿ ಶೇ.60-70ರಷ್ಟು ಪ್ರಗತಿ ತೋರಿಸಿದರೆ ನಿಮ್ಮಿಂದಾಗಿ ನಾವು ರಾಜ್ಯ ಮಟ್ಟದಲ್ಲಿ ತಲೆತಗ್ಗಿಸಬೇಕಾಗಿದೆ, ಅದಕ್ಕೆ ನಾನು ಸಿದ್ಧವಿಲ್ಲ. ಅಂಗನವಾಡಿಗಳಲ್ಲಿ ಮಕ್ಕಳನ್ನು ನಿರ್ಲಕ್ಷ್ಯ ಮಾಡದಂತೆ ಈಗಾಗಲೇ ಕಾರ್ಯಕರ್ತೆಯರ ವಿರುದ್ಧ ಕ್ರಮಕೈಗೊಂಡು ಸಾಕಾಗಿದೆ, ಆದರೂ ಪ್ರಯೋಜನವಾಗಿಲ್ಲ. ನಾನು ಬಂದಾಗಿನಿಂದಲೂ ಸುಮಾರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದು, ಅನೇಕ ಕಡೆಗಳಲ್ಲಿ ಮಕ್ಕಳೇ ಇರುವುದಿಲ್ಲ, ಇನ್ನೂ ಹಲವೆಡೆ ಬೀಗ ಹಾಕಲಾಗಿರುತ್ತದೆ. 2-3 ಮಕ್ಕಳಿದ್ದು, ಅವರ ಹೆಸರನ್ನು ಕೇಳಿದರೂ ಕಾರ್ಯಕರ್ತೆಯರು ಹೇಳುವುದಿಲ್ಲ ಎಂದರೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಆದರೆ, ನೀವು ಹೋದಾಗ ಮಾತ್ರ ಮಕ್ಕಳಿರುತ್ತಾರೆಯೇ ಎಂದು ಪ್ರಶ್ನಿಸಿದರು.

ಮಕ್ಕಳನ್ನು ತೋರಿಸಲು ಸವಾಲು: ನಮ್ಮ ಕಣ್ಣೆದುರೇ ಇಷ್ಟು ಮೋಸ, ಅನ್ಯಾಯ ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನಿರುವುದಕ್ಕೆ ಆಗುವುದೇ ಇಲ್ಲ. ಇನ್ನು ಮುಂದೆ ಕಾರ್ಯಕರ್ತೆಯರನ್ನು ನಾನು ಮಾತನಾಡಿಸುವುದಿಲ್ಲ. ನೇರವಾಗಿ ಸಿಡಿಪಿಒಗಳನ್ನೇ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಸಿ, ವಾಹನ ವ್ಯವಸ್ಥೆ ಮಾಡಿ ನಿಮ್ಮನ್ನೇ ಕರೆದುಕೊಂಡು ಹೋಗುತ್ತೇವೆ, ಮಾಹಿತಿಯಲ್ಲಿರುವಂತೆ ಮಕ್ಕಳನ್ನು ತೋರಿಸಿ ಎಂದು ಸವಾಲು ಹಾಕಿದರು.ಇಂತಹ ನಿರ್ಲಕ್ಷ್ಯತನದ ಕೆಲಸ ಬಿಟ್ಟು ಶೇ.100 ಮಕ್ಕಳನ್ನೂ ಯೋಜನೆಗಳ ವ್ಯಾಪ್ತಿಗೆ ಒಳಪಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಡಿಎಚ್ಒ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌, ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಹತ್ತಿರ ಬಂದ್ರೆ ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಅಂತ ಹೆದರಿಸ್ತಾರೆ:

ಎಚ್ಐವಿ ಪೀಡಿತರನ್ನು ಎಆರ್‌ಟಿ ಚಿಕಿತ್ಸೆಗೆ ಒಳಪಡಿಸುವ ಕುರಿತು ಪ್ರಾಮಾಣಿಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲವರು ಚಿಕಿತ್ಸೆಯನ್ನು ನಿರಾಕರಿಸುತ್ತಿದ್ದಾರೆ, ಮನೆ ಬಳಿಗೆ ಅಧಿಕಾರಿಗಳು ಬಂದರೆ ಬೆಂಕಿ ಹಚ್ಚಿಕೊಂಡು ಸಾಯುತ್ತೇವೆ ಎಂದು ಎಚ್ಚರಿಕೆಗಳನ್ನು ನೀಡುತ್ತಾರೆ ಎಂದು ಅಂಗನವಾಡಿ ಅಧಿಕಾರಿಗಳು ಸಿಇಒ ಜಗದೀಶ್‌ ಅವರ ಗಮನಕ್ಕೆ ತಂದರು.

ಜಿಲ್ಲೆಯಲ್ಲಿ 80 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ನಾವು ಮನೆ ಮನೆಗೂ ಭೇಟಿ ನೀಡಿದ್ದೇವೆ. ಮಾಹಿತಿಯನ್ನು ಅನೇಕರು ಸ್ಪಂದಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಾತ್ರೆ ಸೇವನೆಯಿಂದಾಗಿ ತಮಗೆ ಅಡ್ಡಪರಿಣಾಮಗಳಾಗುತ್ತವೆ ಎನ್ನುವ ಕಾರಣಕ್ಕಾಗಿ ಅನೇಕರು ಹಿಂಜರಿಯುತ್ತಿದ್ದಾರೆ ಎಂದು ವಿವರಿಸಿದರು.

ಜಾಗೃತಿ ಮೂಡಿಸಿ: ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಜಿಪಂ ಸಿಇಒ ಜಿ.ಜಗದೀಶ್‌, ಅವರಿಗೆ ಸೌಲಭ್ಯಗಳನ್ನು ನಾವೇ ಕಲ್ಪಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ನಾನು ಸಹ ನಿಮ್ಮೊಂದಿಗೆ ಬರುತ್ತೇನೆ, ಜಾಗೃತಿ ಮೂಡಿಸಿ ಚಿಕಿತ್ಸೆಗೆ ಒಳಪಡಿಸೋಣ ಎಂದು ಹೇಳಿದರು.

ಎಚ್ಐವಿ ಸೋಂಕಿತರ ಕುರಿತು ಕೇವಲ ಸರಕಾರಿ ಆಸ್ಪತ್ರೆಗಳಿಂದ ಮಾಹಿತಿ ಪಡೆಯುವುದಲ್ಲ. ಖಾಸಗಿ ಆಸ್ಪತ್ರೆಗಳಿಂದಲೂ ಪಡೆದುಕೊಳ್ಳಬೇಕಾಗಿದ್ದು, ಒಂದು ವೇಳೆ ನೀಡದಿದ್ದರೆ ಮುಲಾಜಿಲ್ಲದೆ ನೋಟಿಸ್‌ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಎಲ್ಲಾ ಲ್ಯಾಬ್‌ಗಳಲ್ಲಿಯೂ ಈ ಪರೀಕ್ಷೆ ನಡೆಸಲು ಕ್ರಮಕೈಗೊಳ್ಳುವಂತೆ ಹೇಳಿದರು. 40 ಮಂದಿ ಎಚ್ಐವಿ ಸೋಂಕಿತರು ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಅರ್ಜಿ ಹಾಕಿಕೊಂಡಿದ್ದು, ತಪ್ಪದೇ ಅವರಿಗೆ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಪಡಿತರಚೀಟಿ, ಸಾಲ ಸೌಲಭ್ಯ, ಸಹಾಯಧನ ಸೇರಿದಂತೆ ಎಲ್ಲವನ್ನೂ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next