Advertisement

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

12:53 AM Apr 28, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ಗುಡ್ಡೆಅಂಗಡಿ ರಾ.ಹೆ. ಕೊಯ್ಕಾಡಿ ತಿರುವಿನಲ್ಲಿ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವಿಗೀಡಾಗಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಎ. 27ರಂದು ಮಧ್ಯಾಹ್ನ 2.30ರ ಸುಮಾರಿಗೆ ಸಂಭವಿಸಿದೆ.

Advertisement

ಬೆಂಗಳೂರಿನಿಂದ ಗೋಕರ್ಣದ ಕಡೆಗೆ ಆರು ಮಂದಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿಯಾದ ಪರಿಣಾಮ ಬೆಂಗಳೂರಿನ ಫೋನ್‌ ಪೇ ಖಾಸಗಿ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

ಇನ್ನೋವಾ ಕಾರಿನಲ್ಲಿ ಬೆಂಗಳೂರು ಮೂಲದ ಸ್ನೇಹಿತರಾದ ವಿಘ್ನೇಶ್‌ (28), ಚೇತನ್‌ (28), ಐಶ್ವರ್ಯಾ (27), ಲತಾ (26) ಅವರಿಗೆ ಗಂಭೀರವಾದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ತೀವ್ರತೆಗೆ ಕಾರಿನ ಒಂದು ಪಾರ್ಶ್ವ ಸಂಪೂರ್ಣ ಜಖಂಗೊಂಡಿತ್ತು. ಕಾರಿನ ಒಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು.

ಆಸ್ಪತ್ರೆಗೆ ಶಾಸಕ ಕೊಡ್ಗಿ ಭೇಟಿ
ಗಾಯಾಳುಗಳು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯತ್ತಿದ್ದಂತೆ ಕುಂದಾಪುರ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಅವರು ಆಸ್ಪತ್ರೆಗೆ ಧಾವಿಸಿ ಬಂದು ಗಾಯಾಳುಗಳ ಬಗ್ಗೆ ಮಾಹಿತಿ ಪಡೆದು ಸಮರ್ಪಕ ಚಿಕಿತ್ಸೆಯನ್ನು ಕೊಡುವಂತೆ ಆಸ್ಪತ್ರೆಯವರಿಗೆ ಸೂಚಿಸಿದ್ದಾರೆ.

Advertisement

ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್‌ ಹಾಗೂ ಕೋಟ ಪೊಲೀಸ್‌ ಠಾಣಾಧಿಕಾರಿ ತೇಜಸ್ವಿ, ಸಿಬಂದಿ ಪ್ರಸನ್ನ, ಕೃಷ್ಣ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನವೀಯತೆ ಮೆರೆದ ಸ್ಥಳೀಯರು
ಅಪಘಾತವಾದ ಸಂದರ್ಭ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್‌ ಸದಸ್ಯ ಜಯಪ್ರಕಾಶ್‌ ಶೆಟ್ಟಿ ಚಿಟ್ಟೆಬೈಲು, ಮೊಳಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ ಕುಲಾಲ್‌, ಚಂದ್ರ, ಸುರೇಶ್‌ ಅವರು 5 ಮಂದಿಯನ್ನು ಆ್ಯಂಬುಲೆನ್ಸ್‌ ಹಾಗೂ ಎರಡು ಕಾರುಗಳ ಮೂಲಕ ತತ್‌ಕ್ಷಣವೇ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವೀಕೆಂಡ್‌ ಪ್ರವಾಸಕ್ಕೆ ಬಂದಿದ್ದರು
ಇನ್ನೋವಾ ಕಾರು ಚಾಲಕ ಮಿಥುನ್‌ (28) ಅವರ ಅತೀ ವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಸ್ನೇಹಿತರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಂದಾಗಿ ಮುಡೇìಶ್ವರ, ಗೋಕರ್ಣದ ಕಡೆಗೆ ವೀಕೆಂಡ್‌ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next