ಬೀದರ್: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಕಟ್ಟಡ ಹಾಗೂ ಸುಸಜ್ಜಿತ ಹೆರಿಗೆ ಕೋಣೆಯೂ ಸಿದ್ಧವಾಗಿದೆ. ಆದರೆ ಹೆರಿಗೆಗಾಗಿ ಯಾರೂ ದಾಖಲಾಗುತ್ತಿಲ್ಲ. ಇದಕ್ಕೆ ಕಾರಣ ಪಕ್ಕದಲ್ಲೇ ಇರುವ ಶ್ಮಶಾನ!
ಇದು ಬೀದರ್ ತಾಲೂಕಿನ ಬಗದಲ್ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ಕಾಡುತ್ತಿರುವ “ಮೌಡ್ಯ’ದ ಸಮಸ್ಯೆ.
ಬಗದಲ್ ಸಮುದಾಯ ಆರೋಗ್ಯ ಕೇಂದ್ರ ಸುತ್ತಲಿನ 12 ಗ್ರಾಮ ಮತ್ತು ಮೂರು ತಾಂಡಾಗಳ ವ್ಯಾಪ್ತಿ ಹೊಂದಿದೆ. ಇಲ್ಲಿ 35 ಸಾವಿರ ಜನಸಂಖ್ಯೆ ಇದೆ. ಈ ಕೇಂದ್ರದ ಪಕ್ಕದಲ್ಲೇ ಶ್ಮಶಾನವಿದೆ. ಈ ಕಾರಣಕ್ಕೆ ಗರ್ಭಿಣಿಯರು ಹೆರಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಈವರೆಗೂ ಒಂದೂ ಹೆರಿಗೆ ಆಗಿಲ್ಲ. ಈ ಆಸ್ಪತ್ರೆಯಲ್ಲಿ ಮಗು ಜನಿಸಿದರೆ ಭವಿಷ್ಯದಲ್ಲಿ ಅದಕ್ಕೆ ಕೇಡಾಗುತ್ತದೆ ಎಂಬ ಆತಂಕ ಅವರಲ್ಲಿ ಇದ್ದಂತಿದೆ.
ಹೋಬಳಿ ಕೇಂದ್ರವಾದ ಬಗದಲ್‌ದಲ್ಲಿ ಈ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಕಟ್ಟಡ ಶಿಥಿಲಗೊಂಡಿದ್ದರಿಂದ 3 ವರ್ಷ ಹಿಂದೆ ಗ್ರಾಮ ದಿಂದ 2 ಕಿ.ಮೀ. ದೂರದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಹೊಸ ಆರೋಗ್ಯ ಕೇಂದ್ರ ನಿರ್ಮಿಸಲಾಗಿದೆ. ಈ ಮೊದಲು ಸಂಪರ್ಕ ರಸ್ತೆ ಇಲ್ಲದೆ ಬೀಗ ಜಡಿಯಲಾಗಿತ್ತು. ಈಗ ರಸ್ತೆ ನಿರ್ಮಾಣಗೊಂಡು ಆಸ್ಪತ್ರೆ ಉದ್ಘಾಟನೆಗೊಂ ಡಿದೆ. ಆದರೆ ಇದು ಕೇವಲ ಜ್ವರ, ಕೆಮ್ಮು ಮತ್ತು ಶೀತದಂತಹ ಸಾಮಾನ್ಯ ರೋಗಿಗಳ ಚಿಕಿತ್ಸೆಗಷ್ಟೇ ಸೀಮಿತವಾಗಿದೆ.
ಸದ್ಯ ಹಳೆಯ ಶಿಥಿಲ ಕಟ್ಟಡದಲ್ಲೇ ಹೆರಿಗೆ ಮಾಡಿಸಲಾಗುತ್ತಿದೆ. ಗರ್ಭಿಣಿಯರು ಬಂದಾಗ ದೂರದ ಹೊಸ ಕಟ್ಟಡದಿಂದ ವೈದ್ಯರು ಮತ್ತು ಆರೋಗ್ಯ ಸಿಬಂದಿ ಇಲ್ಲಿಗೆ ಬರುತ್ತಾರೆ. ಈ ಮೊದಲು ತಿಂಗಳಿಗೆ 30ಕ್ಕೂ ಹೆಚ್ಚು ಹೆರಿಗೆ ಗಳು ಆಗುತ್ತಿದ್ದವು. ಈಗ 15 ಕೂಡ ಆಗು ತ್ತಿಲ್ಲ. ಶ್ಮಶಾನದ ಕಾರಣ ಹೊಸ ಕಟ್ಟಡಕ್ಕೆ ಹಾಗೂ ಶಿಥಿಲ-ಅವ್ಯವಸ್ಥೆ ಕಾರಣ ಹಳೆಯ ಕಟ್ಟಡಕ್ಕೆ ಗರ್ಭಿಣಿಯರು ಬರುತ್ತಿಲ್ಲ.
ಹೊಸ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸಲು ಆರೋಗ್ಯ ಸಿಬಂದಿ ಮುಂದಾದರೂ ಗ್ರಾಮಸ್ಥರು ಅದಕ್ಕೊಪ್ಪುತ್ತಿಲ್ಲ. ಗ್ರಾಮಸಭೆ, ಆರೋಗ್ಯ ಮೇಳದಂಥ ಕಾರ್ಯ ಕ್ರಮಗಳಲ್ಲಿ ಅಧಿ ಕಾರಿಗಳು ಮೌಡ್ಯತೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದರೂ ಜನ ಮಾತ್ರ ಸ್ಪಂದಿಸುತ್ತಿಲ್ಲ. ಹಳೆ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲವೇ ಮನ್ನಾಎಖೆಳ್ಳಿ ಅಥವಾ ಬೀದರ್ ಸರಕಾರಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಜನರಲ್ಲಿರುವ ಮೌಡ್ಯತೆ ಆರೋಗ್ಯ ಇಲಾಖೆ ಯನ್ನು ಪೇಚಿಗೆ ಸಿಲುಕಿಸಿದೆ. ಹೈಟೆಕ್ ಆರೋಗ್ಯ ಕೇಂದ್ರ ನಿರುಪಯುಕ್ತವಾಗುತ್ತಿದೆ.
ಬಗದಲ್ ಹೊರವಲಯದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿ ಸಲಾಗಿದೆ. ಪಕ್ಕದಲ್ಲೇ ಶ್ಮಶಾನವಿರುವ ಕಾರಣ ಗರ್ಭಿಣಿಯರು ಬರುತ್ತಿಲ್ಲ. ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿಲ್ಲ. ಸದ್ಯ ಹಳೆ ಕೇಂದ್ರದಲ್ಲೇ ಹೆರಿಗೆ ಮಾಡಿಸಲಾಗುತ್ತಿದೆ.
– ಡಾ| ಸಂದೀಪ ಘೋಡೆ, ಆರೋಗ್ಯಾಧಿಕಾರಿ, ಬಗದಲ್
ಶಶಿಕಾಂತ ಬಂಬುಳಗೆ