ಬೆಂಗಳೂರು: ಕೆಲಸ ಮಾಡುತ್ತಿದ್ದ ಆಡಿಟ್ ಕಚೇರಿಯಲ್ಲೇ ಲಕ್ಷಾಂತರ ರೂ. ಕಳವು ಮಾಡಿದ್ದ ಸೆಕ್ಯೂರಿಟಿ ಗಾರ್ಡ್ ಸಿದ್ದಾಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಜಯನಗರ 2ನೇ ಬ್ಲಾಕ್ ನಿವಾಸಿ ನಾರಾಯಣ ಸ್ವಾಮಿ (35) ಬಂಧಿತ ಸೆಕ್ಯುರಿಟಿ ಗಾರ್ಡ್. ಆರೋಪಿಯಿಂದ 3.5 ಲಕ್ಷ ರೂ. ನಗದು, ಚಿನ್ನಾಭರಣ, ಕಾರು, ಮೊಬೈಲ್ ಜಪ್ತಿ ಮಾಡಲಾಗಿದೆ.
ದೂರುದಾರ ಸ್ವಾಮಿ ಎಂಬುವರ ಆಡಿಟ್ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಮೂಲದ ನಾರಾಯಣಸ್ವಾಮಿ ಐದಾರು ವರ್ಷಗಳಿಂದ ಸ್ವಾಮಿ ಸೆಕ್ಯುರಿಟಿಗಾರ್ಡ್ ಕೆಲಸ ಮಾಡುತ್ತಿದ್ದು, ಕುಟುಂಬ ಸಮೇತ ವಾಸವಾಗಿರಲು ದೂರುದಾರರೇ ತಮ್ಮ ಕಚೇರಿಯ ಮೇಲ್ಭಾಗದಲ್ಲಿ ಜಾಗ ಕೊಟ್ಟಿದ್ದರು. ಇನ್ನು ಆರೋಪಿ ಪತ್ನಿ ದೂರುದಾರರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಕೌಟುಂಬಿಕ ವಿಚಾರವಾಗಿ ಆರೋಪಿ ಮತ್ತು ಆತನ ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬುದು ಗೊತ್ತಾಗಿದೆ.
ಕದ್ದು ಪರಾರಿ: ಮಾಲೀಕ ಸ್ವಾಮಿ ಅವರ ಚಲನವಲನಗಳ ಮೇಲೆ ನಿಗಾವಹಿಸಿದ್ದ ಆರೋಪಿ, ಕೆಲ ದಿನಗಳ ಹಿಂದೆ ಸ್ವಾಮಿ ತಮ್ಮ ಕಚೇರಿಯ ಕ್ಯಾಬಿನ್ ನಲ್ಲಿ ಇರಿಸಿದ್ದ 10.95 ಲಕ್ಷ ರೂ. ಬಗ್ಗೆ ತಿಳಿದುಕೊಂಡಿದ್ದ. ಸೆ.20ರಂದು ನಸುಕಿನಲ್ಲಿ ಆಫೀಸ್‌ನ ಕ್ಯಾಬಿನ್‌ನ ಡ್ರಾದಲ್ಲಿ ಇಟ್ಟಿದ್ದ 10.95 ಲಕ್ಷ ರೂ. ಕಳವು ಮಾಡಿ, ಪತ್ನಿಗೂ ತಿಳಿಸದೆ ಪರಾರಿಯಾಗಿದ್ದ. ಇತ್ತ ಪತಿ ಕಾಣದಕ್ಕೆ ಆತಂಕಗೊಂಡ ಪತ್ನಿ ಸೆ.22ರಂದು ಬೆಳಗ್ಗೆಯೇ ಪತಿ ಹುಡುಕಿಕೊಡುವಂತೆ ಠಾಣೆಗೆ ಬಂದು ದೂರು ನೀಡಿದ್ದಳು. ಆ ನಂತರ ಮಾಲೀಕ ಸ್ವಾಮಿ ಆರೋಪಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಳವು ದೂರು ನೀಡಿದ್ದರು. ಈ ನಿಟ್ಟಿನಲ್ಲಿ ತಾಂತ್ರಿಕ ತನಿಖೆ ಹಾಗೂ ಬಾತ್ಮೀದಾರರ ಮಾಹಿತಿ ಆಧರಿಸಿ ಬಾಣಸವಾಡಿಯ ಕಸ್ತೂರಿನಗರದ ಹೊರವರ್ತುಲ ರಸ್ತೆಯಲ್ಲಿ ಟೀ ಅಂಗಡಿ ಬಳಿ ಕಾರು ಸಮೇತ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಕಾರಿನ ಡಿಕ್ಕಿಯಲ್ಲಿಟ್ಟಿದ್ದ 3.50 ಲಕ್ಷ ರೂ. ನಗದು ಹಾಗೂ ಇತರೆ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಜಯನಗರ ಉಪವಿಭಾಗದ ಎಸಿಪಿ ವಿ.ನಾರಾಯಣಸ್ವಾಮಿ ಮತ್ತು ಸಿದ್ದಾಪುರ ಠಾಣೆಯ ಪಿಐ ಮೋಹನ್ ಡಿ.ಪಟೇಲ್ ನೇತತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಹುಂಡೈ ಕಾರು, 2 ಉಂಗುರ, ಚಿನ್ನ ದ ಸರ ಖರೀದಿ ಆರೋಪಿ ಕದ್ದ ಹಣದಲ್ಲಿ ಒಂದು ಹುಂಡೈ ಕಾರು, 2 ಚಿನ್ನದ ಉಂಗುರ, 1 ಬ್ರಾಸ್ ಲೆಟ್, 1 ಚಿನ್ನದ ಸರ, 1 ಫಾಸ್ಟ್ ಟ್ರ್ಯಾಕ್ ವಾಚ್, ಮೊಬೈಲ್ ಖರೀದಿಸಿ, ಬಾಕಿ 3.50 ಲಕ್ಷ ರೂ. ಅನ್ನು ಕಾರಿನಲ್ಲಿ ಇಟ್ಟುಕೊಂಡು ಓಡಾಡಿಕೊಂಡು ಮೋಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.