Advertisement

ಚಾಲಕರಿಗೆ ವಸತಿ ಸೇರಿ ಹಲವು ಯೋಜನೆ

06:22 AM Feb 22, 2019 | Team Udayavani |

ಬೆಂಗಳೂರು: ಆಟೋ, ಟ್ಯಾಕ್ಸಿ ಮತ್ತಿತರ ವಾಹನಗಳ ಚಾಲಕ ವೃತ್ತಿಯಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ವಸತಿ ಸೇರಿ ಹಲವು ಮೂಲ ಸೌಕರ್ಯ ಕಲ್ಪಿಸಲು ಬಜೆಟ್‌ನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Advertisement

ವಿಧಾನಸೌಧ ಮುಂಭಾಗ ಗುರುವಾರ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ 112 ನಿರುದ್ಯೋಗಿಗಳಿಗೆ ಟ್ಯಾಕ್ಸಿ ವಿತರಣೆ ಮಾಡಿ ಮಾತನಾಡಿದ ಅವರು, ಬಡ ಜನರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ರೂಪಿಸಲಾಗಿದ್ದು, ಇದೇ ವರ್ಷ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ನಿರುದ್ಯೋಗಿ ಯುವಕ-ಯುವತಿಯರಿಗೆ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಹೊಸ ಕಾರು ವಿತರಿಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಫ‌ಲಾನುಭವಿಗಳನ್ನು ಗುರುತಿಸಲಾಗಿದೆ ಎಂದರು. ಬಜೆಟ್‌ ಮಂಡನೆಗೂ ಮುನ್ನ ಆಟೋ, ಟ್ಯಾಕ್ಸಿ, ಉಬರ್‌, ಓಲಾ ಸಂಘಟನೆಗಳ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿದ್ದು, ಚಾಲಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ.

ಹಳ್ಳಿಯಿಂದ ನಗರಕ್ಕೆ ಬಂದು ಟ್ಯಾಕ್ಸಿ ಚಾಲನೆ ಮಾಡುತ್ತಿರುವವರು ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಹಣ ಕಟ್ಟಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆ್ಯಪ್‌ ಪ್ರಾರಂಭಿಸಿ ಓಲಾ, ಊಬರ್‌ ಚಾಲಕರಿಗೆ ನೆರವಾಗುವ ಉದ್ದೇಶವಿದೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

ಚಾಲಕ ವೃತ್ತಿಯಲ್ಲಿರುವವರಿಗೆ ವಯಸ್ಸಾದ ನಂತರ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಶಾಶ್ವತ ಕಾರ್ಯಕ್ರಮ ಸಹ ರೂಪಿಸಲಾಗುವುದು. 2018-19ನೇ ಸಾಲಿನಲ್ಲಿ 557 ಫ‌ಲಾನುಭವಿಗಳನ್ನು ಗುರುತಿಸಿ ತಲಾ 3 ಲಕ್ಷ ರೂ. ಸಹಾಯಧನದೊಂದಿಗೆ ಟ್ಯಾಕ್ಸಿ ವಿತರಿಸಲು 16.71 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಸಾಲಿನಲ್ಲಿ 300 ಫ‌ಲಾನುಭವಿಗಳನ್ನು ಗುರುತಿಸಲು 9 ಕೋಟಿ ರೂ. ಮಂಜೂರು ಮಾಡಿದೆ ಎಂದು ತಿಳಿಸಿದರು.

Advertisement

ಸಚಿವರಾದ ಡಿ.ಸಿ.ತಮ್ಮಣ್ಣ, ಪುಟ್ಟರಾಜು, ಸಾ.ರಾ.ಮಹೇಶ್‌, ಪರಿಷತ್‌ ಸದಸ್ಯರಾದ ಶರವಣ, ರಮೇಶ್‌ಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next