Advertisement

Thekkatte: ಹೆದ್ದಾರಿ ಹೊಡೆತದಿಂದ ತೆಕ್ಕಟ್ಟೆ ಕನ್ನಡ ಶಾಲೆ ಉಳಿಸಿ

05:10 PM Oct 24, 2024 | Team Udayavani |

ತೆಕ್ಕಟ್ಟೆ: ಶತಮಾನೋತ್ತರ ಬೆಳ್ಳಿಹಬ್ಬ ಆಚರಿಸಿದ ತೆಕ್ಕಟ್ಟೆ ಪಿಎಂಶ್ರೀ ಕುವೆಂಪು ಶತಮಾನೊತ್ಸವ ಸರಕಾರಿ ಮಾದರಿ ಶಾಲೆಯ ಕಟ್ಟಡವನ್ನು ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಹೊಡೆತದಿಂದ ರಕ್ಷಿಸಿ ಎಂಬ ಕೂಗು ಜೋರಾಗಿದೆ.

Advertisement

ಶಾಲಾ ಶತಮಾನೋತ್ಸವ ಸಂದರ್ಭದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣವಾಗಿರುವ ಶಾಲಾ ಕಟ್ಟಡವನ್ನು ಶೇ.70 ರಷ್ಟು ತೆರವುಗೊಳಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಆದರೆ, ಇದನ್ನು ತೆರವುಗೊಳಿಸಿದರೆ 130ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತರಗತಿ ಕೋಣೆಯ ಕೊರತೆ ಎದುರಾಗಲಿದೆ.

1892ರಲ್ಲಿ ಸ್ಥಾಪಿತಗೊಂಡ ತೆಕ್ಕಟ್ಟೆ ಪಿಎಂಶ್ರೀ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆಯು ಗುಣಾತ್ಮಕ ಶಿಕ್ಷಣಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿದೆ. ಇಲಾಖೆಯಿಂದ ಎ ಗ್ರೇಡ್‌ ಪಡೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಇಲ್ಲಿ ಸುಮಾರು 672 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, ಇಂಥ ಶಾಲೆಯ ಕಟ್ಟಡಕ್ಕೆ ಈಗ ಗ್ರಹಣ ಬಡಿದಿದೆ.

ಏನಿದು ಸಮಸ್ಯೆ?
1996ರಲ್ಲಿ ಶತಮಾನೋತ್ಸವ ಕಟ್ಟಡ ನಿರ್ಮಾಣವಾಗಿದ್ದು, ಅದರಲ್ಲಿನ 5 ತರಗತಿ ಕೋಣೆಗಳಲ್ಲಿ 2,4,5, ಹಾಗೂ 7ನೇ ತರಗತಿಯ ಸುಮಾರು 130ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕುಂದಾಪುರ – ಸುರತ್ಕಲ್‌ ರಾ.ಹೆ.66 ಚತುಷ್ಪಥ ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್‌ ರಸ್ತೆ ನಿರ್ಮಾಣಕ್ಕಾಗಿ ಈ ಕಟ್ಟಡವನ್ನು ತೆರವು ಮಾಡಬೇಕು ಎಂದು ಸೂಚಿಸಿದೆ. ಅ.18ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾಜೆಕ್ಟ್ ಡೈರೆಕ್ಟರ್‌ ಅಬ್ದುಲ್‌ ಜಾವಿದ್‌ ಅವರ ತಂಡ ಸ್ಥಳಕ್ಕೆ ಧಾವಿಸಿ ಕಟ್ಟಡ ತೆರವಿಗೆ ಕೊನೆಯ ಸೂಚನೆ ನೀಡಿದೆ.

ವಿದ್ಯಾರ್ಥಿಗಳಿಗೆ ತೊಂದರೆ
ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಈಗಾಗಲೇ ಸಂಬಂಧ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಎರಡನೆಯ ಸ್ಥಾನದಲ್ಲಿರುವ ಸಂಸ್ಥೆಯ ಕಟ್ಟಡ ತೆರವಿಗೆ ಏಕಾಏಕಿ ಮುಂದಾದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈ ಕುರಿತು ವಿದ್ಯಾಂಗ ಉಪನಿರ್ದೇಶಕರು ಹಾಗೂ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ.
– ಲಲಿತಾ ಸಖರಾಮ್‌, ಪದವೀಧರೇತರ ಮುಖ್ಯ ಶಿಕ್ಷಕರು

Advertisement

ಕಾಲಾವಕಾಶ ನೀಡಬೇಕು
ಕಟ್ಟಡ ತೆರವಾದರೆ ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳಿಲ್ಲದೇ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಸರಕಾರ ಶಾಲಾ ಕಟ್ಟಡ ನಿರ್ಮಾಣಕ್ಕೆ ತುರ್ತು ಅನುದಾನ ನೀಡಿ ನೂತನ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಹೆದ್ದಾರಿ ಪ್ರಾಧಿಕಾರದವರು ಒಂದು ವರ್ಷವಾದರೂ ಕಾಲಾವಕಾಶ ನೀಡಬೇಕು.
– ರಾಘವೇಂದ್ರ ದೇವಾಡಿಗ, ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

ಪರಿಹಾರ ಹಿಂಪಡೆದಿತ್ತು!
ನಿಜವೆಂದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಶಾಲಾ ಕಟ್ಟಡದ ಪರಿಹಾರದ ಮೊತ್ತ ಸುಮಾರು 20.99 ಲಕ್ಷ ರೂ. ಸಂಸ್ಥೆಗೆ ನೀಡಲಾಗಿತ್ತಾದರೂ ಕೊರೊನಾ ಕಾಲದಲ್ಲಿ ಹೆಚ್ಚುವರಿ ಪರಿಹಾರ ಮೊತ್ತವನ್ನು ವಾಪಸ್‌ ಪಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next