Advertisement

ಒಂದೇ ದಿನಕ್ಕೆ 101 ವಿದ್ಯಾರ್ಥಿಗಳ ದಾಖಲಾತಿ

06:15 AM May 29, 2018 | |

ತೆಕ್ಕಟ್ಟೆ : ಬದಲಾದ ಶಿಕ್ಷಣ ವ್ಯವಸ್ಥೆಯ ನಡುವೆಯೂ ಕುಂದಾಪುರ ತಾಲೂಕಿನ ಉತ್ತಮ ಶಾಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆಯು ಗುಣಾತ್ಮಕ ಶಿಕ್ಷಣಕ್ಕಾಗಿ ಇಲಾಖೆಯಿಂದ “ಎ’ ಗ್ರೇಡ್‌ ಪಡೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದು ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಕನ್ನಡ ಶಾಲೆಯೊಂದು ಒಂದೇ ದಿನಕ್ಕೆ ಸುಮಾರು 101 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿಯೇ ವಿಶೇಷ ಸಾಧನೆ ಮರೆದಿದೆ.

Advertisement

ವಿಶೇಷತೆಗಳು
2017-18ನೇ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭ, ಉತ್ತಮ ಶಾಲಾ ರಾಜ್ಯ ಪ್ರಶಸ್ತಿ ಪಡೆದ ರಾಜ್ಯದಲ್ಲಿಯೇ ಏಕೈಕ ಶಾಲೆ ಎನ್ನುವ ಹಿರಿಮೆ, ಕುಂದಾಪುರ ತಾಲೂಕಿನಲ್ಲಿಯೇ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆ, ಚಿಣ್ಣರ ಚಟುವಟಿಕೆಗಾಗಿ ಆಕರ್ಷಕ ಚಿಲ್ಡನ್‌ ಪಾರ್ಕ್‌, ಕಂಪ್ಯೂಟರ್‌ ಹಾಗೂ ಚಿತ್ರಕಲಾ ತರಬೇತಿ ಶಿಕ್ಷಣ ವ್ಯವಸ್ಥೆ, ವಿಜ್ಞಾನ ಕಲಿಕೆಗೆ ಸುಸಜ್ಜಿತ ಪ್ರತ್ಯೇಕ ಪ್ರಯೋಗಾಲಯ, ಗುಣಮಟ್ಟದ ಶಿಕ್ಷಣಕ್ಕಾಗಿ ಬೋಧನಾ ಕಲಿಕಾ ಸಾಮಾಗ್ರಿಗಳ ಬಳಕೆ, ಸಹ ಪಠ್ಯ ಚಟುವಟಿಕೆಯೊಂದಿಗೆ ಸ್ಕೌಟ್ಸ್‌ , ಗೈಡ್ಸ್‌, ಕಬ್ಸ್, ಬುಲ್‌ ಬುಲ್‌, ಸೇವಾ ದಳ, ಯೋಗ ಶಿಕ್ಷಣ ತರಬೇತಿ, ಪ್ರತಿ ತರಗತಿಗೂ ರೇಡಿಯೋ ಬ್ರಾಡ್‌ ಕಾಸ್ಟಿಂಗ್‌ ವ್ಯವಸ್ಥೆ, ಹೆಚ್ಚಿನ ಕಲಿಕೆಗಾಗಿ ಎಲ್‌ಸಿಡಿ ಪ್ರಾಜೆಕ್ಟರ್‌ನ ಅಳವಡಿಕೆ, ಎಜ್ಯುಸ್ಯಾಟ್‌ ಬಳಕೆ, ಕ್ರೀಡಾ ಚಟುವಟಿಕೆ ವಿಶೇಷ ಆದ್ಯತೆ , ಆಕರ್ಷಕ ಸಮವಸ್ತ್ರ, ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳಸಲು ಮಾಸಿಕ ಹಸ್ತಪತ್ರಿಕೆಯ ಬಿಡುಗಡೆ ಹಾಗೂ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿವಿಧ ಸ್ಫರ್ಧೆಗಳಿಗೆ ಸಿದ್ಧಪಡಿಸುವ ಜತೆಗೆ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಒಂದೇ ದಿನಕ್ಕೆ 101 ದಾಖಲಾತಿ
2010-11 ರಲ್ಲಿ 382, 2011-12ರಲ್ಲಿ 376, 2012-13 ರಲ್ಲಿ 365, 2013-14ರಲ್ಲಿ 355, 2014-15ರಲ್ಲಿ 355, 2015-16ರಲ್ಲಿ 381, 2016-17 ರಲ್ಲಿ 397 ಹಾಗೂ 2017-18ರಲ್ಲಿ 467 ಹಾಗೂ ಪ್ರಸಕ್ತ ಸಾಲಿನಲ್ಲಿ ಒಂದೇ ದಿನಕ್ಕೆ 101 ದಾಖಲಾತಿಯಾಗಿದೆ.

ಸಾರ್ಥಕ ಸೇವೆ
ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಪಾಠೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವಲ್ಲಿ ಅಧ್ಯಾಪಕ ವೃಂದ ಹಾಗೂ ಶಾಲೆಯ ಉನ್ನತಿಯ ಹಾದಿಯಲ್ಲಿ ಹೆಗಲಿಗೆ ಹೆಗಲುಕೊಟ್ಟು ದುಡಿಯುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರ ಸಾರ್ಥಕ ಸೇವೆಯಿಂದಾಗಿ ಇಂದು ನಮ್ಮ ಕನ್ನಡ ಶಾಲೆ ಉನ್ನತಿಯೆಡೆಗೆ ಸಾಗಿದೆ. ಕಳೆದ 10 ವರ್ಷಗಳಿಂದ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಹೆಗ್ಗಳಿಕೆ ನಮ್ಮ ಶಿಕ್ಷಣ ಸಂಸ್ಥೆಗೆ ಸಲ್ಲುವುದು.
– ಲಲಿತಾ ಸಖಾರಾಂ, ಮುಖ್ಯೋಪಾಧ್ಯಾಯಿನಿ 

ಗುಣಾತ್ಮಕ ಶಿಕ್ಷಣ 
ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆಯೂ ಕೂಡಾ ಕನ್ನಡ ಶಾಲೆಗಳು ಗುಣಾತ್ಮಕ ಶಿಕ್ಷಣ ನೀಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಈ ವಿದ್ಯಾಸಂಸ್ಥೆಯ ಯಶಸ್ಸಿನ ಹಿಂದೆ ಉತ್ತಮ ಬೋಧಕ ವರ್ಗ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರವಿದೆ . ಮುಂದೆ 500 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಬೇಕು ಎನ್ನುವುದೇ ನಮ್ಮ ಗುರಿ.
– ಸಂಜೀವ ದೇವಾಡಿಗ ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ

Advertisement

– ಟಿ. ಲೋಕೇಶ್‌ ಆಚಾರ್ಯ 

Advertisement

Udayavani is now on Telegram. Click here to join our channel and stay updated with the latest news.

Next