ತೆಕ್ಕಟ್ಟೆ: ಕಲಾ ಅಭಿವ್ಯಕ್ತಿಗೆ ಕಲಾವಿದನಲ್ಲಿ ಉತ್ತಮ ಸಂಸ್ಕಾರ ಹಾಗೂ ವಿಭಿನ್ನ ಕಲ್ಪನೆಗಳು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ಪ್ರಸಿದ್ಧ ಯಕ್ಷ ಕಲಾವಿದ ಶಶಿಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.
ಇಲ್ಲಿನ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಮತ್ತು ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಜಂಟಿ ಆಶ್ರಯದಲ್ಲಿ ರಜಾರಂಗು 2019, 30 ದಿನಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಗಣೇಶ್ ಸಿಲ್ಕ್ನ ಆಡಳಿತ ನಿರ್ದೇಶಕ ಅನಂತ ನಾಯಕ್ ತೆಕ್ಕಟ್ಟೆ ಮಾತನಾಡಿ, ಬದಲಾದ ವೇಗದ ಬದುಕಿನಲ್ಲಿ ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಆಧುನಿಕ ಜಗತ್ತು ಮಕ್ಕಳ ಸುಂದರ ಬಾಲ್ಯಗಳನ್ನು ಕಸಿಯುತ್ತಿದೆ ಎನ್ನುವ ಆತಂಕದ ನಡುವೆಯೂ ಕೂಡಾ ಇಂತಹ ವಿಭಿನ್ನ ಶಿಬಿರಗಳಲ್ಲಿ ಜಿಲ್ಲೆಯ ನೂರಾರು ಮಕ್ಕಳು ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಹೇಳಿದರು.
ಉದ್ಯಮಿ ಮಂಜುನಾಥ ಪ್ರಭು, ಸಮರ್ಥ ಟ್ರೇಡರ್ನ ಮಾಲಕ ಉದ್ಯಮಿ ರಾಮಚಂದ್ರ ನಾಯಕ್, ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಕೊ„ಕೂರು ಸೀತಾರಾಮ ಶೆಟ್ಟಿ , ಯಕ್ಷ ದೇಗುಲದ ಕೋಟ ಸುದರ್ಶನ ಉರಾಳ, ಉಪನ್ಯಾಸಕ ಮೋಹನ್‌ಚಂದ್ರ ಪಂಜಿಗಾರು , ನಾಟಕ ನಿರ್ದೇಶಕ ರೋಹಿತ್ ಎಸ್. ಬೈಕಾಡಿ, ಭಾಗವತ ಲಂಬೋದರ ಹೆಗಡೆ, ವೆಂಕಟೇಶ್ ವೈದ್ಯ ಕೊಮೆ, ಹವ್ಯಾಸಿ ಯಕ್ಷ ಛಾಯಾಚಿತ್ರ ಗ್ರಾಹಕ ಪ್ರಶಾಂತ್ ಮಲ್ಯಾಡಿ, ಸುಜಿತ್ ಮಲ್ಯಾಡಿ, ಲೋಹಿತ್ ಕೊಮೆ, ಕಲಾವಿದೆ ಸುಪ್ರೀತಾ ವೈದ್ಯ ಕೊಮೆ ಮತ್ತಿತರರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಚಿತ್ರಕಲಾ ಶಿಕ್ಷಕ ರಾಘವೇಂದ್ರ ಚಾತ್ರಮಕ್ಕಿ ಅವರು ವಿದ್ಯಾರ್ಥಿಗಳಿಗೆ ಚಿತ್ರ ಚಿತ್ತಾರದ ಕುರಿತು ವಿಭಿನ್ನ ಚಟುವಟಿಕೆಯನ್ನು ಅಭಿವ್ಯಕ್ತಿಸಿದರು.
ಉಪನ್ಯಾಸಕ ಸುಜಯೀಂದ್ರ ಹಂದೆ ನಿರೂಪಿಸಿ, ವಂದಿಸಿದರು.
ಚಿಣ್ಣರ ಚಿತ್ತಾರ
ಈ ಶಿಬಿರದಲ್ಲಿ ಪಾಲ್ಗೊಂಡ ಸುಮಾರು 130ಕ್ಕೂ ಅಧಿಕ ಪುಟಾಣಿಗಳು ತಮಗೆ ಇಷ್ಟವಾದ ವಿಭಿನ್ನ ವರ್ಣಗಳನ್ನು ಆಯ್ಕೆ ಮಾಡಿಕೊಂಡು, ತಮ್ಮ ಹಸ್ತದಲ್ಲಿ ಮೂಲ ವರ್ಣಗಳನ್ನು ತೆಗೆದುಕೊಂಡು ಬೃಹತ್ ಕ್ಯಾನ್‌ವಾಸ್ ಚೌಕಟ್ಟಿನ ಒಳಗೆ ವಿದ್ಯಾರ್ಥಿಗಳು ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಅಂತಿಮವಾಗಿ ವಿಭಿನ್ನ ವರ್ಣಗಳಲ್ಲಿ ಸಂಯೋಜನೆಗೊಂಡ ನೂರಾರು ಹಸ್ತಗಳು ಬೃಹತ್ ಮರಗಳ ಎಲೆಯಂತೆ ಪ್ರತಿಫಲಿತಗೊಂಡಿರುವುದು ಎಲ್ಲರ ಗಮನ ಸೆಳೆಯಿತು.