Advertisement

ದೇಶಪರ್ಯಟನೆಯ ಅನೇಕ ಸಾಧಕರಿದ್ದಾರೆ: ಸೀತಾರಾಮ ಕೆದಿಲಾಯ

03:45 AM Jul 16, 2017 | |

ಉಡುಪಿ: ಅನೇಕ, ಅಸಂಖ್ಯ ಸಾಧಕರು ದೇಶಪರ್ಯಟನೆ ಮಾಡುತ್ತಿದ್ದಾರೆ ಎಂದು ಭಾರತಕ್ಕೆ ಕಾಲ್ನಡಿಗೆಯಲ್ಲಿ ಪ್ರದಕ್ಷಿಣೆ ಮಾಡಿದ ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಸೀತಾರಾಮ ಕೆದಿಲಾಯ ಹೇಳಿದ್ದಾರೆ.

Advertisement

ಶ್ರೀಕೃಷ್ಣ ಮಠದಲ್ಲಿ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಜನರ ಮಧ್ಯೆ ಇದ್ದು ಪಾದಯಾತ್ರೆ ನಡೆಸಿದೆ. ಎಷ್ಟೋ ಮಂದಿ ಯಾರಿಗೂ ಗೊತ್ತಿಲ್ಲದೆ ಎಲೆಮರೆಯ ಕಾಯಿ ಯಂತೆ ದೇಶ ಪರ್ಯಟನೆ ಮಾಡುತ್ತಿದ್ದಾರೆ. ಅವರಿಗೆ ಯಾವ ಅಪೇಕ್ಷೆಯೂ ಇರುವುದಿಲ್ಲ. ಅವರ ಸಾಧನೆ ನಮಗಿಂತ ದೊಡ್ಡದು. ನಾನು ಸಾಮಾಜಿಕ ದೃಷ್ಟಿಯಿಂದ ಮರೆತುಹೋಗುತ್ತಿರುವ ಕೆಲವು ಜೀವನದ ಅಮೂಲ್ಯ ಅಂಶಗಳನ್ನು ನೆನಪು ಮಾಡಿಕೊಡಲು ಜನರ ಮಧ್ಯೆ ಹೋಗಬೇಕಾ ಯಿತು. ಇದೂ ಕೂಡ ಸಾಧನೆಯ ಇನ್ನೊಂದು ಮುಖ ಎಂದರು.

ಐದು ವರ್ಷವೂ ಆರೋಗ್ಯಪೂರ್ಣರಾಗಿ ಪಾದಯಾತ್ರೆ ಪೂರೈಸಿದ ಗುಟ್ಟೇನು ಎಂದು ಪ್ರಶ್ನಿಸಿದಾಗ “ಕಣ್ಣಿಗೆ ಕಾಣದ ಒಂದು ಶಕ್ತಿ ಇದೆ ಯಲ್ಲಾ? ಅದೇ ಗುಟ್ಟು. ಕಣ್ಣಿಗೆ ಕಾಣುವ ಸಾಧನೆಗೆ ಕಣ್ಣಿಗೆ ಕಾಣದ ಶಕ್ತಿಯ ಅಗತ್ಯವಿದೆ’ ಎಂದರು.

ಯೋಜಕ ಹೇಳಿದಂತೆ…
ಮುಂದಿನ ಯೋಜನೆ ಏನು ಎಂದಾಗ “ಯೋಜನೆ ತಾನಾಗಿ ರೂಪುಗೊಳ್ಳಬೇಕು. ಯೋಜಕ ಮೇಲಿದ್ದಾನೆ. ಆತ ಯೋಜಿಸಿದರೆ ಪರಿಪೂರ್ಣವಾಗುತ್ತದೆ. ಯೋಜಕ ಹೇಳಿದಂತೆ ಕೇಳಿದರಾಯಿತು. ಇನ್ನೊಮ್ಮೆ ನಾನು ಹೋಗಲು ಈಗ ಮಾಡಿದ ಪಾದಯಾತ್ರೆಯನ್ನು ತರಬೇತಿ ಎಂದೂ ಆತ ಕಳುಹಿಸಿದ್ದಿರಬಹುದು ಎಂದರು.

ಪಟ್ಟಣಗಳಲ್ಲಿ ಇಂಡಿಯ; ಹಳ್ಳಿಗಳಲ್ಲಿ ಭಾರತ
ಭಾರತ ಎಲ್ಲಿದೆ ಎಂದರೆ ಹಳ್ಳಿಗಳಲ್ಲಿದೆ. ಇಂಡಿಯವನ್ನು ಪಟ್ಟಣಗಳಲ್ಲಿ, ಭಾರತವನ್ನು ಹಳ್ಳಿಗಳಲ್ಲಿ ನೋಡಬಹುದು. ಪಟ್ಟಣಗಳಲ್ಲಿ ಜನವರಿ, ಫೆಬ್ರವರಿ, ಹಳ್ಳಿಗಳಲ್ಲಿ ಚೈತ್ರ, ವೈಶಾಖ ಎನ್ನುತ್ತಾರೆ. ಪಟ್ಟಣಗಳಲ್ಲಿ “ನಾಯಿ ಇದೆ ಎಚ್ಚರಿಕೆ’ಎಂದು ಬೋರ್ಡು ಇದ್ದರೆ, ಹಳ್ಳಿಗಳಲ್ಲಿ “ಬನ್ನಿ, ಊಟ ಮಾಡಿ, ಇನ್ನೊಮ್ಮೆ ಬನ್ನಿ’ ಎನ್ನುತ್ತಾರೆ. ಎಷ್ಟೋ ಗ್ರಾಮಗಳಲ್ಲಿ ರಾತ್ರಿ ಬಾಗಿಲು ಹಾಕದೆ ಮಲಗುವ ನಿರ್ಭಯತೆಯನ್ನು ಕಂಡಿದ್ದೇನೆ. ಪಟ್ಟಣಗಳಲ್ಲಿ ಭಯಗ್ರಸ್ತರಾಗಿ ಬೀಗ ಹಾಕಿಕೊಂಡು ಮಲಗುತ್ತಾರೆ ಎಂದರು.

Advertisement

“ಮೇರಾ ಗ್ರಾಮ್‌- ಮೇರಾ ತೀರ್ಥ್’ 
“ದಿಲ್ಲಿಯಲ್ಲಿ “ಮೇರಾ ಗ್ರಾಮ್‌- ಮೇರಾ ತೀರ್ಥ್’ ಎಂಬ ಧ್ಯೇಯವಾಕ್ಯದಡಿ ನಗರಗಳಲ್ಲಿರುವ ವಿದ್ಯಾವಂತರು ತಮ್ಮ ಹಳ್ಳಿಗಳಿಗೆ ಹೋಗಿ ಹಣ, ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ಕೇವಲ ಐದು ಜನರಿಂದ ಆರಂಭವಾದ ಈ ಚಿಂತನೆ ಈಗ 25 ರಾಜ್ಯಗಳಿಗೆ ವಿಸ್ತರಣೆಯಾಗುತ್ತಿದೆ’ ಎಂದು ಹೇಳಿದರು.

ಸನ್ಯಾಸಿಗಳಿಗೂ ಮಿಗಿಲು
ಕೆದಿಲಾಯರನ್ನು ಸಮ್ಮಾನಿಸಿದ ಪರ್ಯಾಯ ಶ್ರೀ ಪೇಜಾವರ ಶ್ರೀಗಳು “ಸೀತಾರಾಮಚಂದ್ರ 14 ವರ್ಷ ವನವಾಸದಲ್ಲಿ ದೇಶಪರ್ಯಟನೆ ಮಾಡಿದರೆ ಈ ಸೀತಾರಾಮ ಐದು ವರ್ಷ ಹಳ್ಳಿಹಳ್ಳಿಗಳಿಗೆ ಹೋಗಿ ದೇಶ ಪರ್ಯಟನೆ ಮಾಡಿ
ದರು. ಒಂದು ಗ್ರಾಮದಲ್ಲಿ ಒಂದು ದಿನಕ್ಕಿಂತ ಹೆಚ್ಚು ತಂಗದೆ ಸನ್ಯಾಸಿಗಳ ಈ ಕರ್ತವ್ಯವನ್ನು ನಡೆಸಿದ ಕೆದಿಲಾಯರು ಒಂದು ದೃಷ್ಟಿಯಲ್ಲಿ ಸನ್ಯಾಸಿಗಳಿಗಿಂತಲೂ ಮಿಗಿಲು. ಇದು ಕೇವಲ ರಾಷ್ಟ್ರಸೇವೆಯಲ್ಲದೆ ರಾಷ್ಟ್ರಕ್ಕೆ ಸ್ವಾಮಿಯಾದ ಭಗವಂತನ ಸೇವೆ’ ಎಂದು ಶುಭ ಶ್ಲಾ ಸಿದರು. ಶೃಂಗೇರಿ ಸ್ವಾಮೀಜಿ ಮೆಚ್ಚುಗೆ ಶುಕ್ರವಾರ ಶ್ರೀಶೃಂಗೇರಿ ಮಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರನ್ನು ಭೇಟಿಯಾಗಿ ಕೆದಿಲಾಯರು ಚರ್ಚಿಸಿದರು. ಮತಾಂತರ, ಗೋಹತ್ಯೆ ನಿಷೇಧ ಇತ್ಯಾದಿ ವಿಷಯಗಳ ಕುರಿತು ಕಳಕಳಿ ವ್ಯಕ್ತಪಡಿಸಿದ ಸ್ವಾಮೀಜಿಯವರು, ಕೆದಿಲಾಯರಂತಹ ಹತ್ತು ಮಂದಿ ಇದ್ದರೆ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ ಎಂದರು. 

ಗುರುವಾರ ಪಕ್ಷಿಕೆರೆ ದೇವಸ್ಥಾನ, ಪಾದಯಾತ್ರೆಯಲ್ಲಿದ್ದ ರವೀಂದ್ರನಾಥ ರೈಗಳ ಮನೆ, ಪಾವಂಜೆ ದೇವಸ್ಥಾನಕ್ಕೆ ಭೇಟಿ ನೀಡಿದ ಕೆದಿಲಾಯರು ಉಡುಪಿ ಆರೆಸ್ಸೆಸ್‌ ಕಾರ್ಯಾಲಯ, ರಾಜಾಂಗಣ, ರಾತ್ರಿ ತಂಗಿದ ಮಣಿಪಾಲ ಹುಡ್ಕೊ ಕಾಲನಿಯ ಆರೆಸ್ಸೆಸ್‌ ಕಾರ್ಯಕರ್ತ ಕೇಶವರಾಯ ಪ್ರಭು ಅವರ ಮನೆಯಲ್ಲಿ ಅನೇಕ ಕಾರ್ಯಕರ್ತರನ್ನು ಭೇಟಿ ಮಾಡಿದರು. ಮನೋವೈದ್ಯ ಡಾ| ಪಿ.ವಿ.ಭಂಡಾರಿ ಮೊದಲಾದ ಚಿಂತಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಶುಕ್ರವಾರ ಸಖರಾಯಪಟ್ಟಣದ ಅವಧೂತರ ಆರಾಧನೆ ಯಲ್ಲಿ ಪಾಲ್ಗೊಂಡು ಹರಿಹರಪುರದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next