ನಗರದ ಅನೇಕ ಕಡೆಗಳಲ್ಲಿ ಬಸ್ ನಿಲ್ದಾಣವಿಲ್ಲ. ಆದರೆ, ಅಲ್ಲಿ ಸಾಲುಗಟ್ಟಿ ಪ್ರಯಾಣಿಕರು ಬಸ್‌ಗೆ ಕಾಯುತ್ತಿರುತ್ತಾರೆ. ಪಂಪ್‌ವೆಲ್ ಬಸ್ ನಿಲ್ದಾಣದ ಅವ್ಯವಸ್ಥೆ ಹೇಳತೀರದು. ಇಲ್ಲಿ ಬಸ್ ನಿಲ್ದಾಣವಿದೆ. ಆದರೆ ಹೆಚ್ಚಿನ ಪ್ರಯಾಣಿಕರು ಅಲ್ಲಿ ಬಸ್‌ಗೆ ಕಾಯುವುದಿಲ್ಲ. ಬದಲಾಗಿ ಅಲ್ಲೇ ಪಕ್ಕದಲ್ಲಿ ರಸ್ತೆ ಬದಿಯಲ್ಲಿ ನಿಲ್ಲುತ್ತಾರೆ. ಇದೇ ಕಾರಣಕ್ಕೆ ಅನೇಕ ಬಸ್‌ಗಳು ಬಸ್ ನಿಲ್ದಾಣದಲ್ಲಿ ನಿಲ್ಲದೆ, ಪಕ್ಕದ ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತದೆ. ಇದರಿಂದಾಗಿ ಪಂಪ್‌ವೆಲ್‌ನಲ್ಲಿ ಸದಾ ಟ್ರಾಫಿಕ್ ಜಾಮ್ ಕಿರಿ ಕಿರಿ ತಪ್ಪಿದ್ದಿಲ್ಲ.
ಮಂಗಳೂರಿನ ಹೃದಯ ಭಾಗದಂತಿರುವ ಕಂಕನಾಡಿಯಲ್ಲೂ ಇದೇ ಕಥೆ. ಇಲ್ಲಿನ ವೃತ್ತದಿಂದ ಸ್ವಲ್ಪ ದೂರದಲ್ಲಿ ಚಿಕ್ಕ ಬಸ್ ನಿಲ್ದಾಣವಿದೆ. ಆದರೆ, ಇಲ್ಲಿ ಬಸ್ ನಿಲ್ಲುವುದು ಅಪುರೂಪ. ಅದರ ಬದಲು ಸುಲ್ತಾನ್ ಗೋಲ್ಡ್ ಅಂಗಡಿಯ ಬಳಿ ನೂರಾರು ಪ್ರಯಾಣಿಕರು ನಿಂತಿರುತ್ತಾರೆ. ಆದರೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೇ ಕಾಣುವುದಿಲ್ಲ.
ಜ್ಯೋತಿ ವೃತ್ತದಿಂದ ಪಿವಿಎಸ್ ಕಡೆಗೆ ತೆರಳುವ ಮಾರ್ಗದಲ್ಲಿ (ಹೋಟೆಲ್ ಮಹಾರಾಜ ಬಳಿ) ಬಸ್ ನಿಲ್ದಾಣವಿದೆ. ಆದರೆ ಅಲ್ಲಿ, ನಿಲ್ಲಲು ಸ್ಥಳವಿಲ್ಲದೆ ಪಕ್ಕದ ರಸ್ತೆ ಬದಿಯಲ್ಲಿಯೇ ಪ್ರಯಾಣಿರು ನಿಂತಿರುತ್ತಾರೆ.
ನಗರದ ಅನೇಕ ಬಸ್ ನಿಲ್ದಾಣಗಳು ಪ್ರಚಾರದ ತಾಣವಾಗಿ ಮಾರ್ಪಟ್ಟಿರುವುದು ವಿಪರ್ಯಾಸ. ನಗರದ ಜ್ಯೋತಿ, ಅಳಪೆ ಸಹಿತ ವಿವಿಧ ಬಸ್ ನಿಲ್ದಾಣಗಳಲ್ಲಿ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆ, ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದರಿಂದ ಬಸ್ ನಿಲ್ದಾಣಗಳು ಗಲೀಜಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
– ನವೀನ್ ಭಟ್, ಇಳಂತಿಲ