Advertisement

Thekkatte: ಹೊಸಮಠ- ಬುಟ್ಟಿ ಹೆಣೆಯುವ ಕುಟುಂಬಗಳಿಗೆ ಬೇಕಿದೆ ಆಸರೆ

04:25 PM Aug 10, 2023 | Team Udayavani |

ತೆಕ್ಕಟ್ಟೆ: ಸಾಂಪ್ರದಾಯಿಕವಾಗಿ ಬುಟ್ಟಿ ಹೆಣೆಯುವವರ ಸಂಖ್ಯೆ ವಿರಳವಾಗುತ್ತಿದೆ. ಅಂತಹದ್ದರಲ್ಲಿ ಕುಂದಾಪುರ ತಾಲೂಕಿನ ಕೆದೂರು ಗ್ರಾ.ಪಂ. ವ್ಯಾಪ್ತಿಯ ಹೊಸಮಠ ಕೊರಗ ಕಾಲನಿಯ 8 ಕುಟುಂಬಗಳೂ ಕಾಡು ಸುತ್ತಾಡಿ ಬಳ್ಳಿ ತಂದು ಇಂದಿಗೂ ಬುಟ್ಟಿ ಹೆಣೆದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಇವರಿಗೆ ತಮ್ಮ ವೃತ್ತಿ ನಿರ್ವಹಣೆಗೆ ಸಮರ್ಪಕವಾದ ಶೆಡ್‌ ಹಾಗೂ ಮೂಲ ಅಗತ್ಯತೆಗಳ ಕೊರತೆಯಿದ್ದು ಅವುಗಳ ಈಡೇರಿಕೆಗಾಗಿ ಆಗ್ರಹಿಸಿದ್ದಾರೆ.

Advertisement

8 ಕುಟುಂಬಕ್ಕೂ ಇದೇ ಕಾಯಕ 
ಹೊಸಮಠ ಕೊರಗ ಕಾಲನಿಯಲ್ಲಿ ಸುಮಾರು 8 ಕುಟುಂಬದ ಸುಮಾರು 47 ಮಂದಿ ವಾಸವಾಗಿದ್ದು, ಇಲ್ಲಿನ ಯಾವುದೇ ಮನೆಗಳು ಸುಸಜ್ಜಿತವಾಗಿಲ್ಲ. ಚಿಕ್ಕದಾದ ಮನೆಗಳಲ್ಲಿ ಅವರ ವಾಸ ಒಂದೆಡೆಯಾದರೆ ಇನ್ನು ಮನೆಯ ಪರಿಸರದಲ್ಲಿರುವ ಮರಗಳ ಅಡಿಯಲ್ಲಿ ಬುಟ್ಟಿ ಹೆಣೆಯುವ ಕಾಯಕದಲ್ಲಿ ನಿರತರಾಗುತ್ತಾರೆ. ಬೇಸಗೆ ಕಾಲದಲ್ಲಿ ಹೊರಗೆ ಕೂತು ಬುಟ್ಟಿ ಹೆಣೆಯ ಬಹುದಾದರೂ ಮಳೆಗಾಲದಲ್ಲಿ ಅದು ಸಾಧ್ಯವಿಲ್ಲ.

ಅಲ್ಲದೇ ಕಾಲನಿಯ ನಿವಾಸಿಗಳ ಸುರಕ್ಷತೆಯ ದೃಷ್ಟಿಯಿಂದ ಸಮರ್ಪಕವಾದ ಆವರಣದ ಗೋಡೆಗಳನ್ನು ನಿರ್ಮಿಸಬೇಕಾದ ಅಗತ್ಯತೆ ಇದೆ. ಬಡ ಕುಟುಂಬದವರ ಬದುಕಿಗೆ ಆಸರೆಯಾಗಿದ್ದ ಬುಟ್ಟಿ ಕಾಯಕಕ್ಕೆ ಪ್ರೋತ್ಸಾಹ ನೀಡಬೇಕು ಎನ್ನುವ ನಿಟ್ಟಿನಿಂದ ಈಗಾಗಲೇ ಸಂಬಂಧಪಟ್ಟ ಐಟಿಡಿಪಿ ಇಲಾಖೆಯ ಗಮನಕ್ಕೆ ತಂದು ಸುಸಜ್ಜಿತವಾದ ಶೆಡ್‌ ನಿರ್ಮಾಣ ಮಾಡುವಂತೆ ಬೇಡಿಕೆ ನೀಡಲಾಗಿದ್ದು, ತುರ್ತು ಅಗತ್ಯವಿದೆ. ಕಾಲನಿಯ ಸುಮಾರು 15ಕ್ಕೂ ಅಧಿಕ ಮಂದಿ ಮಕ್ಕಳು ಸಮೀಪದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲಾ ಬಿಡುವಿನ ಬಳಿಕ ಅವರಿಗೆ ಸೂಕ್ತ ತರಬೇತಿ ದೊರಕುವ ನಿಟ್ಟಿನಿಂದ ಕೂಡ ಶೆಡ್‌ ನ ಅಗತ್ಯತೆ ಇದೆ. ಮೂಲ ಕಸುಬಿನ ಜತೆಗೆ ಆಡು ಸಾಕಾಣಿಕೆಗಾಗಿ ಈಗಾಗಲೇ ಪೂರ್ಣ ಪ್ರಮಾಣದ ಸಬ್ಸಿಡಿ ಹಣ ಬ್ಯಾಂಕ್‌ಗೆ ಬಂದಿದ್ದು, ಕಳೆದ ಒಂದು
ವರ್ಷಗಳಿಂದಲೂ ಫಲಾನುಭವಿಗಳಿಗೆ ಹಣ ಮಾತ್ರ ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಲಾಗುವುದು ಎಂದು ಕೊರಗ ಶ್ರೇಯೋಭಿವೃದ್ಧಿ ಸಮಿತಿ ಕುಂದಾಪುರದ ಅಧ್ಯಕ್ಷ ಗಣೇಶ್‌ ವಿ. ಹೇಳಿದ್ದಾರೆ.

ಶೆಡ್‌ ನಿರ್ಮಿಸಿ ಕೊಡಿ
ದೂರದ ಕಾಡಿನಿಂದ ಹೊತ್ತು ತಂದ ಬಳ್ಳಿಗಳಿಗೆ ಸ್ವಲ್ಪ ನೀರು ಬಿದ್ದು ಕಪ್ಪಾದರೂ, ಮುಂದೆ ಅದರಿಂದ ಹೆಣೆದ ಬುಟ್ಟಿ, ಸಿಬಲು,
ಗೆರಸಿಗಳಿಗೆ ಬೇಡಿಕೆಯೇ ಇಲ್ಲ. ಹೀಗಾಗಿ ಎಲ್ಲ ಮನೆಯವರೂ ಜತೆ ಸೇರಿ ಬುಟ್ಟಿ ಹೆಣೆಯುವ ವೃತ್ತಿ ನಿರ್ವಹಿಸಲು ತಮಗೊಂದು
ಶೆಡ್‌ ನಿರ್ಮಾಣವಾದರೆ ಕಾಡಿನಿಂದ ತರುವ ಬೀಳು ಹಾಗೂ ಬಳ್ಳಿಗಳನ್ನು ಸುರಕ್ಷಿತವಾಗಿ ಇಡಬಹುದು. ಹೆಣೆದ ಬುಟ್ಟಿಗಳ ರಕ್ಷಣೆಗೂ ಇದು ಅನುಕೂಲ.
ಕುಮಾರ, ಹೊಸಮಠ ಕಾಲನಿಯ ನಿವಾಸಿ

Advertisement

ಶೆಡ್‌ ನಿರ್ಮಿಸಲು ಕ್ರಮ
ಗ್ರಾ.ಪಂ. ವ್ಯಾಪ್ತಿಯ ಪ.ಪಂ.ದ ಕುಟುಂಬದವರ ಮೂಲ ಅಗತ್ಯತೆಗಳಿಗೆ ಗ್ರಾಮ ಪಂಚಾಯತ್‌ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದ್ದು, ಅವರ ಬೇಡಿಕೆಗಳಿಗೆ ಗ್ರಾ.ಪಂ. ಆಡಳಿತ ಮಂಡಳಿ ಸ್ಪಂದಿಸಿದ್ದು, ಮುಂದಿನ ದಿನಗಳ ಅವರ ಬೇಡಿಕೆಯಲ್ಲಿ ಒಂದಾದ ಶೆಡ್‌ ನಿರ್ಮಾಣದ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ತುರ್ತು ಸ್ಪಂದನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
– ಪ್ರಸಾದ್‌ ಪೂಜಾರಿ
ಪಿಡಿಒ, ಕೆದೂರು ಗ್ರಾಮ ಪಂಚಾಯತ್‌

*ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next