ಹುಬ್ಬಳ್ಳಿ: ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಾದ ಸ್ಟೇಶನ್ ರಸ್ತೆ, ಸಿಬಿಟಿ, ಶಾ ಬಝಾರ, ಬಾಕಳೆ ಗಲ್ಲಿ ಕ್ರಾಸ್, ಗವಳಿ ಗಲ್ಲಿ, ದುರ್ಗದ ಬಯಲು, ಎಂ.ಜಿ. ಮಾರ್ಕೆಟ್ ಪ್ರದೇಶಗಳಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿದ್ದ ಅನಧಿಕೃತ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ಸೋಮವಾರ ಬೆಳಗ್ಗೆ ತೆರವುಗೊಳಿಸಿದರು. ಪೊಲೀಸ್ ಬಂದೋಬಸ್ತ್ನೊಂದಿಗೆ ಕಾರ್ಯಾಚರಣೆ ನಡೆಸಿ 180ಕ್ಕೂ ಅಧಿಕ ಕಾಯಂ ಆಗಿ ನಿರ್ಮಿಸಿದ್ದ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಅವರ ನೇತೃತ್ವದಲ್ಲಿ ವಲಯ ನಂ.8ರಲ್ಲಿ ಸಹಾಯಕ ಆಯುಕ್ತ ಎಸ್.ಎನ್. ಗಣಾಚಾರಿ ಅವರೊಂದಿಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಗದಗ ರಸ್ತೆಯ ರೈಲ್ವೆ ಕೆಳ ಸೇತುವೆ, ರೈಲ್ವೆ ನಿಲ್ದಾಣ ರಸ್ತೆ, ಬಾಕಳೆ ಗಲ್ಲಿ ಕ್ರಾಸ್, ಸಿಬಿಟಿ, ಶಾ ಬಝಾರ, ಗವಳಿ ಗಲ್ಲಿ ಪ್ರದೇಶಗಳಲ್ಲಿ ರಸ್ತೆಯ ಎರಡು ಬದಿಯ ಜಾಗ ಹಾಗೂ ಪಾದಚಾರಿ ಮಾರ್ಗ ಅತಿಕ್ರಮಿಸಿ ನಿರ್ಮಿಸಲಾಗಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ಕೆಲ ಅಂಗಡಿಕಾರರು ಅಂಗಡಿಗಳನ್ನು ತೆರವುಗೊಳಿಸದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದರು. ಆದರೆ ಅಧಿಕಾರಿಗಳು ಇದ್ಯಾವುದಕ್ಕೂ ಕ್ಯಾರೆ ಎನ್ನದೆ ತಮ್ಮ ಕಾರ್ಯ ಮುಂದುವರೆಸಿ ಜೆಸಿಬಿ ಯಂತ್ರಗಳ ಸಹಾಯದಿಂದ 50ಕ್ಕೂ ಅಧಿಕ ಅಂಗಡಿಗಳನ್ನು ತೆರವುಗೊಳಿಸಿದರು.
ಅದೇ ರೀತಿ ವಲಯ ನಂ.9ರಲ್ಲಿ ಸಹಾಯಕ ಆಯುಕ್ತ ಸುಭಾಸ ಕಾಂಬ್ಳಿ ನೇತೃತ್ವದಲ್ಲಿ ದುರ್ಗದ ಬಯಲು, ಎಂ.ಜಿ. ಮಾರ್ಕೆಟ್ ನಲ್ಲಿ ಕಾರ್ಯಾಚರಣೆ ನಡೆಸಿ 40ಕ್ಕೂ ಅಧಿಕ ಅಂಗಡಿಗಳನ್ನು ತೆರವುಗೊಳಿಸಲಾಯಿತು. ವಲಯ ನಂ.4ರಲ್ಲಿ 2, 5ರಲ್ಲಿ 25, 6 ಮತ್ತು 8ರಲ್ಲಿ 50, 7ರಲ್ಲಿ 19, 9ರಲ್ಲಿ 40, 10ರಲ್ಲಿ 8, 11ರಲ್ಲಿ 37 ಅಂಗಡಿಗಳನ್ನು ತೆರವುಗೊಳಿಸಿದರು.
ಪಾಲಿಕೆಯವರು ತೆರವು ಕಾರ್ಯಾಚರಣೆ ಕೈಗೊಳ್ಳುತ್ತಾರೆಂದು ಮೊದಲೇ ಅರಿತಿದ್ದ ಕೆಲ ಅಂಗಡಿಕಾರರು ರವಿವಾರವೇ ಅಂಗಡಿಗಳಲ್ಲಿನ ಸಾಮಗ್ರಿಗಳನ್ನೆಲ್ಲ ತೆಗೆದು ಖಾಲಿ ಮಾಡಿದ್ದರು. ತಳ್ಳುವ ಗಾಡಿಯವರು ಸ್ವಯಂಆಗಿ ಅಂಗಡಿಗಳನ್ನು ತೆರವುಗೊಳಿಸಿಕೊಂಡಿದ್ದರು. ಇನ್ನುಳಿದಂತೆ ಸೋಮವಾರ ಬೆಳಗ್ಗೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿರುವುದನ್ನು ಕಂಡ ಕೆಲ ಅಂಗಡಿಕಾರರು ತಮ್ಮ ಅಂಗಡಿಗೆ ಬರುವುದರೊಳಗೆ ಎಲ್ಲ ಸಾಮಗ್ರಿಗಳನ್ನು ತಾವೇ ಸ್ವತಃ ತೆರವುಗೊಳಿಸಿಕೊಳ್ಳುತ್ತಿರುವುದು ಕಂಡುಬಂತು.
ಕಾರ್ಯಾಚರಣೆಗೆ ಪೊಲೀಸ್ ಬಿಗಿ ಬಂದೋಬಸ್ತ್ ನೀಡಲಾಗಿತ್ತು. ಎಸಿಪಿಗಳಾದ ಬಿ.ಬಿ. ಪಾಟೀಲ, ಎಸ್.ಬಿ. ಖವಾಸ್ ನೇತೃತ್ವದಲ್ಲಿ ಶಹರ ಠಾಣೆ ಇನ್ ಸ್ಪೆಕ್ಟರ್ ಶಿವಾನಂದ ಚಲವಾದಿ, ಘಂಟಿಕೇರಿ ಠಾಣೆ ಇನ್‌ಸ್ಪೆಕ್ಟರ್ ನಿಕ್ಕಂ ಹಾಗೂ ಇನ್ನಿತರೆ ಅಧಿಕಾರಿಗಳು, ಸಿಬ್ಬಂದಿಯು ಕಾರ್ಯಾಚರಣೆ ಮುಗಿಯುವರೆಗೂ ಸ್ಥಳದಲ್ಲಿದ್ದರು.