Advertisement

ಕನ್ನಡದಲ್ಲೂ ಅರ್ಜಿ ನಮೂನೆಗಳಿವೆ; ಕೇಳಿ ಪಡೆಯಿರಿ

03:30 AM Jul 23, 2017 | |

ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಲ್ಲಿ ನಿಯಮ ಪ್ರಕಾರ ಮಲಯಾಳದೊಂದಿಗೆ ಕನ್ನಡದಲ್ಲೂ ಅರ್ಜಿ ನಮೂನೆಗಳನ್ನು ಒದಗಿಸಬೇಕು. 

Advertisement

ಆದರೆ ಹಲವು ಕಚೇರಿಗಳಲ್ಲಿ ಈ ನಿಯಮವನ್ನು ಪಾಲಿಸುವುದಿಲ್ಲ. ಕನ್ನಡ ಅರ್ಜಿ ನಮೂನೆಯನ್ನು ಕೇಳಿದರೆ “ಇಲ್ಲ’ ಅಥವಾ “ಮುಗಿದಿದೆ’ ಎಂಬ ಉತ್ತರ ದೊರೆಯುತ್ತದೆ. ಆದರೆ ಕಾಸರಗೋಡಿನಲ್ಲಿ ಜಿಲ್ಲಾ ಮಟ್ಟದ ಕೆಲವು ಸರಕಾರಿ ಕಚೇರಿಗಳಲ್ಲಿ ಕನ್ನಡ ಅರ್ಜಿ ನಮೂನೆಗಳು ಲಭ್ಯವಿವೆ. ನೌಕರರು ಸ್ವಯಂ ಪ್ರೇರಣೆಯಿಂದ ಯಾವ ಭಾಷೆಯ ಅರ್ಜಿ ನಮೂನೆ ಬೇಕು ಎಂದು ವಿಚಾರಿಸಿ ಕೊಡುವುದಿಲ್ಲ. ಸಾಮಾನ್ಯವಾಗಿ ಅರ್ಜಿ ನಮೂನೆಗಾಗಿ ವಿಚಾರಿಸಿದರೆ ಮಲಯಾಳ ಅರ್ಜಿ ನಮೂನೆಯೇ ದೊರೆಯುತ್ತದೆ. ಆದರೆ ಕನ್ನಡಿಗರು ಕನ್ನಡ ಅರ್ಜಿ ನಮೂನೆ ಇದೆಯೇ ? ಎಂದು ಕೇಳಿದರೆ ಮಾತ್ರ ಅದನ್ನು ಕೊಡುತ್ತಾರೆ. ಸರಕಾರಿ ಬಸ್‌ಗಳಲ್ಲಿ “ಟಿಕೇಟು ಕೇಳಿ ಪಡೆಯಿರಿ’ ಎಂಬ ನಿಯವಿರುವಂತೆ ಕನ್ನಡಿಗರು ಕನ್ನಡ ಅರ್ಜಿ ನಮೂನೆಯನ್ನು ಕೇಳಿ ಪಡೆದುಕೊಂಡು ಕನ್ನಡದಲ್ಲಿ ಅರ್ಜಿ ಸಲ್ಲಿಸಬೇಕು. ಇಲ್ಲವಾದರೆ ಕನ್ನಡ ಅರ್ಜಿ ನಮೂನೆಗಳು “ಬೇಡಿಕೆಯಿಲ್ಲ’ ಎಂಬ ತೀರ್ಮಾನದೊಂದಿಗೆ ಜನರಿಗೆ ವಿತರಣೆಯಾಗದೆ ಕಚೇರಿಯ ಕಸದ ಬುಟ್ಟಿಗೆ ಸೇರುತ್ತವೆ!

ಸದ್ಯ ಕೇರಳ ಭೂಜಲ ಪ್ರಾಧಿಕಾರ ಹಾಗು ಭೂಜಲ ಇಲಾಖೆಯ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ಕನ್ನಡ ಅರ್ಜಿ ನಮೂನೆಗಳು ದೊರೆಯುತ್ತಿರುವುದು ಕನ್ನಡಿಗರಿಗೆ ನೆಮ್ಮದಿ ನೀಡುತ್ತಿದೆ. ಇಂಗ್ಲಿಷ್‌ನೊಂದಿಗೆ ಕನ್ನಡದಲ್ಲೂ ಮುದ್ರಿತವಾದ ಅರ್ಜಿ ನಮೂನೆಯಲ್ಲಿ ಕೆಲವು ಸಣ್ಣಪುಟ್ಟ ತಪ್ಪುಗಳಿದ್ದರೂ ಕನ್ನಡದಲ್ಲಿ ಅರ್ಜಿ ನಮೂನೆ ಒದಗಿಸುತ್ತಿರುವ ಅಧಿಕಾರಿಗಳ ಸೇವೆ ಶ್ಲಾಘನೀಯ. ನೂತನ ಕೊಳವೆ ಬಾವಿ ಕೊರೆಯಲು ಪರವಾನಿಗೆಗಾಗಿ ಸಲ್ಲಿಸಲಿರುವ ಅರ್ಜಿ ನಮೂನೆ ಕನ್ನಡದಲ್ಲೂ ಇದೆ ಎಂಬುದು ಸಮಾಧಾನಕರ.

ಅಗತ್ಯದ ಕಾರ್ಯಗಳಿಗಾಗಿ ಸರಕಾರಿ ಕಚೇರಿಗಳಿಗೆ ತೆರಳುವ ಕನ್ನಡಿಗರು ನೌಕರರೊಂದಿಗೆ ಮಲಯಾಳದಲ್ಲೇ ವ್ಯವಹರಿಸುವುದು ಸಾಮಾನ್ಯವಾಗುತ್ತಿದೆ. ಇದಕ್ಕೆ ಕಾರಣವೇನೆಂದರೆ ಯಾವ ನೌಕರರಿಗೆ ಕನ್ನಡ ತಿಳಿದಿದೆ ಎಂದು ಜನರಿಗೆ ಗೊತ್ತಿರುವುದಿಲ್ಲ. ಕನ್ನಡ ಅರಿತ ನೌಕರರಿಗೆ ಕನ್ನಡ ತಿಳಿದಿದೆ ಎಂದು ಜನರಿಗೆ ಗೊತ್ತಿರುವುದಿಲ್ಲ. ಕನ್ನಡ ಅರಿತ ನೌಕರರ ಸಂಖ್ಯೆಯೂ ಕಡಿಮೆ. ಕೆಲವು ಕನ್ನಡಿಗ ನೌಕರರು ಕನ್ನಡಿಗರೆಂಬುದು ಅವರ ನಡೆನುಡಿಯಿಂದ ಗೊತ್ತಾಗುವುದಿಲ್ಲ. ದಾಕ್ಷಿಣ್ಯ ಸ್ವಭಾವದ ಕನ್ನಡಿಗರು ಕೂಡ ಅಷ್ಟೆ. ತಮಗೆ ಮಲಯಾಳ ಮಾತನಾಡಲು ತಿಳಿದಿದೆ ಎಂದು ತೋರ್ಪಡಿಸುವುದು. ಮಲಯಾಳದಲ್ಲಿ ಮಾತನಾಡಿದರೆ ಬೇಗ ಕೆಲಸವಾಗುತ್ತದೆ ಎಂದು ತಿಳಿಯುವುದು. 

ಕನ್ನಡಿದಲ್ಲಿ ವ್ಯವಹರಿಸಲು ಅಂಜುವುದು ಕಂಡುಬರುತ್ತದೆ. ಆದರೆ ಜನರು ಮಲಯಾಳದಲ್ಲಿ ವಿಚಾರಿಸಿದರೆ ಅಧಿಕಾರಿಗಳು ಮಲಯಾಳ ಅರ್ಜಿ ನಮೂನೆಯನ್ನೇ ನೀಡುತ್ತಾರೆ. ಕನ್ನಡದಲ್ಲಿ ಅರ್ಜಿ ನಮೂನೆ ಬೇಕು ಎಂದು ಒತ್ತಾಯಿಸಿದರೆ ಮಾತ್ರ ಕನ್ನಡ ಅರ್ಜಿ ನಮೂನೆ ನೀಡುತ್ತಾರೆ. “ಕನ್ನಡ ಅರ್ಜಿ ನಮೂನೆಯೇನೋ ಇದೆ. ಆದರೆ ನೀವು ಅರ್ಜಿ ಸಲ್ಲಿಸುವಾಗ ಮಾತ್ರ ದಯಮಾಡಿ ಇಂಗ್ಲೀಷ್‌ನಲ್ಲಿ ಬರೆಯಿರಿ. ಕನ್ನಡದಲ್ಲಿ ಬರೆದರೆ ನಮಗೆ ಕಷ್ಟವಾಗುತ್ತದೆ. ಇಲ್ಲಿ ಕನ್ನಡ ತಿಳಿದ ನೌಕರರು ಇಲ್ಲ’ ಎಂದು ವಿನಂತಿಸುವ ನೌಕರರೂ ಇದ್ದಾರೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳ – ಕನ್ನಡ (ಅಗತ್ಯವಿದ್ದರೆ ಇಂಗ್ಲೀಷ್‌) ಉಭಯ ಭಾಷೆಗಳಲ್ಲಿ ಮುದ್ರಿತವಾದ ಅರ್ಜಿ ನಮೂನೆಯನ್ನು ಒದಗಿಸಬೇಕು. ಪ್ರತಿ ಕಚೇರಿಯಲ್ಲೂ ಅಗತ್ಯದ ಸಂಖ್ಯೆಯ ಕನ್ನಡ ಬಲ್ಲ ನೌಕರರ ಹುದ್ದೆಯನ್ನು ಪಿ.ಎಸ್‌.ಸಿ.ಗೆ ವರದಿ ಮಾಡಿ ತುಂಬಬೇಕು. 

ಹಾಗಾದರೆ ಮಾತ್ರ ಕನ್ನಡಿಗರ ಸಂಕಷ್ಟ ನೀಗುತ್ತದೆ. ಕನ್ನಡಿಗರು ಕನ್ನಡ ಅರ್ಜಿ ನಮೂನೆಗಾಗಿ ಒತ್ತಾಯಿಸಿ ಪಡೆಯಬೇಕು ಎಂದು ಕನ್ನಡ ಸಂಘಟನೆಗಳು ಕರು ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next