Advertisement
ಕನ್ನಡದಲ್ಲಿ ಸಿನಿಮಾದ ಕುರಿತು ಅದೆಷ್ಟೇ ಪುಸ್ತಕಗಳು ಬಂದರೂ, ಅದರಿಂದ ಓದುಗರಿಗೆ ಹೆಚ್ಚು ಪ್ರಯೋಜನವಾಗಿಲ್ಲ ಅಥವಾ ಬಹಳಷ್ಟು ಪುಸ್ತಕಗಳು ಓದುಗರಿಗೆ ತಲುಪಿಯೇ ಇಲ್ಲ ಎಂದರೆ ತಪ್ಪಿಲ್ಲ.
Related Articles
Advertisement
ಇವೆಲ್ಲಾ ಚಿತ್ರರಂಗ ನಡೆದು ಬಂದ ಹಾದಿಯ ಬಗ್ಗೆಯಾದರೆ, ಚಿತ್ರರಂಗದ ವಿವಿಧ ಘಟ್ಟಗಳನ್ನು, ಹಲವು ತಾರೆಯರ ಜೀವನ ಚರಿತ್ರೆಯನ್ನು, ಚಿತ್ರಕಥೆ ಬರೆಯುವ ಕಲೆಯನ್ನು, ಚಿತ್ರರಂಗದ ವಿವಿಧ ತಾಂತ್ರಿಕತೆಯನ್ನು ಪರಿಚಯಿಸುವ ಹಲವು ಪುಸ್ತಕಗಳೂ ಬಿಡುಗಡೆಯಾಗಿವೆ. ಚಿತ್ರಸಂಗೀತದ ಬಗ್ಗೆ, ಹಾಡು ಹುಟ್ಟಿದ ಕಥೆಗಳ ಬಗ್ಗೆ, ಹೊಸ ಹೊಸ ಆವಿಷ್ಕಾರಗಳ ಬಗ್ಗೆ, ಸಿನಿಮಾ ಲೋಕದ ಹಲವು ರೋಚಕ ಮಾಹಿತಿಗಳ ಬಗ್ಗೆ, ಸಿನಿಮಾದ ದುರಂತ ಕಥೆಗಳ ಬಗ್ಗೆ … ಹೀಗೆ, ಒಟ್ಟಾರೆ ಕನ್ನಡ ಚಿತ್ರರಂಗದ ಹಲವು ಆಯಾಮಗಳ ಕುರಿತಾಗಿ ಸಾಕಷ್ಟು ಪುಸ್ತಕಗಳು ಬಂದಿವೆ. ಈ ಎಲ್ಲದರ ಪೈಕಿ ಅತೀ ಹೆಚ್ಚು ಸಿಗುವುದು ಜೀವನ ಚರಿತ್ರೆಗಳೇ. ಕನ್ನಡ ಚಿತ್ರರಂಗದ ಬಹುತೇಕ ಮಹನೀಯರ ಕುರಿತು ಹಲವು ಪುಸ್ತಕಗಳಿವೆ. ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಬಿ. ಸರೋಜಾದೇವಿ, ಎಂ.ಪಿ. ಶಂಕರ್, ಉಮಾಶ್ರೀ, ಕಲ್ಪನಾ, ಶಂಕರ್‌ನಾಗ್, ದ್ವಾರಕೀಶ್, ಲೋಕೇಶ್ ಸೇರಿದಂತೆ ಹಲವು ನಟ-ನಟಿಯರ, ಗಾಯಕರ, ಚಿತ್ರಸಾಹಿತಿಗಳ, ತಂತ್ರಜ್ಞರ ಜೀವನ ಚರಿತ್ರೆಗಳು ಪ್ರಕಟವಾಗಿವೆ.
ಅದರಲ್ಲೂ ಡಾ. ರಾಜಕುಮಾರ್ ಅವರ ಕುರಿತಾದ ಪುಸ್ತಕಗಳು ಬಂದಷ್ಟು, ಬೇರೆ ಯಾವ ಭಾಷೆಯಲ್ಲೂ, ಯಾವ ಕಲಾವಿದರ ಮೇಲೂ ಅಷ್ಟೊಂದು ಸಂಖ್ಯೆಯ ಪುಸ್ತಕಗಳು ರಚಿತವಾಗಿಲ್ಲ ಎನ್ನುವುದು ಮಹತ್ವದ ಸಂಗತಿ. ಈ ಪೈಕಿ ಪ್ರಮುಖವಾದುದು ಪುನೀತ್ ರಾಜಕುಮಾರ್ ಮತ್ತು ಪ್ರಕೃತಿ ಬನವಾಸಿ ಜಂಟಿಯಾಗಿ ರಚಿಸಿರುವ “ಡಾ. ರಾಜಕುಮಾರ್ – ವ್ಯಕ್ತಿತ್ವದ ಹಿಂದಿರುವ ವ್ಯಕ್ತಿ’. ಈ ಪುಸ್ತಕ ಇಂಗ್ಲೀಷ್‌ನಲ್ಲೂ ‘ಈr Rಚjಚkuಞಚr ಖಜಛಿ ಕಛಿrsಟn ಆಛಿಜಜಿnಛ ಠಿಜಛಿ ಕಛಿrsಟnಚlಜಿಠಿy’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಇದಲ್ಲದೆ “ಡಾ ರಾಜಕುಮಾರ್ ಸಮಗ್ರ ಚರಿತ್ರೆ’ ಎಂಬ ಗ್ರಂಥದಲ್ಲಿ ಡಾ. ರಾಜಕುಮಾರ್ ಅವರ ಸಮಗ್ರ ಜೀವನವನ್ನು ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. “ಬಂಗಾರದ ಮನುಷ್ಯ’ ಮತ್ತು “ವರನಟ’, “ಕನ್ನಡದ ಮುತ್ತಿನ ಕಥೆ’ ಮುಂತಾದ ಹಲವು ಪುಸ್ತಕಗಳಲ್ಲೂ ರಾಜಕುಮಾರ್ ಅವರ ಜೀವನದ ಹಲವು ಘಟ್ಟಗಳನ್ನು, ಅವರ ಸಾಧನೆಗಳನ್ನು ಬಿಚ್ಚಿಡುವ, ಕೊನೆಗೆ ಡಾ. ರಾಜಕುಮಾರ್ ಅವರ ಅಪಹರಣ ಆದ ಘಟನೆಗಳನ್ನು ಹಿಡಿದಿಡುವ ಪ್ರಯತ್ನ ಮಾಡಿದೆ.
ಚಿತ್ರರಂಗದ ಕುರಿತಾಗಿ ಅದೆಷ್ಟೇ ಸಾಹಿತ್ಯ ಮತ್ತು ಪುಸ್ತಕ ಬಂದರೂ, ಅದು ಕಡಿಮೆಯೇ. ಆದರೂ ಚಿತ್ರರಂಗದ ಕುರಿತಾಗಿ ಅದೆಷ್ಟೇ ಪುಸ್ತಕಗಳು ಬಂದರೂ, ಅದು ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತಿಲ್ಲ, ಓದುಗರಿಗೆ ಸಿಗುತ್ತಿಲ್ಲ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬೇರೆ ಪ್ರಾಕಾರಗಳಂತೆ ಜನಪ್ರಿಯವಾಗಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಕನ್ನಡದಲ್ಲಿ ಇದುವರೆಗೂ ಸಿನಿಮಾ ಸಾಹಿತ್ಯದ ಕುರಿತಾಗಿ 300ಕ್ಕೂ ಹೆಚ್ಚು ಪುಸ್ತಕಗಳು ಬಂದಿವೆ. ಆದರೆ, ಆ ಪೈಕಿ ಬೆರಳಣಿಕೆಯಷ್ಟು ಕೆಲವು ಪುಸ್ತಕಗಳು ಸಿಗುತ್ತವೆ ಮತ್ತು ಓದುಗರಿಗೆ ತಲುಪಿರುವುದು ಬಿಟ್ಟರೆ, ಮಿಕ್ಕಂತೆ ಹಲವು ಪುಸ್ತಕಗಳು ಓದುಗರಿಗೆ ದಕ್ಕುವುದೇ ಕಷ್ಟ ಎನ್ನುವಂತಹ ಮಾತಿದೆ. ಕೆಲವು ಪುಸ್ತಕಗಳು ಅತ್ಯಂತ ದುಬಾರಿಯಾದರೆ, ಇನ್ನೂ ಹಲವು ಪುಸ್ತಕಗಳು ಎಲ್ಲಾ ಕಡೆ ಸಿಗುವುದಿಲ್ಲ. ಹಾಗಾಗಿ ಕನ್ನಡ ಚಿತ್ರರಂಗದ ಬಗ್ಗೆ ಸಮೃದ್ಧ ಸಾಹಿತ್ಯವಿದ್ದರೂ ಅದು ಇನ್ನೂ ಅಷ್ಟು ಜನಪ್ರಿಯವೂ ಆಗಿಲ್ಲ ಮತ್ತು ಓದುಗರಿಗೆ ಲಭ್ಯವೂ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಇನ್ನು ಈ ಪೈಕಿ ಹಲವು ಪುಸ್ತಕಗಳನ್ನು ಬೇರೆಬೇರೆ ಪ್ರಕಾಶನ ಸಂಸ್ಥೆಗಳು ಪ್ರಕಟಿಸಿರುವುದರಿಂದ, ಇದೆಲ್ಲಾ ಪುಸ್ತಕ ಅಂಗಡಿಗಳಲ್ಲಿ ಸಿಗುತ್ತವೆ ಎಂದು ಹೇಳುವುದು ಕಷ್ಟ. ಹಾಗಾಗಿ ಎಷ್ಟೇ ಪುಸ್ತಕಗಳು ಬಂದರೂ ಅದು ಓದುಗರ ಮಡಿಲಿಗೆ ಸೇರಿದ್ದು ಕಡಿಮೆಯೇ.
ಇದೊಂದು ದೂರಾದರೆ, ಅನೇಕ ಪುಸ್ತಕಗಳಿದ್ದರೂ ತಂತ್ರಜ್ಞಾನದ ಕುರಿತಾಗಿ, ಸಿನಿಮಾ ತಯಾರಿಕೆಯ ಕುರಿತಾದ ಪುಸ್ತಕಗಳು ಬಹಳ ಕಡಿಮೆಯೇ. ಸಿನಿಮಾ ತಂತ್ರಜ್ಞಾನದ ಕುರಿತಾಗಿ ಇಂಗ್ಲೀಷ್‌ನಲ್ಲಿ ಹಲವು ಪುಸ್ತಕಗಳು ಲಭ್ಯವಿವೆ. ಅವುಗಳಲ್ಲಿ ಕೆಲವಾದರೂ ಕನ್ನಡಕ್ಕೆ ಅನುವಾದವಾಗಬೇಕಾದ ಅವಶ್ಯಕತೆ ಇದೆ. ಈ ಕುರಿತು ಕರ್ನಾಟಕ ಚಲನಚಿತ್ರ ಅಕಾಡೆಮಿ ಹೆಜ್ಜೆ ಇಟ್ಟಿದ್ದು, ಕೊರತೆ ಇರುವ ಸಿನಿಮಾ ಕುರಿತಾದ ಅಧ್ಯಯನ ಗ್ರಂಥಗಳನ್ನು ಹೆಚ್ಚು ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದೆ. ಅಷ್ಟೇ ಅಲ್ಲ, ಸಿನಿಮಾ ಸಾಹಿತ್ಯವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಪ್ರತ್ಯೇಕ ಮಳಿಗೆ ಮಾಡಿ, ಅದರಲ್ಲಿ ಸಿನಿಮಾಕ್ಕೆ ಸಂಬಂಧಿಸುವ ಪುಸ್ತಕಗಳನ್ನು ಮಾರಾಟ ಮಾಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೂ ಪ್ರಯತ್ನಿಸುತ್ತಿದೆ.
ಈ ಕುರಿತು ಮಾತನಾಡುವ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, “ನಮ್ಮಲ್ಲಿ ಸಿನಿಮಾಗೆ ಸಂಬಂಧಿಸಿದ ಪುಸ್ತಕಗಳು ವಿಪುಲವಾಗಿದ್ದರೂ ಅಧ್ಯಯನ ಗ್ರಂಥಗಳ ಕೊರತೆ ಇದೆ. ಇಂಗ್ಲೀಷ್‌ನಲ್ಲಿ ಸಿನಿಮಾಗೆ ಸಂಬಂಧಿಸಿದ ಹಲವು ಅಧ್ಯಯನ ಗ್ರಂಥಗಳಿವೆ. ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಅವಶ್ಯಕತೆ ಇದೆ. ಇನ್ನು ಈ ಪುಸ್ತಕಗಳು ಎಲ್ಲಿ ಸಿಗುತ್ತವೆ ಎಂಬ ಪ್ರಶ್ನೆಗಳು ಹಲವರಿಗಿದೆ. ಅದೇ ಕಾರಣಕ್ಕೆ ಸಿನಿಮಾಗೆ ಸಂಬಂಧಿಸಿದ ಪುಸ್ತಕಗಳನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅಕಾಡೆಮಿಯ ವತಿಯಿಂದ ಮಳಿಗೆ ಮಾಡಿ, ಅಲ್ಲಿ ಸಿಗುವಂತೆ ಮಾಡಬೇಕಿದೆ. ಬರೀ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಷ್ಟೇ ಅಲ್ಲ, ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಸಮ್ಮೇಳನಗಳಲ್ಲಿ ಮಳಿಗೆ ತೆರೆದು ಮಾರಾಟ ಮಾಡಬಹುದು. ಇನ್ನು ನಾವು ಇನ್ನೂ ಡಿಜಿಟಲ್ ಲಾಭವನ್ನು ಪಡೆದಿಲ್ಲ. ಇವತ್ತು ಪುಸ್ತಕ ಮಾರುವವರಿಗೆ ಯೂಟ್ಯೂಬ್ ಸಹ ಒಂದು ಒಳ್ಳೆಯ ವೇದಿಕೆ. ಅದನ್ನು ಕೆಲವರು ಬಳಸಿಕೊಳ್ಳುವುದು ಬಿಟ್ಟರೆ, ಹೆಚ್ಚಿನವರಿಗೆ ಅದು ತಲುಪಿಲ್ಲ. ಈ ಹೊಸ ಆಯಾಮಗಳನ್ನು ಬಳಸಿಕೊಂಡು ಸಿನಿಮಾಗೆ ಸಂಬಂಧಿಸಿದ ಪುಸ್ತಕಗಳನ್ನು ಹೆಚ್ಚು ಜನರಿಗೆ ತಲುಪಿಸಬೇಕಾಗಿದೆ’ ಎನ್ನುತ್ತಾರೆ ನಾಗತಿಹಳ್ಳಿ ಚಂದ್ರಶೇಖರ್.
ಒಟ್ಟಿನಲ್ಲಿ ಕನ್ನಡದಲ್ಲಿ ಸಿನಿಮಾದ ಕುರಿತು ಅದೆಷ್ಟೇ ಪುಸ್ತಕಗಳು ಬಂದರೂ, ಅದರಿಂದ ಓದುಗರಿಗೆ ಹೆಚ್ಚು ಪ್ರಯೋಜನವಾಗಿಲ್ಲ ಅಥವಾ ಬಹಳಷ್ಟು ಪುಸ್ತಕಗಳು ಓದುಗರಿಗೆ ತಲುಪಿಯೇ ಇಲ್ಲ ಎಂದರೆ ತಪ್ಪಿಲ್ಲ. ಈ ನಿಟ್ಟಿನಲ್ಲಿ ಪುಸ್ತಕ ಬರೆಯುವವರಷ್ಟೇ ಅಲ್ಲ, ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರು ಸಹ ಹೆಚ್ಚು ಪ್ರಯತ್ನ ಮಾಡಿದರೆ, ಈ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪ್ರಿಯವಾಗಬಹುದೇನೋ?
ಚೇತನ್ ನಾಡಿಗೇರ್