ಬೆಂಗಳೂರು: ನಕಲಿ ಕೀಗಳನ್ನು ಬಳಸಿ ಹಾಗೂ ಹ್ಯಾಂಡಲ್ ಲಾಕ್ ಮುರಿದು ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಶೇಷಾದ್ರಿಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಅವಿನಾಶ್(34), ಹಾಸನ ಮೂಲದ ಶಶಿಕುಮಾರ್(35) ಮತ್ತು ರಾಹುಲ್(36) ಬಂಧಿತರು. ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಇಬ್ಬರು ಆರೋಪಿಗಳು ಇತ್ತೀಚೆಗೆ ಠಾಣೆ ವಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ಅನ್ನು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು. ಅದೇ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅನುಮಾನಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನಗಳ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.
ವಿಚಾರಣೆ ಸಂದರ್ಭದಲ್ಲಿ ಮೂವರ ಬಂಧನದಿಂದ ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ, ದಾವಣಗೆರೆ ಮತ್ತು ಹಾಸನ ಜಿಲ್ಲೆಗಳ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 20 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಂದರ್ಭದಲ್ಲಿ ತಮ್ಮ ವ್ಯವಹಾರಗಳು ನಷ್ಟ ಹೊಂದಿದ್ದರಿಂದ ಅಂದಿನಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಸುತ್ತಾಡಿ, ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ನಕಲಿ ಕೀ ಬಳಸಿ ಹಾಗೂ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ಬಳಿಕ ಬೈಕ್‌ಗಳ ದಾಖಲೆಗಳನ್ನು ಆ ನಂತರ ಕೊಡುವುದಾಗಿ ನಂಬಿಸಿ ಗ್ರಾಮಾಂತರ ಭಾಗದಲ್ಲಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.