Advertisement

ಉಡುಪಿ: ಶಾಲಾ-ಕಾಲೇಜುಗಳಲ್ಲಿ ಕಳ್ಳತನ ಪ್ರಕರಣ; ಇಬ್ಬರು ಕುಖ್ಯಾತ ಅಂತರ್‌ ಜಿಲ್ಲಾ ಕಳ್ಳರ ಬಂಧನ

07:38 PM Nov 21, 2022 | Team Udayavani |

ಉಡುಪಿ: ಶಾಲಾ-ಕಾಲೇಜುಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಕುಖ್ಯಾತ ಅಂತರ್‌ಜಿಲ್ಲಾ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಕುಮಾರಸ್ವಾಮಿ(59), ಹೆಜಮಾಡಿಯ ಜಾಹೀದ್ ಸಿನಾನ್‌ (32) ಬಂಧಿತರು.

Advertisement

ಜಿಲ್ಲೆಯಲ್ಲಿ ಕಳೆದ 5-6 ತಿಂಗಳಿನಿಂದ ರಾತ್ರಿ ಸಮಯ ಶಾಲಾ- ಕಾಲೇಜುಗಳಿಗೆ ನುಗ್ಗಿ ಬೀಗ ಮುರಿದು ಹಣ ಹಾಗೂ ಬೆಲೆಬಾಳುವ ಸೊತ್ತುಗಳು ಕಳ್ಳತನವಾಗಿರುವ ಬಗ್ಗೆ ಸರಣಿ ಪ್ರಕರಣಗಳು ಉಡುಪಿ ಜಿಲ್ಲೆಯ ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿತ್ತು.

ಈ ಬಗ್ಗೆ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹಾಕೆ ಅಕ್ಷಯ್‌ ಮಚ್ಚೀಂದ್ರ ಅವರ ಆದೇಶದಂತೆ ಬ್ರಹ್ಮಾವರ ಸಿಪಿಐ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿ ಕೋಟ ಠಾಣಯ ಪಿಎಸ್‌ಐ ಮಧು ಬಿ.ಇ. ಹಾಗೂ ಸಿಬಂದಿಗಳು ಆರೋಪಿ ಪತ್ತೆಗೆ ಎಲ್ಲ ಶಾಲಾ ಕಾಲೇಜುಗಳ ಮಾಹಿತಿ, ಅಪರಾಧ ನಡೆದ ದಿನಾಂಕ ಹಾಗೂ ಇನ್ನಿತರ ಮಾಹಿತಿಯನ್ನು ಆಧರಿಸಿ, ಸಿಸಿ ಕೆಮರಾಗಳ ಪರಿಶೀಲನೆ, ಲಾಡ್ಜ್ ಪರಿಶೀಲನೆ, ಜೈಲಿನಿಂದ ಬಿಡುಗಡೆಯಾದ ಕಳ್ಳತನ ಪ್ರಕರಣದ ಆರೋಪಿಗಳ ಮಾಹಿತಿ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ವ್ಯಕ್ತಿಗಳು ಹಾಗೂ ವಾಹನದ ಮಾಹಿತಿ ಬಗ್ಗೆ ನಿಗಾವಹಿಸಿದ್ದರು.

ಕೋಟದಲ್ಲಿ ವಶಕ್ಕೆ:

ಸೋಮವಾರ ಕೋಟ ಠಾಣೆ ವ್ಯಾಪ್ತಿಯ ಆವರ್ಶೆ ಗ್ರಾಮದ ಬಳಿ ಬೈಕ್‌ ನಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಬೆಳಕಿಗೆ ಬಂದಿದೆ. ಬಂಧಿತ ಕುಮಾರಸ್ವಾಮಿಯ ಮೇಲೆ ಈ ಹಿಂದೆ ಭಟ್ಕಳ ನಗರ ಠಾಣೆಯಲ್ಲಿ 5 ಮನೆ ಕಳ್ಳತನ ಪ್ರಕರಣ, ಹೊನ್ನಾವರ ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣ ಹಾಸನ ಜಿಲ್ಲೆ ಬೇಲೂರು ಠಾಣೆಯಲ್ಲಿ 4 ಮನೆ ಕಳ್ಳತನ ಪ್ರಕರಣದಲ್ಲಿ ಹಳೆ ಆರೋಪಿಯಾಗಿದ್ದಾನೆ. ಈ ಪ್ರಕರಣ ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಶಿಕ್ಷೆಗೆ ಒಳಪಟ್ಟು 2014 ರಿಂದ 2021 ರವರೆಗೆ ಸುಮಾರು 7 ವರ್ಷಗಳ ಕಾಲ ಕಾರವಾರ ಜೈಲಿನಲ್ಲಿದ್ದು ಶಿಕ್ಷೆ ಅನುಭವಿಸಿದ್ದಾನೆ.

Advertisement

ಮತ್ತೋರ್ವ ಆರೋಪಿ ಜಾಹೀದ್ ಸಿನಾನ್‌ ಕಳ್ಳತನ ನಡೆಸಲೆಂದೇ ಉಡುಪಿಯ ಸಂತೆಕಟ್ಟೆ ಬಳಿ ಬಾಡಿಗೆ ಮನೆಯನ್ನು ಮಾಡಿಕೊಂಡಿದ್ದು ಕುಮಾರಸ್ವಾಮಿಯನ್ನು ಕರೆಯಿಸಿಕೊಂಡು ಕಳ್ಳತನ ಮಾಡುತ್ತಿದ್ದನು. ಕುಮಾರಸ್ವಾಮಿ 2021ರಲ್ಲಿ ಕಾರವಾರ ಜೈಲಿನಿಂದ ಬಿಡುಗಡೆಯಾದ ಅನಂತರ ಈತನೊಂದಿಗೆ ಸೇರಿ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 37 ಕಡೆ ರಾತ್ರಿ ಸಮಯ ಶಾಲಾ- ಕಾಲೇಜಿನ ಬೀಗ ಮುರಿದು ಕಳ್ಳತನ ಮಾಡಿದ್ದರು.

ಈ ಕುಖ್ಯಾತ ಕಳ್ಳರು ಉಡುಪಿ ಜಿಲ್ಲೆಯ ಬೈಂದೂರು, ಕೊಲ್ಲೂರು, ಶಂಕರನಾರಾಯಣ, ಕುಂದಾಪುರ, ಬ್ರಹ್ಮಾವರ, ಹಿರಿಯಡ್ಕ, ಉಡುಪಿ ನಗರ, ಮಲ್ಪೆ, ಕಾರ್ಕಳ, ಪಡುಬಿದ್ರೆ ಠಾಣಾ ಸರಹದ್ದಿನಲ್ಲಿ ಒಟ್ಟು 27 ಕಡೆ ಶಾಲಾ-ಕಾಲೇಜುಗಳಿಗೆ ನುಗ್ಗಿ ಕಳ್ಳತನ ನಡೆಸಿದ್ದರು.

ದ.ಕ.ಜಿಲ್ಲೆಯ ಮೂಲ್ಕಿ ಠಾಣೆಯಲ್ಲಿ 2 ಪ್ರಕರಣ, ಶಿವಮೊಗ್ಗ ಜಿಲ್ಲೆಯ ತೀಥಹಳ್ಳಿ, ಹೊಸನಗರ, ರಿಪ್ಪನಪೇಟೆ, ನಗರ ಠಾಣೆಗಳಲ್ಲಿ 6 ಪ್ರಕರಣ, ಉತ್ತರ ಕನ್ನಡ ಜಿಲ್ಲೆಯ ಮುಡೇìಶ್ವರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ. ಆರೋಪಿಗಳಿಂದ 1 ಬೈಕು 2 ಮೊಬೈಲ್‌ ಫೋನ್‌ ಹಾಗೂ 10,000 ರೂ.ನಗದು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ.

ಜಿಲ್ಲಾ ಪೊಲೀಸ್‌ ಅಧೀಕ್ಷಕರ ಆದೇಶದಂತೆ ಎಎಸ್‌ಪಿ ಎಸ್‌.ಟಿ. ಸಿದ್ದಲಿಂಗಪ್ಪ ಅವರ ಮಾರ್ಗದಶನದಲ್ಲಿ ಉಡುಪಿ ಡಿವೈಎಸ್‌ಪಿ ಸುಧಾಕರ ಎಸ್‌ ನಾಯ್ಕ ನಿರ್ದೇಶನದಂತೆ ಪಿಎಸ್‌ಐಗಳಾದ ಅನಂತ ಪದ್ಮನಾಭ, ಮಧು ಬಿ.ಇ., ಪುಷ್ಪಾ, ನೂತನ್‌ ಡಿ., ರವಿ ಕುಮಾರ್‌, ಸಿಬಂದಿಗಳಾದ ರಾಘವೇಂದ್ರ, ರಾಘವೇಂದ್ರ ಶೆಟ್ಟಿ, ಪ್ರಸನ್ನ, ಮೋಹನ್‌ ಕೊತ್ವಾಲ್‌, ವಿಜೆಯೇಂದ್ರ ಮತ್ತು ಬ್ರಹ್ಮಾವರ ವೃತ್ತ ಕಚೇರಿಯ ಪ್ರದೀಪ ನಾಯಕ, ಪೊಲೀಸ್‌ ಅಧೀಕ್ಷಕರ ಕಚೇರಿಯ ತಾಂತ್ರಿಕ ವಿಭಾಗದ ಶಿವಾನಂದ, ದಿನೇಶ, ನಿತಿನ್‌ ಅವರು ಪ್ರಕರಣ ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next