ತೆಕ್ಕಟ್ಟೆ: ಇಲ್ಲಿನ ಬೇಳೂರು ಗ್ರಾಮ ಪಂಚಾಯತ್‌ನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯಂತ್ ಅವರು ಮಹಿಳೆಯೋರ್ವರ ಬಳಿ ತೆಕ್ಕಟ್ಟೆ ರಾ.ಹೆ. 66 ಜಂಕ್ಷನ್‌ನಲ್ಲಿ ಲಂಚದ ಹಣವನ್ನು ಡಿ. 12 ರಂದು ಸ್ವೀಕರಿಸುತ್ತಿರುವ ಸಂದರ್ಭ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಬೇಳೂರು ಗ್ರಾಮ ಪಂಚಾಯತ್‌ನಲ್ಲಿ ಕಳೆದ ಹಲವು ವರ್ಷಗಳಿಂದಲೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯಂತ್ ಅವರು ಸ್ಥಳೀಯ ನಿವಾಸಿ ಸುಜಾತಾ ಮೊಗೆಬೆಟ್ಟು ಅವರ ತಾಯಿ ರಾಧಾ ಮರಕಾಲಿ ¤ಅವರ ಹೆಸರಿನಲ್ಲಿರುವ ಜಾಗದಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ಮಂಜೂರಾಗಿರುವ ಒಟ್ಟು ನಾಲ್ಕು ಕಂತಿನ ಹಣ ರೂ, 1,20,000 ಹಣ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಅರ್ಧಾಂಶ ಹಣ ಮಂಜೂರು ಮಾಡಿಸಲು ರೂ.10 ಸಾವಿರ ಖರ್ಚಾಗಿದ್ದು, ಆ ಹಣವನ್ನು ವಾಪಾಸು ಕೊಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಉಡುಪಿ ಲೋಕಾಯುಕ್ತ ಠಾಣೆಗೆ ದೂರು ನೀಡಿಲಾಗಿತ್ತು.
ಈ ಹಿನ್ನೆಲೆಯಲ್ಲಿ ಸುಜಾತ ಮೊಗೆಬೆಟ್ಟು ಅವರ ಬಳಿ ಡಿ.12 ರಂದು ಲಂಚದ ಹಣ ರೂ.10 ಸಾವಿರವನ್ನು ತೆಕ್ಕಟ್ಟೆ ರಾ.ಹೆ.66 ಜಂಕ್ಷನ್‌ನಲ್ಲಿ ಪಿಡಿಒ ಜಯಂತ್ ಸ್ವೀಕರಿಸುತ್ತಿರುವ ಸಂದರ್ಭದಲ್ಲಿಯೇ ಉಡುಪಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರಫೀಕ್ ಎಂ. ಹಾಗೂ ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಸಿನಿಮೀಯಾ ಮಾದರಿಯಲ್ಲಿ ದಾಳಿ ನಡೆಸಿದ ಲೋಕಾಯುಕ್ತ ತಂಡ
ತೆಕ್ಕಟ್ಟೆ ಪ್ರಮುಖ ಭಾಗದಲ್ಲಿ ಪಿಡಿಒ ಬೈಕ್‌ನಲ್ಲಿ ಬಂದು ಕಾರಿನಲ್ಲಿದ್ದ ಸುಜಾತಾ ಮೊಗೆಬೆಟ್ಟು ಅವರ ಬಳಿ ಲಂಚದ ಹಣ ರೂ. 10 ಸಾವಿರವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹೊಂಚು ಹಾಕಿ ಕುಳಿತಿದ್ದ ಉಡುಪಿ ಲೋಕಾಯುಕ್ತ ಪೊಲೀಸರ ತಂಡ ಸಿನಿಮೀಯ ಮಾದರಿಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿತ್ತು.
ಮಂಗಳೂರಿನ ಲೋಕಾಯುಕ್ತ ಅಧೀಕ್ಷಕ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ದಿವೈಎಸ್‌ಪಿ ಕೆ.ಸಿ. ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಡುಪಿ ಲೋಕಾಯುಕ್ತ ನಿರೀಕ್ಷಕ ರಫೀಕ್ ಎಂ., ಸಿಬಂದಿಗಳಾದ ನಾಗೇಶ್ ಉಡುಪ, ರಾಘವೇಂದ್ರ, ನಾಗರಾಜ್, ರೋಹಿತ್, ಮಲ್ಲಿಕಾ, ಸತೀಶ್ ಹಂದಾಡಿ, ಅಬ್ದುಲ್ , ಪ್ರಸನ್ನ ದೇವಾಡಿಗ, ರಾಘವೇಂದ್ರ ಹೊಸ್ಕೋಟೆ, ಸತೀಶ್ ಆಚಾರ್ಯ, ಸೂರಜ್ ಅವರು ಭಾಗವಹಿಸಿದ್ದರು.