Advertisement

ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರೆಗೆ ಹಲವು ನಿರ್ಬಂಧ

12:53 PM Oct 24, 2017 | |

ಮೈಸೂರು: ಭಕ್ತರು ಮತ್ತು ಅರಣ್ಯ ಇಲಾಖೆ ನಡುವೆ ಭಾರೀ ಸಂಘರ್ಷಕ್ಕೆ ಕಾರಣವಾಗಿರುವ, ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ನಡೆಯುವ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಜಿಲ್ಲಾಡಳಿತ ಹಲವು ನಿರ್ಬಂಧಗಳನ್ನು ಹೇರಿದೆ.

Advertisement

ಈ ವರ್ಷ ನ.12 ರಿಂದ 15ರವರೆಗೆ ಜಾತ್ರಾ ಮಹೋತ್ಸವ ನಡೆಸಲು ದೇವಸ್ಥಾನ ಸಮಿತಿ ನಿರ್ಧರಿಸಿರುವುದರಿಂದ 4 ದಿನಗಳ ಕಾಲ ಎಚ್‌.ಡಿ.ಕೋಟೆ, ನಂಜನಗೂಡು, ಗುಂಡ್ಲುಪೇಟೆ ಹಾಗೂ ಚಾಮರಾಜ ನಗರ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಬರುತ್ತಾರೆ.

ಜಾತ್ರೆಗೆ ಬರುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಕೊಂಡೋತ್ಸವ, ಹಾಲುಹರಿವೆ ಸೇವೆ, 10 ಹೋಟೆಲ್‌ಗ‌ಳು, 5 ಪೂಜಾ ಸಾಮಗ್ರಿಗಳ ಅಂಗಡಿಗಳಿಗೆ ಅವಕಾಶ ಹಾಗೂ ಹಾಲುಹರಿವೆ ಸೇವೆಗೆ 3 ಜನರೇಟರ್‌ ಬಳಕೆಗೆ ಅವಕಾಶ ನೀಡಿಕೆ ಹಾಗೂ ಜಾತ್ರೆಗೆ ಬರುವ ಗಣ್ಯರ ವಾಹನ ಹೊರತುಪಡಿಸಿ,

ಉಳಿದ ಭಕ್ತರ ವಾಹನಗಳಿಗೆ ಅರಣ್ಯದ ಹೊರಭಾಗದಲ್ಲಿ ಸೂಕ್ತ ವಾಹನ ನಿಲುಗಡೆ ತಾಣ ಸಿದ್ಧಪಡಿಸಿ, ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್‌ ಮೂಲಕ ಜಾತ್ರೆಗೆ ಹೋಗಿ ಬರುವ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರಂದೀಪ್‌ ಡಿ., ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಾತ್ರಾ ಮಹೋತ್ಸವ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಿರ್ಬಂಧ ಹೇರಿಕೆ: ಧ್ವನಿ ವರ್ಧಕಗಳ ಬಳಕೆ ನಿಷೇಧಿಸುವ ಬಗ್ಗೆ ಚರ್ಚಿಸಿ, ಕಡಿಮೆ ಸುತ್ತಳತೆಗೆ ಮಾತ್ರ ಶಬ್ಧ ಕೇಳಿಸುವಂತೆ ಧ್ವನಿವರ್ಧಕ ಬಳಸಲು ಅನುಮತಿ ನೀಡಲಾಯಿತು. ಇನ್ನು ಸಿಹಿ ತಿಂಡಿಗಳ ಅಂಗಡಿಗಳಿಗೆ ಪ್ರತ್ಯೇಕ ಜಾಗ ನೀಡಲಾಗುವುದಿಲ್ಲ. ಹೋಟೆಲ್‌ಗ‌ಳಲ್ಲೆ ಸಿಹಿ ತಿಂಡಿ ಮಾರಾಟ ಮಾಡಬಹುದು, ಇಲ್ಲವೇ ಅರಣ್ಯದ ಹೊರಗೆ ಪ್ರವೇಶ ದ್ವಾರದಲ್ಲಿ ಸಿಹಿ ತಿಂಡಿ ಮಳಿಗೆಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಯಿತು.

Advertisement

ಪ್ಲಾಸ್ಟಿಕ್‌ ಬಳಕೆ, ಪ್ಲಾಸ್ಟಿಕ್‌ ಆಟಿಕೆಗಳ ಅಂಗಡಿಗಳು, ಪಾತ್ರೆ ಅಂಗಡಿಗಳು ಹಾಗೂ ಇನ್ನಿತರೆ ವ್ಯಾಪಾರ ವಹಿವಾಟುಗಳ ನಿಷೇಧ, ಎತ್ತಿನಗಾಡಿ, ಬೈಕ್‌ ಹಾಗೂ 4 ಚಕ್ರದ ವಾಹನಗಳ ಪ್ರವೇಶ ನಿಷೇಧ, ಮಚ್ಚು-ಕೊಡಲಿ ಹಾಗೂ ಇನ್ನಿತರೆ ಮಾರಕಾಸ್ತ್ರ ತರುವುದು, ಮರ ಕಡಿಯುವುದು, ವನ್ಯಪ್ರಾಣಿಗಳಿಗೆ ತೊಂದರೆ ಕೊಡುವುದನ್ನು ನಿಷೇಧಿಸಲಾಗಿದೆ. ಜಾತ್ರೆ ನಡೆಯುವ 4 ದಿನಗಳ ಕಾಲ ಬೆಳಗ್ಗೆ 8 ರಿಂದ ರಾತ್ರಿ 8ಗಂಟೆವರೆಗೆ ಮಾತ್ರ ಪ್ರವೇಶ ನೀಡಲು ತೀರ್ಮಾನಿಸಲಾಯಿತು.

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಂ, ಬಂಡೀಪುರ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಅಂಬಟಿ ಮಾಧವ, ಜಿಪಂ ಸಿಇಒ ಪಿ.ಶಿವಶಂಕರ್‌, ಹೆಡಿಯಾಲ ಅರಣ್ಯ ವಲಯದ ಎಸಿಎಫ್ ಪರಮೇಶ್‌, ವಲಯ ಅರಣ್ಯಾಧಿಕಾರಿ ಸಂದೀಪ್‌, ಮಹದೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಲಿಂಗರಾಜು, ಕಾರ್ಯದರ್ಶಿ ಬಿ.ಎಸ್‌.ಲಿಂಗರಾಜು ಮತ್ತಿತರರಿದ್ದರು.

ಏಕಾಏಕಿ ಜಾತ್ರೆ ಮಾಡಬೇಡಿ ಎನ್ನಲಾಗಲ್ಲ. ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಎಚ್ಚರವಹಿಸಿ. ಅನವಶ್ಯಕವಾಗಿ ಭಕ್ತರ ಮೇಲೆ ಕೇಸ್‌ ದಾಖಲಿಸುವುದು, ಬ್ಯಾರಿಕೇಡ್‌ ಹಾಕಿ ಅಡ್ಡಿಪಡಿಸುವುದನ್ನು ಮಾಡಬೇಡಿ. ಜತೆಗೆ ನಗರಗಳಲ್ಲೇ ರಾತ್ರಿ 10ಗಂಟೆ ನಂತರ ಕಾರ್ಯಕ್ರಮಗಳಿಗೆ ನಿರ್ಬಂಧ ಹಾಕುತ್ತೇವೆ. ಹೀಗಾಗಿ ಕಾಡಿನೊಳಗೆ ಇಡೀ ರಾತ್ರಿ ಕಾರ್ಯಕ್ರಮ ಮಾಡುವುದು ಸರಿಯಲ್ಲ. ಹೀಗಾಗಿ ಪಂಚಾಯ್ತಿ ಮಟ್ಟದಲ್ಲಿ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿ.
-ಡಿ.ರಂದೀಪ್‌, ಜಿಲ್ಲಾಧಿಕಾರಿ 

Advertisement

Udayavani is now on Telegram. Click here to join our channel and stay updated with the latest news.

Next