ಕೆ.ಆರ್.ಪುರ: ಮೋಜು ಮಸ್ತಿ ಜೀವನಕ್ಕಾಗಿ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದ ಐವರು ಅಂತಾರಾಜ್ಯ ಕಳ್ಳರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರದ ಮೋಹನ್(42), ಸಂಪತ್(29), ಅಶೋಕ್(24) ಹಾಗೂ ಆಂಧ್ರಪ್ರದೇಶ ಮೂಲದ ಕೃಷ್ಣಮೂರ್ತಿ, ಮೋಹನ್ ವೆಂಕಟರಾಮ ಬಂಧಿತರು. ಆರೋಪಿಗಳಿಂದ 25 ನಕಲಿ ಎಟಿಎಂ ಕಾರ್ಡ್ ಗಳು, ಆರು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಹೋಂಡಾ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟಾಗಿ ಸೇರಿ ಜಾಲಿ ಟ್ರಿಪ್ ನೆಪದಲ್ಲಿ ಹೆದ್ದಾರಿ ಬದಿಯಲ್ಲಿ ಸಿಗುತ್ತಿದ್ದ ಅಂಗಡಿಗಳ ಶೆಟ್ಟರ್ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಇಂಥದ್ದೇ ಅಪರಾಧ ಕೃತ್ಯಗಳನ್ನು ಎಸಗಿದ್ದಾರೆ. ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸಿಸಿ ಟೀವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಿದಾಗ ಈ ವೇಳೆ ಆರೋಪಿಗಳ ಮತ್ತೂಂದು ಮಾದರಿಯ ಕಳ್ಳತನದ ಕೃತ್ಯ ಬಯಲಾಗಿದೆ.
ಎಟಿಎಂಗಳಿಗೆ ಸಭ್ಯರಂತೆ ಪ್ರವೇಶಿಸಿ ಹಣ ವಿತ್ ಡ್ರಾ ಮಾಡಿಕೊಡುವ ನೆಪದಲ್ಲಿ ಅಮಾಯಕ ಜನರ ಎಟಿಎಂ ಕಾರ್ಡ್‌ಗಳನ್ನು ಎಗರಿಸಿ ಅದೇ ತರಹದ ನಕಲಿ ಎಟಿಎಂ ಕಾರ್ಡ್‌ಗಳನ್ನು ಕೊಟ್ಟು ವಂಚನೆ ಮಾಡುತ್ತಿದ್ದ ಕೃತ್ಯವೂ ಬಯಲಾಗಿದೆ. ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ತನಿಖೆ ಆರಂಭಿಸಿದ್ದ ಕೆ.ಆರ್. ಪುರ ಪೊಲೀಸರು ಖಚಿತ ಮಾಹಿತಿ ಮೇರೆಗೆಭಟ್ಟರಹಳ್ಳಿಯ ಸಮೀಪದ ಬನಶಂಕರಿ ಬಡಾವಣೆಯ ಗ್ಯಾರೇಜ್ ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.