ಅಲ್ಲಿಯವರೆಗೂ ಅವನಿಗೆ ಮುಂದೇನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ನ್ಯಾಯಾಲಯ ಕೊಟ್ಟ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಾ ಜೈಲಿನಲ್ಲಿರುತ್ತಾನೆ. ಯಾವಾಗ ಅಪ್ಪನ ಪತ್ರ ಸಿಗುತ್ತದೋ ಮತ್ತು ಅದರಲ್ಲಿ ಅವರು ಬರೆದಿರುವ ಆತ್ಮವಿಶ್ವಾಸದ ಮಾತುಗಳನ್ನು ಓದುತ್ತಾನೋ, ಅಲ್ಲಿಂದ ಎಚ್ಚೆತ್ತುಕೊಳ್ಳುತ್ತಾನೆ. ಆದರೆ, ತಾನು ನಿರಪರಾಧಿ ಎಂದು ಸಾಬೀತುಪಡಿಸುವುದಕ್ಕೆ ಅವನು ಜೈಲಿನಿಂದ ಹೊರಬರಲೇಬೇಕು. ಆಗ ಅವನ ನೆರವಿಗೆ ಬರುವುದು ಮತ್ತೆ ಅವನ ಅಪ್ಪನೇ. ಆದರೆ, ಹೇಗೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು.
“ಸಾಗುವ ದಾರಿಯಲ್ಲಿ’ ಬದುಕಿನಷ್ಟೇ ಅನಿಶ್ಚಿತವಾದ ಒಂದು ಚಿತ್ರ. ಜೀವನದಲ್ಲಿ ಮುಂದೇನಾಗುತ್ತದೆ ಮತ್ತು ಆಗಬಹುದು ಎಂದು ಹೇಳುವುದಕ್ಕೆ ಹೇಗೆ ಸಾಧ್ಯವಿಲ್ಲವೋ, “ಸಾಗುವ ದಾರಿಯಲ್ಲಿ’ ಬಗ್ಗೆ ಸಹ ಹೇಳುವುದು ಕಷ್ಟ. ಇಲ್ಲಿ ನಾಯಕ ಹೀಗೆ ಮಾಡುತ್ತಾನೆ ಎಂದರೆ, ಇನ್ನೇನೋ ಮಾಡುತ್ತಾನೆ. ಕಥೆ ಹೀಗೆ ಸಾಗಬಹುದು ಎಂದುಕೊಂಡರೆ ಇನ್ನೇನೋ ಆಗುತ್ತದೆ. ಚಿತ್ರದ ಕಥೆಯೂ ಹಾಗಿರುವುದರಿಂದ ಅದು ತಪ್ಪು ಎನ್ನುವುದಕ್ಕೆ ಸಾಧ್ಯವಿಲ್ಲ. . ಹಾಗೆ ನೋಡಿದರೆ, ಚಿತ್ರದಲ್ಲೊಂದು ನಿರ್ಧಿಷ್ಟ ಕಥೆ ಅಂತ ಹೇಳುವುದಕ್ಕೆ ಕಷ್ಟ.
ಇಲ್ಲಿ ನಿರ್ದೇಶಕರು, “ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ’ ಎಂಬ ಸಾಲುಗಳನ್ನಾಧರಿಸಿ ಚಿತ್ರ ಮಾಡಿದ್ದಾರೆ. ಇಲ್ಲಿ ನಿರ್ದೇಶಕರೇ ವಿಧಿಯ ಸ್ಥಾನದಲ್ಲಿ ಕುಳಿತು ಅರ್ಜುನ್ ಎಂಬ ಹುಡುಗನ ಜೀವನದಲ್ಲಿ ಆಟವಾಡಿದ್ದಾರೆ. ಹಲವಾರು ಪಾತ್ರಗಳು, ಹಲವಾರು ಘಟನೆಗಳನ್ನು ತಂದು ಅವನಿಗೆ ಸವಾಲೊಡ್ಡಿದ್ದಾರೆ. ಅವನು ಆ ಸವಾಲಿನಲ್ಲಿ ಹೇಗೆ ಗೆಲ್ಲುತ್ತಾನೆ ಎಂಬುದೇ ಚಿತ್ರದ ಕಥೆ. ನಾವು “ಸಾಗುವ ದಾರಿಯಲ್ಲಿ’ ಹೇಗೆ ಹಲವು ಪಾತ್ರಗಳು ಬಂದು ಹೋಗುತ್ತವೋ, ಇಲ್ಲೂ ಅನೇಕ ಪಾತ್ರಗಳು ಬರುತ್ತವೆ.
ಕೆಲವು ನಗಿಸುವುದಕ್ಕೆ ಬರುತ್ತವೆ, ಕೆಲವು ಸೇಡು ತೀರಿಸಿಕೊಳ್ಳುವುದಕ್ಕೆ ಬರುತ್ತವೆ, ಕೆಲವು ಪ್ರೀತಿಸುವುದಕ್ಕೆಂದೇ ಬರುತ್ತವೆ. ಚಿತ್ರದ ಮೊದಲಾರ್ಧ ನಗಿಸುವುದಕ್ಕೆ ರಂಗಾಯಣ ರಘು, ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಬರುತ್ತಾರೆ. ಹಾಗೆ ನೋಡಿದರೆ, ಅವರಿಗೂ ಚಿತ್ರಕ್ಕೂ ಸಂಬಂಧವೇ ಇಲ್ಲ. ನಾಯಕ ಓದುವ ಕಾಲೇಜಿನಲ್ಲಿರುವ ಆ ಪಾತ್ರಗಳು ಒಂದಿಷ್ಟು ನಗಿಸುವುದಕ್ಕೆ ಪ್ರಯತ್ನಿಸುತ್ತವೆ. ಆಮೇಲೆ ಎಲ್ಲಿಗೆ ಹೋಗುತ್ತವೋ, ಏನಾಗುತ್ತವೋ ಗೊತ್ತಿಲ್ಲ.
ಹಾಗಾಗಿ ಮೊದಲಾರ್ಧ ಅಷ್ಟಾಗಿ ಗಮನಸೆಳೆಯುವುದು ಕಷ್ಟವೇ. ಇಂಟರ್‌ವೆಲ್ ಹಂತದಲ್ಲಿ ಚಿತ್ರಕ್ಕೊಂದು ಟ್ವಿಸ್ಟ್ ಸಿಕ್ಕಿ, ದ್ವಿತೀಯಾರ್ಧದಲ್ಲಿ ಚಿತ್ರ ಬೇರೆಯದೇ ರೂಪ ಪಡೆಯುತ್ತದೆ. ಇಲ್ಲೊಂದಿಷ್ಟು ಘಟನೆಗಳು ಪ್ರೇಕ್ಷಕರನ್ನು ಹಿಡಿದಿಟ್ಟು ನೋಡಿಸಿಕೊಂಡು ಹೋಗುತ್ತದೆ. ಕೊನೆಗೆ ಒಂದೊಳ್ಳೆಯ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ. ಬಹುಶಃ ಚಿತ್ರಕ್ಕೆ ಅಗತ್ಯವಿರದ ಒಂದಿಷ್ಟು ಅಂಶಗಳಿಗೆ ಕತ್ತರಿ ಹಾಕಿದ್ದರೆ, ಚಿತ್ರ ಇನ್ನಷ್ಟು ಚೆನ್ನಾಗಿರುತಿತ್ತು.
ಹಿಂದಿನ ಎರಡು ಚಿತ್ರಗಳಿಗೆ ಹೋಲಿಸಿದರೆ, ಅನೂಪ್ ಅಭಿನಯದಲ್ಲಿ ಇನ್ನಷ್ಟು ಗಟ್ಟಿಯಾಗಿದ್ದಾರೆ. ಇನ್ನು ಡ್ಯಾನ್ಸು, ಫೈಟುಗಳಲ್ಲಿ ಅವರು ಇನ್ನಷ್ಟು ಚುರುಕಾಗಿದ್ದಾರೆ. ಬಹಳ ದಿನಗಳ ನಂತರ ದೇವರಾಜ್ ಅವರನ್ನು ಒಂದೊಳ್ಳೆಯ ಪಾತ್ರದಲ್ಲಿ ನೋಡಬಹುದು. ಎಸಿಪಿಯಾಗಿ ಶರತ್ ಲೋಹಿತಾಶ್ವ ಸಹ ಇಷ್ಟವಾಗುತ್ತಾರೆ. ಮಿಕ್ಕಂತೆ ಜೈಜಗದೀಶ್, ಅರುಣ ಬಾಲರಾಜ್, ಸತ್ಯಜಿತ್ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಗು ಸಂಗೀತದಲ್ಲಿ ಎರಡು ಹಾಡುಗಳು ಖುಷಿಕೊಡುತ್ತವೆ. ಕೆಲವು ಸಂಭಾಷಣೆಗಳು ಅರ್ಥಪೂರ್ಣವಾಗಿವೆ.
ಚಿತ್ರ: ಸಾಗುವ ದಾರಿಯಲ್ಲಿ
ನಿರ್ದೇಶನ: ಶಿವಕುಮಾರ್
ನಿರ್ಮಾಣ: ವಿ. ಶಿವಶಂಕರ್
ತಾರಾಗಣ: ಅನೂಪ್, ಪವಿತ್ರ ಗೌಡ, ದೇವರಾಜ್, ಶರತ್ ಲೋಹಿತಾಶ್ವ, ಸತ್ಯಜಿತ್, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಮುಂತಾದವರು
* ಚೇತನ್ ನಾಡಿಗೇರ್