Advertisement

ಅಂದು ಮಂದಗತಿ, ಈಗ ಕ್ಷಿಪ್ರಗತಿ !

09:22 AM Sep 12, 2019 | sudhir |

ನೂರು ದಿನಗಳ ಆಡಳಿತ ಕಂಡರೆ ಒಂದು ಕಣ್ಣೆದುರು ಬರುವ ಸಂಗತಿಯೆಂದರೆ ನಡೆ ಚುರುಕಾಗಿದೆ ಎಂಬುದು. ಅಂದರೆ ಹಿಂದಿನ ಐದು ವರ್ಷಗಳ ಮುಂದುವರಿದ ನಡೆ ಎಂಬಂತೆ ತೋರುತ್ತದೆ. ಇದು ಒಂದು ಲೆಕ್ಕದಲ್ಲಿ ಆರೋಗ್ಯಕರವಾದದ್ದೇ.

Advertisement

– ಸುಷ್ಮಿತಾ ಜೈನ್‌

2014 ರಲ್ಲಿ ಚರಿತ್ರಾರ್ಹ ಗೆಲುವನ್ನು ದಾಖಲಿಸಿ ಬಿಜೆಪಿಯು ಹತ್ತು ವರ್ಷಗಳ ಯುಪಿಎ ಆಡಳಿತವನ್ನು ಬದಿಗೊತ್ತಿತು. ಅಂದು ಆಡಳಿತ ಆರಂಭಿಸಿದಾಗ ಇದು ಮುಂದಿನ ದಿನಗಳಿಗೂ ಹಾಕುತ್ತಿರುವ ಬುನಾದಿ ಎಂಬುದು ಮೊದಲ ಎರಡು ವರ್ಷಗಳಲ್ಲಿ ಗೋಚರಿಸಿರಲಿಲ್ಲ. ಬಳಿಕ ಕೆಲವು ಸಂದರ್ಭಗಳಲ್ಲಿನ ನಿರ್ಧಾರಗಳು ಬಿಜೆಪಿ ನೇತೃತ್ವದ ಎನ್‌ಡಿಎ ನಡೆಯನ್ನು ಸಾರತೊಡಗಿತು. ಈ ನೂರು ದಿನಗಳಲ್ಲಿನ ನಡೆ ಅದರ ಮುಂದುವರಿಕೆಯಂತೆಯೇ ತೋರುತ್ತಿದೆ. ಜತೆಗೆ ನಡೆಗೆ ಚುರುಕು ಬಂದಿದೆ.

ಚುನಾವಣೆ ವೇಳೆ ನೀಡಿದ ಭರವಸೆಗಳನ್ನು ಕಾರ್ಯಗತಗೊಳಿಸುವತ್ತ ಮನಸ್ಸು ಮಾಡಿದ್ದೇವೆ ಎಂಬುದು ಗೋಚರಿಸುತ್ತಿದೆ. ಕೆಲವೊಮ್ಮೆ ಆದ್ಯತೆಯ ಆಯ್ಕೆಯಲ್ಲಿನ ಪ್ರಬುದ್ಧತೆ ಇನ್ನಷ್ಟು ಬರಬೇಕು ಎನ್ನಿಸುವುದುಂಟು. ಒಂದು ಸರಕಾರದ ಸಾಧನೆಯನ್ನು ನಿರ್ಣಯಿಸಲು 100 ದಿನ ಸೂಕ್ತ ಕಾಲಾವಧಿಯಲ್ಲ. ಆದರೆ, ಮೋದಿ ಸರಕಾರದ ಎರಡನೇ ಅವಧಿಗೆ ನೂರು ದಿನಗಳು ಹೇಗೋ, ಎನ್‌ಡಿಎ ನೇತೃತ್ವದ ಸರಕಾರಕ್ಕೆ 465 ದಿನಗಳೆಂದೂ ವ್ಯಾಖ್ಯಾನಿಸಬಹುದು.
ಭವಿಷ್ಯದ ಪಯಣದ ದೃಷ್ಟಿಯಲ್ಲಿ ಯೋಚಿಸುವುದಾದರೆ ಮೊದಲ ಅವಧಿಯಲ್ಲಿ ಪ್ರಣಾಳಿಕೆಯನ್ನು ಅನುಷ್ಠಾನಗೊಳಿಸುವಲ್ಲಿ ಮಂದಗತಿ ಇತ್ತು. ಅದೀಗ ವೇಗಗೊಂಡಿದೆ.

ಕಳೆದ ಅವಧಿಗಿಂತ ದುಪ್ಟಟ್ಟು ಕ್ಷಿಪ್ರ
ಮೇ 2014ರಲ್ಲಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ನೇತೃತ್ವದ ಸರಕಾರ, ಮೊದಲ ಹೆಜ್ಜೆಯಾಗಿ ಪ್ರತಿಯೊಬ್ಬರೂ ಒಟ್ಟಾಗಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಪ್ರಯತ್ನಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ಒದಗಿಸಲು ಅಂತ್ಯೋದಯ ನೀತಿ ಸೂತ್ರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿತು.
ಆದರೆ ನಿತ್ಯನೂತನ ಪ್ರಕ್ರಿಯೆಯೊಂದಿಗೆ ಪ್ರಗತಿಯ ಹಾದಿಹಿಡಿಯುತ್ತೇವೆ ಎಂಬ ಧ್ಯೇಯ ಸರಕಾರದ್ದಾಗಿತ್ತು. ತನ್ನ ಉದ್ದೇಶಿತ ಸುಧಾರಣೆಯ ಘಟ್ಟ ತಲುಪುವಲ್ಲಿ ನಿಧಾನವೇ ಪ್ರಧಾನ ಎಂಬ ವಾಕ್ಯವನ್ನು ಪರಿಪಾಲಿಸಿತ್ತು.

Advertisement

ಚುನಾವಣೆ ಸಂದಂರ್ಭ ನೀಡಿದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಪೂರ್ಣ ಯಶಸ್ಸು ಸಾಧಿಸಲಿಲ್ಲ. ತ್ರಿವಳಿ ತಲಾಖ್‌, ಜಿಎಸ್‌ಟಿ, ನಗದು ಅಪಮೌಲೀಕರಣದಂಥ ನಿರ್ಧಾರಗಳನ್ನು ನಿರೀಕ್ಷಿತ ವೇಗದಲ್ಲಿ ತರಲು ಹಿಂದೇಟು ಹಾಕುತ್ತಿತ್ತು. ಕಳೆದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ್ದ 549 ರಲ್ಲಿ 520 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ ಎಂಬ ಅಂಕಿ-ಅಂಶಗಳನ್ನು ಬಿಜೆಪಿ ನೀಡಿದ್ದರೂ, ಒಟ್ಟು ಗತಿ ನಿಧಾನವಾಗಿತ್ತು. ಆದರೆ ಈ ಬಾರಿ ಎಚ್ಚೆತ್ತು ಕೊಂಡ ಸರಕಾರ, ನೂರು ದಿನಗಳಲ್ಲಿ ಕ್ಷಿಪ್ರವಾಗಿ ಕಾರ್ಯಾಚರಿಸುತ್ತಿದೆ. ಈಗಾಗಲೇ ಮೂವತ್ತು ಮಸೂದೆಗಳನ್ನು ಅಂಗೀಕರಿಸಿದೆ.

1.0 ಸರಕಾರದ ಭರವಸೆಗೆ ಈಗ ಜೀವ
ಮೋದಿ 1.0 ರಲ್ಲಿ ನೀಡಿದ್ದ ತ್ರಿವಳಿ ತಲಾಖ್‌ ಮಸೂದೆಗೆ ಜೀವ ದೊರಕಿದ್ದು 2.0 ನೇ ಅವಧಿಯಲ್ಲಿ. ಈ ಮಸೂದೆ 3 ಬಾರಿ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ರಾಜ್ಯಸಭೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೆ ಈ ಬಾರಿ ಹಿನ್ನಡೆಯನ್ನು ದಾಟುವಲ್ಲಿ ಯಶಸ್ವಿಯಾಯಿತು.

ಉತ್ಪಾದನಾ ಕೇದ್ರವಾಗಿಸುವ ಚಿತ್ತ
ಭಾರತದಲ್ಲಿ ಉತ್ಪಾದನಾ ಕ್ಷೇತ್ರವನ್ನು ಪ್ರೋತ್ಸಾಹಿಸುವ ಮೂಲಕ ಉದ್ಯಮ ಸ್ನೇಹಿ ದೇಶವಾಗಿಸುವುದು ಮೊದಲ ಅವಧಿಯ ಲೆಕ್ಕಾಚಾರವಾಗಿತ್ತು. ವ್ಯಾಪಾರ ಸ್ನೇಹಿ ವಾತಾವರಣ ನಿರ್ಮಿಸುವ ಭರವಸೆ ನೀಡಿತ್ತು. ಆದರೆ ಈ ನಿಲುವನ್ನು ಜಾರಿಗೊಳಿಸಲೆತ್ನಿಸಿದರೂ ಕೊಂಚ ಎಡವಿತ್ತು. ಅದೀಗ ಸರಿಪಡಿಸುತ್ತಿದೆ. ಈ ಬಾರಿಯ ಪ್ರಣಾಳಿಕೆಯಲ್ಲಿ ವಿಶ್ವ ಬ್ಯಾಂಕಿನ ಈಸ್‌ ಆಫ್ ಡೂಯಿಂಗ್‌ ಬ್ಯುಸಿನೆಸ್‌ ಇಂಡಕ್ಸ್‌ ಅಲ್ಲಿ ಭಾರತ ಅಗ್ರ 50 ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಳ್ಳುವಂತೆ ಮಾಡುವುದರತ್ತ ಚಿತ್ತ ನೆಟ್ಟಿದೆ.

ನೋಟು ಅಮಾನೀಕರಣ, ಸ್ವಚ್ಛ ಭಾರತ್‌ ಮಿಷನ್‌, ಸ್ವದೇಶಿ ಪರಿಕಲ್ಪನೆ, ಬೇಟಿ ಬಚಾವೋ-ಬೇಟಿ ಪಡಾವೋ ಯೋಜನೆಯ ಅನುಷ್ಠಾನ, ಅಂತಾರಾಷ್ಟ್ರೀಯ ಸಂಬಂಧ ನಿರ್ವಹಣೆಯಲ್ಲಿ ಎರಡು ವರ್ಷ ಸಂದರೂ ಹಿಂದುಳಿದಿತ್ತು ಆಗ. ಈ ಸಾಲಿನಲ್ಲಿ ರಾಜಕೀಯ ಬಲವರ್ಧನೆಗೆ ಗಮನವಹಿಸಿದೆ. 370 ಕಾಯ್ದೆ ರದ್ದು ಗೊಳಿಸಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದೆ. ಭಯೋತ್ಪಾದನೆ ವಿರೋಧಿ ಕಾಯ್ದೆ ಜಾರಿಗೆ ಮನಸ್ಸು ಮಾಡಿದ್ದು, ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next