Advertisement

ಅಂದು 2ಜಿ, ಕೋಲ್‌ಗೇಟ್‌, ಇಂದು ರಫೇಲ್‌, ಸರ್ಜಿಕಲ್‌ 

12:30 AM Mar 11, 2019 | |

2014ರ ಲೋಕಸಭೆ ಚುನಾವಣೆ ವೇಳೆ ಅಧಿಕಾರ ದಲ್ಲಿದ್ದದ್ದು ಯುಪಿಎ ಸರಕಾರ. ಈ ಬಾರಿ ಎನ್‌ಡಿಎ ಅಧಿಕಾರದಲ್ಲಿದ್ದುಕೊಂಡು ಚುನಾವಣೆ ಎದುರಿಸುತ್ತಿದೆ. ಅಂದು ಚುನಾವಣಾ ವಿಷಯ ಟುಜಿ, ಕೋಲ್‌ಗೇಟ್‌.. ಇಂದು ರಫೇಲ್‌, ಸರ್ಜಿಕಲ್‌ ಸ್ಟ್ರೈಕ್‌…

Advertisement

2014ರ ಚುನಾವಣೆಯಲ್ಲಿ ಕೇಂದ್ರದ ಯುಪಿಎ ಸರಕಾರದ 10 ವರ್ಷಗಳ ಸಾಧನೆಗಳ ಚರ್ಚೆಗಿಂತ ಯುಪಿಎ ಅವಧಿಯಲ್ಲಿ ನಡೆದಿದ್ದವು ಎನ್ನಲಾದ 2ಜಿ ತರಂಗಾತರ ಹಂಚಿಕೆ ಹಗರಣ, ಕಲ್ಲಿದ್ದಲು ನಿಕ್ಷೇಪ ಹಂಚಿಕೆ (ಕೋಲ್‌ಗೇಟ್‌) ಹಗರಣಗಳು ಹೆಚ್ಚು ಚರ್ಚಿತ ವಾಗಿದ್ದವು. ಅಲ್ಲದೆ ಬಿಜೆಪಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಉಳಿದೆಲ್ಲ ವಿಷಯಗಳಿಗಿಂತ ಮೋದಿ ಕೇಂದ್ರಕ್ಕೆ ಆಗಮನದ ವಿಷಯವೇ ದೊಡ್ಡ ಮಟ್ಟದ ಪ್ರಚಾರ ಪಡೆದುಕೊಂಡಿತ್ತು. 

ಆಗಿನ ಯುಪಿಎ ಸರಕಾರದಲ್ಲಿ 10 ವರ್ಷ ಪ್ರಧಾನಿಯಾಗಿದ್ದ ಡಾ| ಮನಮೋಹನ್‌ಸಿಂಗ್‌ ಅವರ ವಿರುದ್ಧ ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪ ಕೇಳಿ ಬರದಿದ್ದರೂ, ಅವರ ಸಂಪುಟದ ಸಹೋದ್ಯೋಗಿಗಳ ವಿರುದ್ಧ ಭ್ರಷ್ಟಾಚಾರದ ಸರಮಾಲೆಗಳೇ ಕೇಳಿ ಬಂದಿದ್ದವು. ಹೀಗಾಗಿ ಇಡೀ ಚುನಾವಣೆ ಮೋದಿ ಆಗಮನ ಮತ್ತು ಭ್ರಷ್ಟಾಚಾರದ ವಿಷಯಗಳ ಮೇಲೆಯೇ ನಡೆಯಿತು.

ಭರವಸೆ ಈಡೇರಿಲ್ಲವೆಂಬ ಆರೋಪ: 5 ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶದ ಜನತೆಗೆ ನೀಡಿದ ಭರವಸೆಗಳಲ್ಲಿ ಪ್ರಮುಖವಾಗಿ, ವಿದೇಶದಲ್ಲಿರುವ ಕಪ್ಪು ಹಣ ವಾಪಸ್‌ ತರುವುದು, ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂ. ಹಣ ಹಾಕುವುದು, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಆದಾಯ ದ್ವಿಗುಣಗೊಳಿಸುವ ಪ್ರಮುಖ ಭರವಸೆ ಈಡೇರಿಲ್ಲ ಎಂಬ ಆರೋಪ ಕಾಂಗ್ರೆಸ್‌ನದ್ದು. ಕೇಂದ್ರ ಸರಕಾರ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ಮಾಡಿದೆ ಎಂಬ ಆರೋಪ ಹಾಗೂ ಪ್ರಧಾನಿ ಮೋದಿ ಆಡಳಿತದ ಕಾರ್ಯ ವೈಖರಿ ಮತ್ತಿತರ ವಿಚಾರಗಳು ಈ ಬಾರಿ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆ ಇದೆ. ಅಲ್ಲದೆ ಮೋದಿ ನಿರ್ಗಮನ ಇಲ್ಲವೇ ಪುನಾರಾಗಮನದ ವಿಷಯ ಹೆಚ್ಚು ಚರ್ಚೆಯ ವಿಷಯವಾಗಲಿದೆ.

ವಾಗ್ಯುದ್ಧœಕ್ಕೆ ವೇದಿಕೆ: ಈ ಮಧ್ಯೆ, ಇತ್ತೀಚೆಗೆ ಪುಲ್ವಾಮಾ ಮೇಲೆ ನಡೆದ ಉಗ್ರರ ದಾಳಿ, ಅದಕ್ಕೆ  ಪ್ರತೀಕಾರವಾಗಿ ಬಾಲಾಕೋಟ್‌ನಲ್ಲಿ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಪ್ರಮುಖ ಚುನಾವಣಾ ವಿಷಯವಾಗುವ ಲಕ್ಷಣ ಕಾಣುತ್ತಿವೆ. ಚುನಾವಣೆಯಲ್ಲಿ ಸೇನೆಯ ಸಾಧನೆಯೂ ರಾಜಕೀಯ ಪಕ್ಷಗಳ ವಾಕ್‌ ಯುದ್ಧಕ್ಕೆ ಪ್ರಮುಖ ವಿಷಯವಾಗುವ ಸಾಧ್ಯತೆ ಹೆಚ್ಚಿದೆ. 

Advertisement

ಸ್ಥಳೀಯ ವಿಷಯಗಳು ಗೌಣ
ಲೋಕಸಭೆ ಚುನಾವಣೆಗೆ ಪ್ರತಿ ಬಾರಿಯೂ ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿದ್ದರೂ, ರಾಷ್ಟ್ರೀಯ ನಾಯಕರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಸಂಸದರು ಹಾಗೂ ರಾಜ್ಯ ಮಟ್ಟದ ವಿಷಯಗಳಿಗೆ ಸೀಮಿತವಾಗಿ ಚರ್ಚೆ ನಡೆಯುವುದು ಕಡಿಮೆ.  ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಅಥವಾ ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿರುವ ಯೋಜನೆಗಳು, ವೈಯಕ್ತಿಕವಾಗಿ ಸಂಸದರು ತಮ್ಮ ಕ್ಷೇತ್ರ ಅಥವಾ ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಮಹತ್ವ ಕಳೆದುಕೊಂಡು ಪ್ರಧಾನಿ ಮೋದಿ ಸಾಧನೆ, ವೈಫ‌ಲ್ಯ ಹಾಗೂ ರಫೇಲ್‌ ಹಗರಣದಂತಹ ವಿಷಯಗಳೇ ಹೆಚ್ಚು ಚರ್ಚಿತವಾಗುವ ಸಾಧ್ಯತೆ ಇದೆ.  

Advertisement

Udayavani is now on Telegram. Click here to join our channel and stay updated with the latest news.

Next