Advertisement

ಕಾಲೇಜು ವಿದ್ಯಾರ್ಥಿಗಳಿಗಿಲ್ಲ ಬಿಸಿಎಂ ಹಾಸ್ಟೆಲ್‌ ಸೌಲಭ್ಯ

03:30 PM Jan 07, 2020 | Suhan S |

ಮೊಳಕಾಲ್ಮೂರು: ಪಟ್ಟಣ ಹಾಗೂ ತಾಲೂಕಿನ ವಿವಿಧೆಡೆ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿನಿಲಯಗಳಿವೆ. ಆದರೆ ಬಾಲಕರ ಬಿಸಿಎಂ ಕಾಲೇಜು ಹಾಸ್ಟೆಲ್‌ ಸೌಲಭ್ಯ ಮಾತ್ರ ಇಲ್ಲ. ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬಾಲಕರ ಬಿಸಿಎಂ ಕಾಲೇಜು ಹಾಸ್ಟೆಲ್‌ ಸೌಲಭ್ಯವಿಲ್ಲದೆ ಬಹುತೇಕ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಲು ಸಂಕಷ್ಟ ಅನುಭವಿಸುವಂತಾಗಿದೆ.

Advertisement

ಹಿಂದುಳಿದ ವರ್ಗಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಹಲವಾರು ಹಾಸ್ಟೆಲ್‌ಗ‌ಳಿವೆ. ಪಟ್ಟಣದಲ್ಲಿ ಸರ್ಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌, ಸರ್ಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕಿಯರ ಹಾಸ್ಟೆಲ್‌, ಸರ್ಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕಿಯರ ಹಾಸ್ಟೆಲ್‌, ತಾಲೂಕಿನ ಹಾನಗಲ್‌ನಲ್ಲಿ ಸರ್ಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌, ಕೊಂಡ್ಲಹಳ್ಳಿಯಲ್ಲಿ ಸರ್ಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ಹಾಸ್ಟೆಲ್‌ ಹಾಗೂ ಬಿ.ಜಿ. ಕೆರೆ ಗ್ರಾಮದಲ್ಲಿ ಸರ್ಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕರ ಹಾಸ್ಟೆಲ್‌ಗ‌ಳನ್ನು ಪ್ರಾರಂಭಿಸಲಾಗಿದೆ. ಆದರೆ ಹೆಚ್ಚಿನ ಜನಸಂಖ್ಯೆ ಇರುವ ರಾಂಪುರ, ನಾಗಸಮುದ್ರ ಮತ್ತು  ದೇವಸಮುದ್ರ ಗ್ರಾಮಗಳಲ್ಲಿ ಬಿಸಿಎಂ ಹಾಸ್ಟೆಲ್‌ ಸೌಲಭ್ಯ ಇಲ್ಲ.

ಪ್ರತಿ ವರ್ಷ ಮೆಟ್ರಿಕ್‌ಪೂರ್ವ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ತಾಲೂಕು ಕೇಂದ್ರ ಇಲ್ಲವೇ ದೂರದ ಊರುಗಳಿಗೆ ತೆರಳಿ ವ್ಯಾಸಂಗ ಮುಂದುವರೆಸಬೇಕಿದೆ. ಹಿಂದುಳಿದ ವರ್ಗದ ಜನಸಂಖ್ಯೆಯನ್ನು ಹೆಚ್ಚು ಹೊಂದಿರುವ ಪ್ರದೇಶಗಳಲ್ಲಿ ಬಾಲಕರ ಬಿಸಿಎಂ ಕಾಲೇಜು ಹಾಸ್ಟೆಲ್‌ ಸೌಲಭ್ಯ ಕಲ್ಪಿಸುವಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿರ್ಲಕ್ಷ್ಯ ತಾಳಿದೆ.

ತಾಲೂಕಿನಲ್ಲಿ ಇದುವರೆಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಮೆಟ್ರಿಕ್‌ ನಂತರ ಪಿಯುಸಿ, ಪದವಿ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡಲು ಆಗುತ್ತಿಲ್ಲ. ಇದರಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಲಿದೆ. ತಾಲೂಕಿನಲ್ಲಿ ಬಾಲಕರ ಬಿಸಿಎಂ ಕಾಲೇಜ್‌ ಹಾಸ್ಟೆಲ್‌ ಸೌಲಭ್ಯವಿಲ್ಲದ ಕಾರಣ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿ ಪ್ರತಿ ವರ್ಷ ದೂರದ ಬೆಂಗಳೂರು, ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಹಾಗೂ ಇನ್ನಿತರ ದೂರದ ನಗರ ಪ್ರದೇಶಗಳಿಗೆ ಕಳುಹಿಸುವ ದುಸ್ಥಿತಿ ನಿರ್ಮಾಣವಾಗಿದೆ. ಕ್ಷೇತ್ರದ ಶಾಸಕರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಬಾಲಕರ ಬಿಸಿಎಂ ಕಾಲೇಜು ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.

ಮೊಳಕಾಲ್ಮೂರು ಪಟ್ಟಣ ಹಾಗೂ ರಾಂಪುರದಲ್ಲಿ ಬಾಲಕರ ಬಿಸಿಎಂ ಕಾಲೇಜು ಹಾಸ್ಟೆಲ್‌ ಮಂಜೂರಾತಿಗಾಗಿ ಸಚಿವ ಬಿ. ಶ್ರೀರಾಮುಲು ಅವರ ಗಮನಕ್ಕೆ ತರುತ್ತೇವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.- ಅವೀನ್‌, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ

Advertisement

 

ಎಸ್‌. ರಾಜಶೇಖರ

Advertisement

Udayavani is now on Telegram. Click here to join our channel and stay updated with the latest news.

Next