Advertisement
ಸಭೆ ಕರೆದು ಎಚ್ಚರಿಸುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿರುವ ಕಾರಣ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ತಲೆದೋರಿದ್ದು, ಕುಡಿಯುವ ನೀರಿಗಾಗಿ ಕಷ್ಟ ಪಡುವಂತ ದುಸ್ಥಿತಿ ಎದುರಾಗಿದೆ. ತಾಲೂಕಿನಲ್ಲಿ ಕಬಿನಿ, ನುಗು, ತಾರಕ ಜಲಾಶಯಗಳಿದ್ದರೂ ಬೇಸಿಗೆಯಲ್ಲಿ ನೀರಿಗಾಗಿ ಅಲೆದಾಡುವುದು ಮಾತ್ರ ತಪ್ಪುವುದಿಲ್ಲ.
Related Articles
Advertisement
ನೀರಿಗಾಗಿ ಕಿ.ಮೀ. ನಡಿಗೆ: ಅದರೆ, ಇಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಅನೇಕ ಗ್ರಾಮಗಳ ಜನರು ಹನಿ ಹನಿ ನೀರು ಸಂಗ್ರಹಿಸಲು ಕೂಲಿ ಕೆಲಸಕ್ಕೂ ಹೊಗದೆ ದಿನಗಟ್ಟಲೇ ಕಾದು ಕೂರಬೇಕಾದ ದುಸ್ಥಿತಿ ಉದ್ಭವಿಸಿದೆ. ಇನ್ನು ಕೆಲವರು ಮಕ್ಕಳು, ವಯಸ್ಸಾದವರು ಎನ್ನದೇ ಬಿಂದಿಗೆ ಹಿಡಿದು ಅಕ್ಕಪಕ್ಕದ ಜಮೀನಿನಲ್ಲಿರುವ ಕೊಳವೆ ಬಾವಿಗಳಿಂದ ಕಿ.ಮೀ.ಗಟ್ಟಲೆ ನಡೆದು ಕುಡಿಯುವ ನೀರನ್ನು ತರುತ್ತಿರುವ ದೃಶ್ಯ ಮನಕಲಕುತ್ತದೆ.
ಗ್ರಾಮದ ಜನರಿಗೆ ಕನಿಷ್ಠ ಕುಡಿಯುವ ನೀರು ಒದಗಿಸಲು ಉದಾಸೀನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡು ನಮ್ಮ ಸಂಕಷ್ಟಕ್ಕೆ ನೀಗಿಸಿ ಎಂದು ಹಿರೇಹಳ್ಳಿಯ ವೃದ್ಧೆ ಚಿನ್ನಮ್ಮ ಅವಲತ್ತುಕೊಳ್ಳುತ್ತಾರೆ. ಇನ್ನಾದರೂ ತಾಲೂಕು ಆಡಳಿತ ಹಾಗೂ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಜನರು ಜೀವಿಸಲು ಅತ್ಯಮೂಲ್ಯವಾದ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸಲು ಮುಂದಾಗಬೇಕಿದೆ.
ಹಣ ಬಂದಿದೆ, ಕ್ರಿಯಾಯೋಜನೆ ತಯಾರು: ಕುಡಿಯುವ ನೀರು ಸಂಬಂಧ ತೊಂದರೆ ಏರ್ಪಟ್ಟಾಗ ಹಿಂದೆ ಸುಮಾರು 5 ಲಕ್ಷ ರೂ. ವರೆಗೂ ತುರ್ತು ಕ್ರಮವಹಿಸಲು ಅವಕಾಶ ಇತ್ತು. ಈಗ ಸರ್ಕಾರದ ಹಂತದಲ್ಲೇ ಟೆಂಡರ್ ಪ್ರಕ್ರಿಯೆ ಆಗಬೇಕು. ಹೀಗಾಗಿ ಕೆಲವು ಕಡೆ ನೀರಿನ ಸಮಸ್ಯೆ ದೂರಾಗಿಸುವುದು ತಡವಾಗಿರಬಹುದು. ಅಯಾ ಗ್ರಾಮ ಪಂಚಾಯ್ತಿಯವರೇ ಕುಡಿಯುವ ನೀರಿಗೆ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಸರ್ಕಾರದಿಂದ ಕುಡಿಯುವ ನೀರು ಸಂಬಂಧ 25 ಲಕ್ಷ ರೂ. ಅನುದಾನ ಸದ್ಬಳಕೆ ಮಾಡಲಾಗಿದೆ. ಮತ್ತೆ 10 ಲಕ್ಷ ರೂ. ಅನುದಾನ ಬಂದಿದೆ. ಶೀಘ್ರ ಕ್ರಿಯಾಯೋಜನೆ ತಯಾರು ಮಾಡಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ರಾಜ್ ಎಇಇ ಮಹೇಶ್ ತಿಳಿಸಿದ್ದಾರೆ.
* ಬಿ.ನಿಂಗಣ್ಣಕೋಟೆ