ಹನೂರು: ಧೂಪ , ಕರ್ಪೂರ ಮಾರುತ್ತಿದ್ದ ಮಹಿಳೆಯಿಂದ ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 20 ವರ್ಷಗಳಿಂದ ಧೂಪ ಕರ್ಪೂರ ಮಾರುತ್ತಿದ್ದ ರಾಮನಗರ ಜಿಲ್ಲೆ ಕನಕಪುರದ ಶಿವಮ್ಮ ಎಂಬಾಕೆ ಹಣ ಮತ್ತು ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದು, ಈಕೆ ಬೆಳಗ್ಗಿನ ಜಾವ ಕನಕಪುರಕ್ಕೆ ತೆರಳಲು ಆಕೆಯ ಬಳಿಯಿದ್ದ 2.5ಲಕ್ಷ ನಗದು, 12 ಗ್ರಾಂ ಚಿನ್ನದ ನೆಕ್ಲೆಸ್ ಮತ್ತು 14ಗ್ರಾಂ ಚಿನ್ನದ ಸರವನ್ನು ಆಕೆಯ ಬಳಿ ಇಟ್ಟುಕೊಂಡು ಚಿನ್ನದ ತೇರಿನ ಟಿಕೆಟ್ ಕೊಡುವ ಸ್ಥಳದ ಬಳಿ ಮಲಗಿದ್ದಳು.
ಈ ವೇಳೆ ಅಪರಿಚಿತ 24 ವರ್ಷದ ಯುವಕನೋರ್ವ ಈಕೆಯ ಬಳಿ ಬಂದು ಪಕ್ಕದಲ್ಲಿಯೇ ಮಲಗಿದ್ದು, ನೀನು ಯಾರು ಇಲ್ಲಿ ಯಾಕೆ ಬಂದು ಮಲಗಿದ್ದೀಯಾ ಎಂದು ಕೇಳಿದಾಗ ನಾನು ಮಂಡ್ಯ ಜಿಲ್ಲೆ ಕಿರುಗಾವಲು ಗ್ರಾಮದ ರವಿ ಎಂದು ತಿಳಿಸಿದ್ದು, ಏನು ಗಾಬರಿಯಾಗಬೇಡಿ ಮಲಗಿ ಎಂದು ಹೇಳಿದ್ದಾನೆ. ಬಳಿಕ ಬೆಳಗ್ಗೆ ಎದ್ದು ನೋಡಿದಾಗ ಶಿವಮ್ಮ ಬಳಿಯಿದ್ದ 2.5ಲಕ್ಷ ನಗದು ಮತ್ತು ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಆಕೆಯ ಪಕ್ಕದಲ್ಲಿ ಮಲಗಿದ್ದ ಯುವಕ ಕೂಡ ನಾಪತ್ತೆಯಾಗಿದ್ದನು.
ಇದನ್ನೂ ಓದಿ: ರಾಸಲೀಲೆ ವಿಡಿಯೋ ವೈರಲ್; ತಲೆ ಮರೆಸಿಕೊಂಡ ಸಿಂಧನೂರಿನ ಶಿಕ್ಷಕ
ಈ ಸಂಬಂಧ ಹಣ ಮತ್ತು ಚಿನ್ನಾಭರಣಗಳನ್ನು ಕಳೆದುಕೊಂಡ ಶಿವಮ್ಮ ರವಿ ಎಂಬಾತನೇ ಈ ಕೃತ್ಯ ಎಸಗಿರುವ ಶಂಕೆಯಿದ್ದು ಆತನನ್ನು ಪತ್ತೆಹಚ್ಚಿ ತನ್ನ ಹಣ ಮತ್ತು ಚಿನ್ನಾಭರಣಗಳನ್ನು ಪತ್ತೆ ಹಚ್ಚಿ ಕೊಡುವಂತೆ ದೂರು ದಾಖಲಿಸಿದ್ದಾಳೆ.
ಈ ಸಂಬಂಧ ಮಲೆ ಮಹದೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.