Advertisement

ತೆಕ್ಕಟ್ಟೆ : ಬಸ್‌ ನಿಲ್ದಾಣ ಏಕಾಏಕಿ ಸ್ಥಳಾಂತರ

06:15 AM Aug 03, 2018 | Team Udayavani |

ತೆಕ್ಕಟ್ಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಬಸ್‌ ನಿಲ್ದಾಣವ‌ನ್ನು ಏಕಾಏಕಿ ಸ್ಥಳಾಂತರಿಸಿರುವು ದರ ವಿರುದ್ಧ ಸಾರ್ವಜನಿಕರು ತೆಕ್ಕಟ್ಟೆ ಗ್ರಾ.ಪಂ. ಎದುರು ತೀವ್ರ ಪ್ರತಿಭಟನೆ ನಡೆಸಿದರು. ಬಸ್‌ ತಂಗುದಾಣ ಸ್ಥಳಾಂತರಿಸುವ ಮೊದಲು ಗ್ರಾ.ಪಂ. ಜನಾಭಿಪ್ರಾಯ ಪಡೆದಿಲ್ಲ. ನಿರ್ಣಯವನ್ನೂ ಕೈಗೊಂಡಿಲ್ಲ. ಏಕಾಏಕಿ ಅಪ್ರಸ್ತುತ ಪ್ರದೇಶಕ್ಕೆ ನಿಲ್ದಾಣ ಸ್ಥಳಾಂತರಿಸಲಾಗಿದೆ ಎಂದು ಜನರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ  ತಹಶೀಲ್ದಾರ್‌ ಅವರೂ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದರು. 

Advertisement

ಮಾತಿನ ಚಕಮಕಿ 
ಬಸ್‌ ನಿಲ್ದಾಣ ಸ್ಥಳಾಂತರ ಬಗ್ಗೆ ಗ್ರಾ.ಪಂ. ನಿರ್ಣಯ ಕೈಗೊಂಡಿದೆಯೇ? ನಿರ್ಣಯ ಕೈಗೊಂಡಿದ್ದರೆ ಅದರ ಪ್ರತಿ ನೀಡುವಂತೆ ಸಾರ್ವಜನಿಕರು ಗ್ರಾ.ಪಂ.ಅಧ್ಯಕ್ಷ ಶೇಖರ್‌ ಕಾಂಚನ್‌ ಅವರನ್ನು ಆಗ್ರಹಿಸಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಜತೆಗೆ ಸ್ಥಳೀಯರಾದ ಅವಿನಾಶ್‌ ಶೆಟ್ಟಿ ಪ್ರತಿಕ್ರಿಯಿಸಿ ತಂಗುದಾಣ ವಿಚಾರದಲ್ಲಿ ಗ್ರಾ.ಪಂ.ಗೆ ಸಂಬಂಧವಿಲ್ಲದಿದ್ದರೆ ಲಿಖೀತ ರೂಪದಲ್ಲಿ ಕೊಡಿ. ಅಥವಾ ಗಮನಕ್ಕೆ ತಾರದೆ ಸ್ಥಳಾಂತರಿಸಿದ್ದರೆ ತಂಗುದಾಣ ನಿರ್ಮಿಸಿರುವುದನ್ನು ತತ್‌ಕ್ಷಣವೇ ತೆರವುಗೊಳಿಸಬೇಕು. ಇಲ್ಲದಿದ್ದರೆ  ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದರು. 
 
ಗ್ರಾ.ಪಂ. ಸದಸ್ಯ ವಿಜಯ ಭಂಡಾರಿ, ಸತೀಶ್‌ ದೇವಾಡಿಗ ಕಂಚುಗಾರ್‌ಬೆಟ್ಟು , ಶಂಕರ ದೇವಾಡಿಗ, ಸುಧೀಂದ್ರ ಗಾಣಿಗ, ಶ್ರೀನಾಥ ಶೆಟ್ಟಿ, ಕಿರಣ್‌ ಪೂಜಾರಿ, ಗಣೇಶ್‌, ಶ್ರೀಧರ ಆಚಾರ್ಯ, ದಿನಕರ ಕಂಬಳಗದ್ದೆ ಬೆಟ್ಟು ಮತ್ತಿತರರಿದ್ದರು.

ಏನಿದು ವಿವಾದ?  
ಚತುಷ್ಪಥ ಹೆದ್ದಾರಿ ನಿರ್ಮಾಣದ ವೇಳೆ ಶಾಶ್ವತ ಬಸ್‌ ನಿಲ್ದಾಣಕ್ಕೆ ಅವಕಾಶ ನೀಡದ್ದರಿಂದ ಸ್ಥಳೀಯ ಸಂಘ ಸಂಸ್ಥೆಗಳ ನೆರವಿನಿಂದ ತಾತ್ಕಾಲಿಕ ಬಸ್‌ ನಿಲ್ದಾಣ  ನಿರ್ಮಿಸಲಾಗಿತ್ತು. ಇದರಿಂದ ಮಲ್ಯಾಡಿ ಒಳ ಮಾರ್ಗದಿಂದ ರಾ.ಹೆದ್ದಾರಿಗೆ ಪ್ರವೇಶಿಸುವ ವಾಹನ ಸವಾರರಿಗೆ ಗೊಂದಲ ಏರ್ಪಟ್ಟು ಅವಘಡಕ್ಕೆ ಕಾರಣವಾಗು ತ್ತಿರುವ ಬಗ್ಗೆ  ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಗ್ರಾ.ಪಂ. ಬಸ್‌ ನಿಲುಗಡೆ ಸ್ಥಳ ಬದಲಾಯಿಸಿದ್ದು, ಸೂಚನಾ ಫ‌ಲಕ ಅಳವಡಿಸಿತ್ತು.  

ಮಹತ್ವದ ನಿರ್ಣಯ
ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ  ಒಟ್ಟು 4 ತಾತ್ಕಾಲಿಕ ತಂಗುದಾಣಗಳಿವೆ .ಆದರೆ ಯಾವುದಕ್ಕೂ ಕೂಡಾ ಗ್ರಾ.ಪಂ. ಪರವಾನಿಗೆ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ನಿರ್ದೇಶಕ್ಕೆ  ಬದ್ಧರಾಗಿದ್ದು  ಮುಂದಿನ ದಿನಗಳಲ್ಲಿ ಜನಾಭಿಪ್ರಾಯಗಳಿಗೆ ಅನುಗುಣವಾಗಿ ಮಹತ್ವದ ನಿರ್ಣಯವನ್ನು ಕೈಗೊಳ್ಳುತ್ತೇವೆ.

ಶೇಖರ್‌ ಕಾಂಚನ್‌ ಕೊಮೆ
ಅಧ್ಯಕ್ಷರು,ಗ್ರಾ.ಪಂ.ತೆಕ್ಕಟ್ಟೆ.

ಸ್ಥಳ ಪರಿಶೀಲನೆಗೆ ಆದೇಶ 
ಬಸ್‌ ತಂಗುದಾಣದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ  ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸ್ಥಳ ಪರಿಶೀಲಿಸುವಂತೆ ಆದೇಶಿಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ನಿಯಮ ಮೀರಿ ಬಸ್‌ ತಂಗುದಾಣ ನಿರ್ಮಿಸದಂತೆ ಆದೇಶಿಸಲಾಗಿದೆ.

– ಪ್ರಿಯಾಂಕಾ ಮೇರಿ  ಫ್ರಾನ್ಸಿಸ್‌,ಜಿಲ್ಲಾಧಿಕಾರಿಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next