ಬೆಂಗಳೂರು: ಕೆಲಸ ಮಾಡುತ್ತಿದ್ದ ಕಚೇರಿಯಲ್ಲೇ ನೌಕರ ಲಕ್ಷಾಂತರ ರೂ. ದೋಚಿದ್ದ ಆರೋಪಿಯನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ನಿವಾಸಿ ಮಹೇಶ್ (34) ಬಂಧಿತ. ಆರೋಪಿ ವಿಜಯನಗರದ ಸರ್ವೀಸ್ ರಸ್ತೆಯಲ್ಲಿರುವ ಕೆ.ಎನ್.ಎಸ್. ಇನ್ಫ್ರಾ ಸ್ಟ್ರಾಕ್ಚರ್ ಪ್ರೈವೇಟ್ ಲಿಮಿಟೆಡ್ ಕಚೇರಿಯ ಕ್ಯಾಶ್ ಬಾಕ್ಸ್ ನಲ್ಲಿದ್ದ 25 ಲಕ್ಷ ರೂ. ನಗದನ್ನು ಮಾ.20ರಂದು ದೋಚಿದ್ದ.
ಈ ಬಗ್ಗೆ ಕಚೇರಿಯ ಅಧಿಕಾರಿಗಳು ದೂರು ನೀಡಿದ್ದರು. ನಿವೃತ್ತ ಪಿಎಸ್‌ಐ ಪುತ್ರನಾಗಿರುವ ಮಹೇಶ್, ಕೆ.ಎನ್.ಎಸ್. ಇನ್ಫ್ರಾ ಸ್ಟ್ರಾಕ್ಚರ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಎರಡು ವರ್ಷಗಳಿಂದ ಡಾಕ್ಯುಮೆಂಟ್ ಎಕ್ಸಿಕ್ಯುಟಿವ್ ಕೆಲಸ ಮಾಡಿಕೊಂಡಿದ್ದ. ಮಾ.20ರಂದು ಕಚೇರಿಯಲ್ಲಿದ್ದ 25 ಲಕ್ಷ ರೂ. ದೋಚಿ ಮೂಡಲಪಾಳ್ಯದ ತನ್ನ ಸ್ನೇಹಿತನ ಮನೆಯಲ್ಲಿ ಇಟ್ಟು, ತನ್ನ ವೈಯಕ್ತಿಕ ಖರ್ಚಿಗಾಗಿ 50 ಸಾವಿರ ರೂ. ತೆಗೆದುಕೊಂಡು ಹೋಗಿದ್ದ. ಬಳಿಕ ತನಿಖೆ ಕೈಗೊಂಡು ಆರೋಪಿಯನ್ನು ಏ.28 ರಂದು ಮಧ್ಯಾಹ್ನ ಮಡಿಕೇರಿ ಟೋಲ್‌ಗೇಟ್ ಬಳಿ ಬಂಧಿಸಲಾಗಿದೆ. ಬಳಿಕ ಆರೋಪಿಯನ್ನು ಬೆಂಗಳೂರಿಗೆ ಕರೆ ತಂದು, ಆತನ ಸ್ನೇಹಿತನ ಮನೆಯಲ್ಲಿದ್ದ 24.50 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಮೋಜಿನ ಜೀವನಕ್ಕಾಗಿ ಕೃತ್ಯ: ಆರೋಪಿ ಮೋಜಿನ ಜೀವನಕ್ಕೆ ಮಾರು ಹೋಗಿದ್ದ. ಮದ್ಯ, ಇಸ್ಪೀಟ್ ಹಾಗೂ ಇತರೆ ಮೋಜಿನ ಜೀವನಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದಾನೆ. ಹೀಗಾಗಿ ಕಳವು ಮಾಡಿದ ಹಣದಲ್ಲಿ ಸಾಲ ತೀರಿಸಿಕೊಂಡು ಬಾಕಿ ಹಣದಲ್ಲಿ ಹೊಸ ಜೀವನ ರೂಪಿಸಿಕೊಳ್ಳಲು ಮುಂದಾಗಿದ್ದ ಎಂದು ಪೊಲೀಸರು ಹೇಳಿದರು.