Advertisement

ಚಿಕ್ಕಜಾಜೂರು: ಅಂತರ್‌ ರಾಜ್ಯ ಕಳ್ಳರ ಬಂಧನ

04:59 PM Aug 09, 2022 | Team Udayavani |

ಚಿಕ್ಕಜಾಜೂರು : ಚಿಕ್ಕಜಾಜೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಮಾಡಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಚಿಕ್ಕಜಾಜೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಪುರುಷೋತ್ತಮ ನಾಯ್ಕ, ಚೇತನ್ ಸಿ., ಸಚಿನ್, ಪುನೀತ್ ನಾಯ್ಕ  ಬಂಧಿತರು. ಬಂಧಿತರೆಲ್ಲರೂ 19 ವಯಸ್ಸಿನ ಆಸುಪಾಸಿನವರಾಗಿದ್ದು, ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ಗ್ರಾಮದವರು ಎಂದು ಹೇಳಲಾಗಿದೆ. ಬಂಧಿತರಿಂದ ಸುಮಾರು 9 ಲಕ್ಷ 50 ಸಾವಿರ ರೂ ಮೌಲ್ಯದ 188 ಗ್ರಾಂ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಜಾಗೃತರಾದ ಪೊಲೀಸ್ ಇಲಾಖೆ, ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ಪರಶುರಾಮ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ, ಚಿತ್ರದುರ್ಗ ಉಪ ವಿಭಾಗದ ಡಿವೈಎಸ್ಪಿ ಅನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಳ್ಳರ ಜಾಡು ಹಿಡಿದು ಹೊಳಲ್ಕೆರೆ ವೃತ್ತ ನಿರೀಕ್ಷಕ ಕೆ.ಎನ್. ರವೀಶ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ದಾವಣಗೆರೆ ಜಿಲ್ಲೆಯ ನಾಗರಕಟ್ಟೆ ಗ್ರಾಮದಲ್ಲಿ ಕಳ್ಳರನ್ನು ಬಂಧಿಸಿವಲ್ಲಿ ಯಶಸ್ವಿಯಾಗಿದ್ದಾರೆ.

ರಾತ್ರಿ ಮಳೆ ಬರುವ ಸಮಯದಲ್ಲಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಗಮನಿಸಿ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಬೀಗ ಒಡೆದು ಕಳ್ಳತನ ಮಾಡಿ ಪರಾರಿ ಆಗುತ್ತಿದ್ದ ಕಳ್ಳರಿಂದ ಪೊಲೀಸರಿಗೆ ತಲೆ ನೋವಾಗಿತ್ತು ಅಲ್ಲದೇ ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು. ಇದಲ್ಲದೇ ಆರೋಪಿಗಳು ಆಂಧ್ರಪ್ರದೇಶ ರಾಜ್ಯದ ಪೊಲೀಸ್ ಠಾಣೆ, ಏಲೂರು ಪೊಲೀಸ್ ಠಾಣೆ, ಕರ್ನಾಟಕದ ಧಾರವಾಡ ಜಿಲ್ಲೆಯ ವಿದ್ಯಾಗಿರಿ ಪೊಲೀಸ್ ಠಾಣೆ ಹಾಗೂ ದಾವಣಗೆರೆ ಜಿಲ್ಲೆಯ ಬಸವಾ ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಿವಿಧ ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಹೊಳಲ್ಕೆರೆ ವೃತ್ತ ನಿರೀಕ್ಷಕ ಕೆ. ಎಂ. ರವೀಶ್ ಚಿಕ್ಕಜಾಜೂರು, ಪೊಲೀಸ್ ಠಾಣೆಯ ಪಿಎಸ್ಐ ಬಾಹುಬಲಿ ಎಂ. ಪಡನಾಡ ಹಾಗೂ ಸಿಬ್ಬಂದಿ ಎಎಸ್ಐ ಲೋಕೇಶ್ ಎಚ್.ಆರ್., ರುದ್ರೇಶ್ , ರಮೇಶ್, ಗಿರೀಶ್, ಕುಮಾರಸ್ವಾಮಿ , ಮಂಜುನಾಥ , ಕಿರಣ್ ,ಲೋಕೇಶ್ ಕೆಜೆ , ತಿಮ್ಮಣ್ಣ ಡಿಜಿ ,ರವಿಕುಮಾರ್ , ವೀರೇಶ್ ಹಾಗೂ ಕಂಪ್ಯೂಟರ್ ವಿಭಾಗದ ರಾಘವೇಂದ್ರ, ಸತೀಶ, ನಟರಾಜ ಇವರಿಗೆ  ಮುಖ್ಯ ಪೊಲೀಸ್ ಅಧೀಕ್ಷಕರವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next