Advertisement

ರೈಲು ಕೆಳಗಿನ ಕಿಂಡಿಯೇ ಅಂಡರ್‌ಪಾಸ್‌!

10:30 AM Jan 10, 2020 | Team Udayavani |

ಬೆಂಗಳೂರು: ನಗರಕ್ಕೆ ಹೊಂದಿಕೊಂಡ ರಾಜಾನುಕುಂಟೆ ಸುತ್ತಲಿನ ಜನರ ಪಾಲಿಗೆ ರೈಲು ಕೆಳಗೆ ನುಸುಳಿಕೊಂಡು ಹೋಗುವುದೇ ಅಂಡರ್‌ಪಾಸ್‌ ಹಾಗೂ ಬೋಗಿಗಳ ಕೊಂಡಿಯನ್ನು ಜಿಗಿಯುವುದು ಮೇಲ್ಸೇತುವೆ! -ಇದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಕೊಡುಗೆ.

Advertisement

ಮೂರು ವರ್ಷಗಳ ಹಿಂದೆ ಜೋಡಿ ಮಾರ್ಗಗಳನ್ನು ನಾಲ್ಕು ಪಥಗಳಿಗೆ ವಿಸ್ತರಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ರಾಜಾನುಕುಂಟೆಯ ಅಂಡರ್‌ಪಾಸ್‌ ಬಳಕೆ ನಿಷೇಧಿಸಲಾಯಿತು. ಇದಕ್ಕೆ ಪರ್ಯಾಯ ಮಾರ್ಗ ನಿರ್ಮಾಣ ಭರವಸೆ ನೀಡಲಾಯಿತು. ಇತ್ತ ಭರವಸೆ ಈಡೇರಲಿಲ್ಲ; ಅತ್ತ ಇದ್ದ ಅಂಡರ್‌ಪಾಸ್‌ ಕೂಡ ಮುಚ್ಚಿತು. ಇಕ್ಕಟ್ಟಿಗೆ ಸಿಲುಕಿದ ಸ್ಥಳೀಯರಿಗೆ ಹಳಿಗಳನ್ನು ದಾಟಿಹೋಗುವುದು ಅನಿವಾರ್ಯವಾಯಿತು. ಆದರೆ, ಅಲ್ಲೂ ನಿತ್ಯ “ಪೀಕ್‌ ಅವರ್‌’ನಲ್ಲಿ ಗಂಟೆಗಟ್ಟಲೆ ರೈಲುಗಳ ನಿಲುಗಡೆ ಆಗುತ್ತಿದೆ.

ರೈಲ್ವೆ ಸೇರಿದಂತೆ ಇದಕ್ಕೆ ಸಂಬಂಧಿಸಿದ ಇತರೆ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಜನ ರೈಲು ಕೆಳಗೆ ನುಸುಳಿಕೊಂಡು ಅಥವಾ ಬೋಗಿಗಳ ನಡುವಿನ ಕೊಂಡಿಯನ್ನು ಹಾರಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹೀಗೆ ಹೋಗುವಾಗ ಮಕ್ಕಳು, ವೃದ್ಧರು, ಮಹಿಳೆಯರ ಮೇಲೆ ಶೌಚಾಲಯದ ನೀರು ಮೈಮೇಲೆ ಬೀಳುತ್ತಿದೆ. ಅಲ್ಲದೆ, ಕೆಲವೊಮ್ಮೆ ಕಬ್ಬಿಣದ ವಸ್ತುಗಳು ಬಡಿದು ಗಾಯಗಳಾಗುತ್ತಿವೆ. ಬಳಸಿಕೊಂಡು ಹೋಗಲು ನೂರಾರು ಮೀ. ದೂರ ಸಾಗಬೇಕು. ಈ ಬಗ್ಗೆ ಸ್ಥಳೀಯರಿಂದ ಆಗಾಗ್ಗೆ ಪ್ರತಿಭಟನೆಗಳು ನಡೆಯುತ್ತಿದ್ದರೂ ಪ್ರಯೋಜನವಾಗಿಲ್ಲ.  ಅಧಿಕಾರಿಗಳು ಮಾತ್ರ ಹಳಿಗಳ “ಅಭಿವೃದ್ಧಿ’ಯತ್ತ ಚಿತ್ತಹರಿಸಿದ್ದಾರೆ.

ಅಂಡರ್‌ಪಾಸ್‌ ನಿರ್ಮಾಣಕ್ಕೆ ಅನುಮೋದನೆ ನೀಡಿ ವರ್ಷವಾದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಇದಕ್ಕೆ ಇಲಾಖೆಗಳ ನಡುವಿನ ಸಮನ್ವಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಇದಕ್ಕೆ ಕಾರಣ. ಇನ್ನು ಕಾಮಗಾರಿ ಸ್ಥಳದಲ್ಲಿ ರಾಜಕಾಲುವೆ ಹಾದು ಹೋಗಿದ್ದು, ಕಾಲುವೆಯ ಪಥ ಬದಲಿಸಬೇಕು. ಆದರೆ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ ಡಿಸಿಎಲ್‌) ಈ ನಿಟ್ಟಿನಲ್ಲಿ ಮುಂದಾಗಿಲ್ಲ. ಪರಿಣಾಮ ಈ ಸಂಬಂಧದ ಕಾಮಗಾರಿ ಕೂಡ ನೆನೆಗುದಿಗೆ ಬಿದ್ದಿದೆ. ಉದ್ದೇಶಿತ ಮಾರ್ಗದಲ್ಲಿ ದೊಡ್ಡಬಳ್ಳಾಪುರ ಮೂಲಕ ಆಂಧ್ರಪ್ರದೇಶದ ಹಿಂದೂಪುರಕ್ಕೆ ರೈಲುಗಳು ತೆರಳಲಿದ್ದು, ಗಂಟೆಗೊಂದು ರೈಲು ಸಂಚರಿಸುತ್ತವೆ. ಮೆಜೆಸ್ಟಿಕ್‌ ಸೇರಿದಂತೆ ನಗರದ ಪ್ರಮುಖ ರೈಲು ನಿಲ್ದಾಣಗಳಲ್ಲಿ “ಪೀಕ್‌ ಅವರ್‌’ನಲ್ಲಿ ದಟ್ಟಣೆ ಇರುತ್ತದೆ.

ಹಾಗಾಗಿ, ಆ ಸಮಯದಲ್ಲಿ ಗಂಟೆಗಟ್ಟಲೆ ರಾಜಾನುಕುಂಟೆಯಲ್ಲಿ ರೈಲುಗಳು ನಿಲುಗಡೆ ಆಗುತ್ತವೆ. ಜನರು ಬೋಗಿಗಳ ಮಧ್ಯೆದಲ್ಲಿ ಹಾದುಹೋಗುತ್ತಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ರೈಲ್ವೆ ಹಳಿ ದಾಟುವ ಸ್ಥಳದಲ್ಲಿ ಬೀದಿದೀಪಗಳ ವ್ಯವಸ್ಥೆಯೂ ಇಲ್ಲ. ಜನ ಹಳಿ ದಾಟುವ ಸಂದರ್ಭದಲ್ಲಿ ಬಿದ್ದು ಗಾಯಗೊಳ್ಳುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮಂಜುನಾಥ ನಾಯಕ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ.

Advertisement

ಹತ್ತೂರಿಗೆ ಹಳಿಯೇ ಸೇತುವೆ: ರಾಜಾನುಕುಂಟೆಯಿಂದ ಪಾರ್ವತಿಪುರ, ತಿಮ್ಮಸಂದ್ರ, ಅಗ್ರಹಾರ, ಚಿಮ್ಮಸಂದ್ರ, ಪಟೇಲಮ್ಮನ ಲೇಔಟ್‌ ಸೇರಿದಂತೆ ಹತ್ತಕ್ಕೂ ಅಧಿಕ ಊರುಗಳಿಗೆ ತೆರಳಲು ರೈಲ್ವೆ ಹಳಿಯೇ ಸಂಪರ್ಕ ಸೇತುವೆ ಆಗಿದೆ. ಬಸ್‌ ನಿಲ್ದಾಣ, ಶಾಲಾ- ಕಾಲೇಜು, ಕಲ್ಯಾಣ ಮಂಟಪಗಳಿಗೆ ಜನರು ಮತ್ತು ವಿದ್ಯಾರ್ಥಿಗಳು ನಿಂತಿರುವ ರೈಲುಗಳ ಚಕ್ರಗಳ ಪಕ್ಕ, ಬೋಗಿಗಳ ಮಧ್ಯೆದಲ್ಲಿ ದಾಟುತ್ತಾರೆ. ಈ ಸಂದರ್ಭದಲ್ಲಿ ದಿನಕ್ಕೆ ಐದಾರು ಜನರ ತಲೆ, ಕಾಲು, ಕೈಗಳಿಗೆ ಪೆಟ್ಟು ಮಾಡಿಕೊಳ್ಳುವುದು ಸರ್ವೆಸಾಮಾನ್ಯವಾಗಿದೆ. ದ್ವಿಚಕ್ರ, ಕಾರು, ಟೆಂಪೊಗಳು ರಾಜಾನುಕುಂಟೆಯಿಂದ ವಿವಿಧ ಹಳ್ಳಿಗಳಿಗೆ ತೆರಳಲು ರೈಲು ನಿಲ್ದಾಣದ 500 ಮೀಟರ್‌ ದೂರದಲ್ಲಿ ಮೇಲ್ಸೇತುವೆ ಇದ್ದು, ಇಲ್ಲಿ ಪ್ರತಿ ವಾರಕ್ಕೆ ಎರಡಕ್ಕೂ ಅಧಿಕ ಅಪಘಾತಗಳು ಸಂಭವಿಸುತ್ತಿವೆ. ಬೆಳಿಗ್ಗೆ ಮತ್ತು ಸಂಜೆ ಹೊತ್ತು ಅಲ್ಲಿ ವಾಹನದಟ್ಟಣೆ ಹೆಚ್ಚಾಗಿತ್ತದೆ. ಪಾದಚಾರಿ ಮಾರ್ಗವೂ ಇಲ್ಲ. ಇನ್ನು ಮೇಲ್ಸೇತುವೆ ತುಂಬಾ ದೂರ ಹಾಗೂ ದಟ್ಟಣೆಯೂ ಅಧಿಕ ಇರುವುದರಿಂದ ಜನರು ರೈಲ್ವೆ ಹಳಿಯನ್ನೇ ದಾಟಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.

ಕಾಲುವೆ ಪಥ ಬದಲಿಸಿದರೆ ಕಾಮಗಾರಿ ಆರಂಭ :  ಅಂಡರ್‌ಪಾಸ್‌ ನಿರ್ಮಾಣಕ್ಕೆ ನೀಲನಕ್ಷೆಯೂ ಸಿದ್ಧವಾಗಿದ್ದು, ಕಾಮಗಾರಿ ಮಾತ್ರ ಆರಂಭವಾಗಿಲ್ಲ. ಇದಕ್ಕೆ ರಾಜಕಾಲುವೆ ಅಡ್ಡಿಯಾಗಿದ್ದು, ಕಾಲುವೆಯ ಪಥ ಬದಲಿಸಿದರೆ ಮಾತ್ರ ಕಾಮಗಾರಿ ಆರಂಭವಾಗಲಿದೆ. ಈ ಬಗ್ಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌), ನೈರುತ್ಯ ರೈಲ್ವೆ, ಪಂಚಾಯತ್‌ ರಾಜ್‌ ಇಲಾಖೆಯ ಮುಖ್ಯ ಅಭಿಯಂತರರು 2019 ಏಪ್ರಿಲ್‌ನಲ್ಲಿ ಸಭೆ ನಡೆಸಿದ್ದು, ಸ್ಥಳ ಪರಿಶೀಲನೆಯೂ ನಡೆಸಿದ್ದಾರೆ. ರಾಜಕಾಲುವೆಯ ಪಥ ಬದಲಾವಣೆ ಮಾಡಲು ಕೆಆರ್‌ಡಿಸಿಎಲ್‌ಗೆ ರೈಲ್ವೆ ಇಲಾಖೆ ಸೂಚಿಸಿತ್ತು. ಆದರೆ, ಈವರೆಗೂ ಕ್ರಮಕೈಗೊಂಡಿಲ್ಲ. ಪಥ ಬದಲಾವಣೆ ಆಗದಿರುವುದರಿಂದ ಅಂಡರ್‌ಪಾಸ್‌ ಕಾಮಗಾರಿಗೆ ಚಾಲನೆ ನೀಡಲಾಗಿಲ್ಲ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್ಚೆತ್ತುಕೊಳ್ಳದ ರೈಲ್ವೆ ಇಲಾಖೆ :  ರಾಜಾನುಕುಂಟೆ ಸುತ್ತಲಿನ ಹಳ್ಳಿಗಳ ಜನರು ರೈಲ್ವೆ ಬೋಗಿಗಳ ಕೆಳಗೆ ಆಮೆಯಂತೆ ಹಾದು ಹೋಗುತ್ತಿದ್ದು, ಅಂಡರ್‌ ಪಾಸ್‌ ನಿರ್ಮಾಣ ಮಾಡುವಂತೆ ಆಗ್ರಹಿಸಿ ರೈಲು ತಡೆ, ಕಚೇರಿಗೆ ಬೀಗ, ಜಾಥಾ ನಡೆಸಿದರೂ, ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ಸ್ಥಳೀಯ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಭರವಸೆ ನೀಡುತ್ತಾರೆ ಹೊರತು ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಮುನಿರಾಜು.

150 ಮೀ. ಕಾಲುವೆಯ ಪಥ ಬದಲಿಸುವವರೆಗೂ ಕಾಮಗಾರಿ ಆರಂಭವಾಗುವುದಿಲ್ಲ. ಈ ಬಗ್ಗೆ ಕೆಆರ್‌ ಡಿಸಿಎಲ್‌, ಪಂಚಾಯತ್‌ರಾಜ್‌ ಇಲಾಖೆಗೆ ಹಲವು ಬಾರಿ ಪತ್ರ ಬರೆದರೂ, ಯಾವುದೇ ಕ್ರಮಕೈಗೊಂಡಿಲ್ಲ.- ತನ್ವೀರ್‌ ಹುಸೇನ್‌, ರೈಲ್ವೆ ಎಂಜಿನಿಯರ್‌.

 

-ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next