ತೆಕ್ಕಟ್ಟೆ: ಇಲ್ಲಿನ ರಾ.ಹೆ.66ರ ಸಮೀಪದಲ್ಲಿರುವ ಶಾನುಭಾಗ್ ಕಾಂಪ್ಲೆಕ್ಸ್‌ನಲ್ಲಿರುವ ಚಿನ್ನದ ಅಂಗಡಿಯಿಂದ ಮುಸುಕುಧಾರಿಗಳ ತಂಡವೊಂದು ಕಳವಿಗೆ ಯತ್ನಿಸಿದ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ. ತಂಡದ ಚಲನವಲನಗಳು ಕಾಂಪ್ಲೆಕ್ಸ್‌ನಲ್ಲಿದ್ದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಆದರೆ ಈ ಬಗ್ಗೆ ಯಾರೂ ದೂರು ದಾಖಲಿಸಿಲ್ಲ.
ಡಿ.21 ರಂದು ತೆಕ್ಕಟ್ಟೆ ಕೆನರಾ ಬ್ಯಾಂಕ್ ಸಮೀಪದ ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿರುವ ಮೀನಾಕ್ಷಿ ಫರ್ನಿಚರ್ ಶೋ ರೂಮ್, ಗೋದಾಮು, ಟೈಲರ್ ಶಾಪ್‌ನ ಶಟ್ಟರ್‌ನ ಬೀಗ ಮುರಿದು ನುಗಿದ್ದ ಕಳ್ಳರು ಕಳವಿಗೆ ಯತ್ನಿಸಿದ್ದರು. ಈಗ ಮತ್ತೆ ಚಿನ್ನದ ಅಂಗಡಿಯ ಬೀಗ ಮುರಿಯಲು ಯತ್ನಿಸಿರುವುದು ಆತಂಕ ಮೂಡಿಸಿದೆ. ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದರೂ ಸಂಬಂಧಪಟ್ಟ ಅಂಗಡಿ ಮಾಲಕರು ಪೊಲೀಸರ ಗಮನಕ್ಕೆ ತರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಚರ್ಚೆ ಜೋರಾಗಿದೆ.
ಚಿನ್ನದಂಗಡಿಯಲ್ಲದೆ, ಶಾನುಭಾಗ್ ಕಾಂಪ್ಲೆಕ್ಸ್‌ನ ಇನ್ನೂ ಕೆಲವು ಅಂಗಡಿಗಳ ಸಮೀಪ ಈ ತಂಡ ಸುತ್ತಾಡಿರುವುದು ಸಿಸಿಕೆಮರಾದಲ್ಲಿ ಸೆರೆಯಾಗಿದೆ.
ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಟ್ಟೆಯ ಪ್ರಮುಖ ಭಾಗದಲ್ಲಿ ಎರಡು ಕಡೆಗಳಲ್ಲಿ ಸಂಭವಿಸಿದೆ ಎನ್ನಲಾದ ಕಳವು ಯತ್ನದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಡಾ| ಅರುಣ್ ಕೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು.