ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕದ್ದು ಉಂಡ ಮನೆಗೆ ಎರಡು ಬಗೆದಿದ್ದ ಮಹಿಳೆಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ʼಜೋಗುಪಾಳ್ಯ ನಿವಾಸಿ ಮಮತಾ (36) ಬಂಧಿತ ಆರೋಪಿ. ಈಕೆಯಿಂದ 16 ಲಕ್ಷ ರೂಪಾಯಿ ಮೌಲ್ಯದ 225 ಗ್ರಾಂ ತೂಕದ 3 ಚಿನ್ನದ ಗಟ್ಟಿಗಳು ಹಾಗೂ 2 ಚಿನ್ನದ ಬಳೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಜೋಗುಪಾಳ್ಯದ ಉದ್ಯಮಿ ಅಮರೇಂದ್ರ ಮನೆಯಲ್ಲಿ ಮಮತಾ ಕೆಲ ವರ್ಷಗಳಿಂದ ಬಾಣಸಿಗರಾಗಿ ಕೆಲಸ ಮಾಡಿಕೊಂಡಿದ್ದಳು. 2023ರ ನ.25ರಂದು ಅಮರೇಂದ್ರ ಕುಟುಂಬದ ಸದಸ್ಯರ ಜತೆಗೆ ಹೊರಗಡೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮಮತಾ ಮನೆಯ ಕೊಠಡಿಯಲ್ಲಿದ್ದ ಕೀ ತೆಗೆದುಕೊಂಡು ಚಿನ್ನಾಭರಣ ಕದ್ದಿದ್ದಳು. ಕದ್ದ ಚಿನ್ನಾಭರಣಗಳನ್ನು ಕರಗಿಸಿ ಚಿನ್ನದ ಗಟ್ಟಿಗಳಾಗಿ ಮಾರ್ಪಡಿಸಿ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದಳು. ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದು ಹಲವು ದಿನ ಕಳೆದರೂ ಮಾಲೀಕರು ಅಲ್ಮೇರಾದಲ್ಲಿದ್ದ ಚಿನ್ನಾಭರಣ ಕಳುವಾಗಿರುವುದನ್ನು ಗಮನಿಸಿರಲಿಲ್ಲ. ಜೂನ್ 7ರಂದು ಅಮರೇಂದ್ರ ಕಬೋರ್ಡ್ ತೆರೆದು ನೋಡಿದಾಗ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ.
ಈ ಸಂಬಂಧ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಕೆಲಸದಾಕೆ ಮಮತಾಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಮಾಲೀಕ: 2023 ನವೆಂಬರ್ 25 ರಂದು ಮಮತಾ ಕಳ್ಳತನ ಮಡಿದ್ದರೂ ಅಮರೇಂದ್ರ ಅವರಿಗೆ ಕೃತ್ಯ ನಡೆದ 6 ತಿಂಗಳ ಬಳಿಕ ಚಿನ್ನಾಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ತಾವು ಕುಟುಂಬಸ್ಥರ ಜೊತೆಗೆ ಹೋಗಿದ್ದಾಗ ಮನೆಯಲ್ಲಿ ಮಮತಾ ಒಬ್ಬರೇ ಇದ್ದ ಹಿನ್ನೆಲೆಯಲ್ಲಿ ಆಕೆಯ ಮೇಲೆಯೇ ಅಮರೇಂದ್ರ ಅವರಿಗೂ ಅನುಮಾನ ಮೂಡಿತ್ತು. ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದರು. ಇತ್ತ ಪೊಲೀಸರು ಮಮತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 5 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆಯ ಮನೆಯಲ್ಲಿ 3 ಚಿನ್ನದ ಗಟ್ಟಿಗಳು ಹಾಗೂ 2 ಚಿನ್ನದ ಬಳೆಗಳು ಬಚ್ಚಿಟ್ಟಿರುವುದು ಗೊತ್ತಾಗಿದೆ.