ಮುಂಬಯಿ: ಬಾಲಿವುಡ್ ಗಾಯಕ ಸೋನು ನಿಗಮ್ ಅವರ ತಂದೆಯ ನಿವಾಸದಲ್ಲಿ ಕಳ್ಳತನವಾದ ಬಗ್ಗೆ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಸೋನು ನಿಗಮ್ ಅವರ ತಂಗಿ ನಿಕಿತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಅಂಧೇರಿ ಪಶ್ಚಿಮದ ಓಶಿವಾರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ನಲ್ಲಿ ಸೋನು ಅವರ ತಂದೆ ಆಗಮ್ ಕುಮಾರ್ ನಿಗಮ್ ಅವರು ವಾಸಿಸುತ್ತಿದ್ದಾರೆ. ಭಾನುವಾರ (ಮಾರ್ಚ್ 19) ಮಧ್ಯಾಹ್ನ ಆಗಮ್ ಕುಮಾರ್ ವರ್ಸೋವಾದಲ್ಲಿರುವ ಮಗಳು ನಿಕಿತಾ ಅವರ ಮನೆಗೆ ಊಟಕ್ಕೆ ಹೋಗಿ ಕೆಲ ಸಮಯದ ಬಳಿಕ ಮನೆಗೆ ವಾಪಾಸಾಗುತ್ತಾರೆ. ಈ ವೇಳೆ ತನ್ನ ಡಿಜಿಟಲ್ ಲಾಕರ್ ನಿಂದ 40 ಲಕ್ಷ ರೂ. ಕಾಣೆಯಾಗಿರುವ ಬಗ್ಗೆ ತನ್ನ ಮಗಳಿಗೆ ಆಗಮ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಣಿಪಾಲ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಆರೋಪ; ಐವರು ವಿದ್ಯಾರ್ಥಿಗಳು ವಶಕ್ಕೆ
ಮರುದಿನ ( ಮಾ.20 ರಂದು) ಸೋನು ಅವರ ಮನೆಗೆ ವೀಸಾ ಸಂಬಂಧಿತ ಕೆಲಸದಿಂದ ಆಗಮ್ ಹೋಗಿ ವಾಪಾಸ್ ಆಗುತ್ತಾರೆ. ಈ ವೇಳೆ ಬಂದು ಡಿಜಿಟಲ್ ಲಾಕರ್ ನೋಡಿದಾಗ ಅದರಿಂದ ಮತ್ತೆ 32 ಲಕ್ಷ ರೂಪಾಯಿ ನಾಪತ್ತೆಯಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಬುಧವಾರ ಮುಂಜಾನೆ ನಿಕಿತಾ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯ ಸಿಸಿಟಿವಿಯನ್ನು ನೋಡಿದಾಗ ನಕಲಿ ಕೀಯೊಂದಿಗೆ ನಿವಾಸಕ್ಕೆ, ಈ ಹಿಂದೆ ಕೆಲಸ ಮಾಡಿದ್ದ ಚಾಲಕ ರೆಹಾನ್ ಒಳ ಹೋಗಿರುವುದು ಪತ್ತೆಯಾಗಿದೆ. ಚಾಲಕನ ವಿರುದ್ದ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚಾಲಕ ರೆಹಾನ್ 8 ತಿಂಗಳಿನಿಂದ ಕೆಲಸ ಮಾಡುತ್ತಿದ್ದ ಇತ್ತೀಚೆಗೆ ಅವನ ಕೆಲಸ ಸಮಾಧಾನವಾಗದ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ವರದಿ ತಿಳಿಸಿದೆ.