ಮೈಸೂರು: ಜಿಲ್ಲಾಡಳಿತ ಎಲ್ಲಡೆ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ 127 ಮಂದಿ ಶಂಕಿತರನ್ನು ಗುರುತಿಸಿದೆ. ಕೊರೊನಾ ಗುಣಲಕ್ಷಣವಿರುವ ಸಂಬಂಧ 127 ಮಂದಿಯನ್ನೂ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 65 ಮಂದಿಯನ್ನು ಮನೆಯಲ್ಲಿ ಪ್ರತ್ಯೇಕಿಸಿ ಪರಿವೀಕ್ಷಣೆ ಮಾಡಲಾಗಿದೆ.
62 ಮಂದಿ ಈಗಾಗಲೇ ಮನೆಯಲ್ಲಿ 14 ದಿನಗಳ ಪರಿವೀಕ್ಷಣೆ ಪೂರೈಸಿದ್ದಾರೆ. ಇವರಲ್ಲಿ ರೋಗದ ಲಕ್ಷಣಗಳು ಕಂಡು ಬಂದಿಲ್ಲ. 127 ಮಂದಿಯಲ್ಲಿ 16 ಮಂದಿಯ ಶಂಕಿತರ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, 16 ಮಂದಿಯಲ್ಲೂ ನೆಗೆಟಿವ್ ಬಂದಿದೆ. ಅಗತ್ಯವಿದ್ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಾಯವಾಣಿ ಸಂಖ್ಯೆ 104 ಮತ್ತು ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ 1077ಗೆ ಕರೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆಯಾಗಿ ರಾಜ್ಯ ಸರ್ಕಾರ ಒಂದು ವಾರ ಬಂದ್ ಘೋಷಿಸಿದ್ದು, 4ನೇ ದಿನವಾದ ಮಂಗಳವಾರವೂ ಯಥಾಸ್ಥಿತಿಯಲ್ಲಿತ್ತು. ನಗರದ ಕೆಲವೆಡೆ ವೈಯಕ್ತಿಕ ವಾಹನ ಸಂಚಾರ ಕೊಂಚ ಮಟ್ಟಿಗೆ ಸಾಮಾನ್ಯ ಸ್ಥಿತಿಯಲ್ಲಿದ್ದರೆ, ಇನ್ನು ಕೆಲವೆಡೆ ರಸ್ತೆಗಳು ಭಣಗುಡುತ್ತಿದ್ದವು.
ಶಾಲಾ-ಕಾಲೇಜು, ಸಿನಿಮಾ ಮಂದಿರ, ಉದ್ಯಾನಗಳಲ್ಲಿ ಬಂದ್ ಮುಂದುವರಿದಿದ್ದು, ನಗರದ ಸಬರ್ಬನ್ ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಇನ್ನು ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿರುವುದರಿಂದ ಮತ್ತು ಪ್ರವಾಸಿ ತಾಣಗಳು ಬಂದ್ ಆಗಿರುವುದರಿಂದ ಚಾಮುಂಡಿ ಬೆಟ್ಟ,
ನಂಜನಗೂಡು, ಶ್ರೀರಂಗಪಟ್ಟಣ, ಕೆಆರ್‌ಎಸ್ ಕಡೆಗೆ ಸಂಚರಿಸುವ ನಗರ ಸಾರಿಗೆಯ ಕೆಲವು ಬಸ್ಸುಗಳ ಓಡಾಟ ಕಡಿಮೆಯಾಗಿತ್ತು. ಹೆಚ್ಚು ಜನಸಂದಣಿ ಸೇರುವ ಜಾಗಗಳನ್ನು ಬಂದ್ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ, ನಗರ ವಿವಿಧೆಡೆ ಅಗ್ರಹಾರ, ಕೆಜಿಕೊಪ್ಪಲು, ಬೋಗಾದಿ ರಸ್ತೆ, ವಿಜಯನಗರ, ದಟ್ಟಗಳ್ಳಿ, ಟಿಕೆ ಲೇಔಟ್ ಇದೇ ಮುಂತಾದ ಕಡೆ ಬಾರ್‌ಗಳು ಎಂದಿನಂತೆ ತೆರೆದೇ ಇದ್ದವು.
ಉಳಿದಂತೆ ಹೋಟೆಲ್ ಮತ್ತು ರೆಸ್ಟೊರೆಂಟ್‌ಗಳಲ್ಲಿ ಅಲ್ಪ ಮಟ್ಟಿನ ಜನಸಂದಣಿ ಕಂಡುಬಂದಿತು. ಜೊತೆಗೆ ರಸ್ತೆ ಬದಿ ವ್ಯಾಪಾರಿಗಳು ಕಳೆದ ನಾಲ್ಕೈದು ದಿನಗಳಿಂದ ವ್ಯಾಪಾರವಿಲ್ಲದೇ ತಮ್ಮ ಅಂಗಡಿ ಮತ್ತು ಫಾಸ್ಟ್‌ಫುಡ್ ಮಳಿಗೆಗಳನ್ನು ಬಂದ್ ಮಾಡಿದ್ದರು.