ಬೆಂಗಳೂರು: ಒಂಟಿ ವೃದ್ಧೆಯ ಮನೆಗೆ ನುಗ್ಗಿ ಹತ್ಯೆ ಮಾಡಿ ಚಿನ್ನಾಭರಣ, ನಗದು ದೋಚಿದ್ದ ಖತರ್ನಾಕ್ ನೇಪಾಳಿ ಗ್ಯಾಂಗ್‌ನ 6 ಮಂದಿ ಎಚ್ ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೇಪಾಳ ಮೂಲದ ಖಡಕ್ ಸಿಂಗ್, ಮುಖೇಶ್ ಕಡ್ಕಾ, ಕಮಲ್ ಕೇಶವ ಭೂಡ, ಗಜೇಂದ್ರ ಹಾಗೂ ಶಿಬು ಕಟಾಯತ್ ಬಂಧಿತರು.
ಎಚ್‌ಎಸ್ ಆರ್ ಲೇಔಟ್‌ನ ನಿವಾಸಿ ಜಯಶ್ರೀ (83) ಕೊಲೆಯಾದ ವೃದ್ಧೆ.
ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಜಯಶ್ರೀ ಒಂಟಿಯಾಗಿ ವಾಸಿಸುತ್ತಿದ್ದರು. ಇವರ ಮನೆಯ ಸಮೀಪದಲ್ಲಿ ಖಡಕ್ ಸಿಂಗ್ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ. ಜಯಶ್ರೀ ಒಂಟಿಯಾಗಿ ವಾಸಿಸುತ್ತಿರುವುದನ್ನು ಅರಿತಿದ್ದ ಖಡಕ್ ಸಿಂಗ್ ಸಹಚರರ ಜತೆಗೆ ಸೇರಿ ಇವರ ಮನೆಗೆ ಕನ್ನ ಹಾಕಲು ಸಂಚು ರೂಪಿಸಿದ್ದ. ನಗರದಲ್ಲೇ ಸೆಕ್ಯೂರಿಟಿ ಗಾರ್ಡ್ ಆಗಿರುವ ಇಬ್ಬರು ಸ್ನೇಹಿತರು ಹಾಗೂ ನೇಪಾಳದಿಂದ ಕೃತ್ಯ ಎಸಗಲೆಂದೆ ಕರೆಸಿದ್ದ ಮೂವರು ಸಹಚರರ ಬಳಿ ದರೋಡೆ ಮಾಡುವ ಬಗ್ಗೆ ಚರ್ಚಿಸಿದ್ದ. 6 ಮಂದಿ ಜತೆಯಾಗಿ ಆ.13ರಂದು ಜಯಶ್ರೀ ಮನೆಗೆ ಕನ್ನ ಹಾಕಲು ಸಿದ್ಧತೆ ನಡೆಸಿದ್ದರು. ಸೆಕ್ಯೂರಿಟಿಗಾರ್ಡ್ ಬೇಕಾಗಿದ್ದಾರಾ ಎಂದು ಕೇಳುವ ನೆಪದಲ್ಲಿ ಆ.13ರಂದು ರಾತ್ರಿ ಜಯಶ್ರೀ ಮನೆಗೆ ಖಡಕ್ ಸಿಂಗ್ ಹೋಗಿದ್ದ. ಅವರ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ದೃಢಪಡಿಸಿಕೊಂಡು ತನ್ನ ಐವರು ಸಹಚರರಿಗೆ ಈ ಬಗ್ಗೆ ಸಿಗ್ನಲ್ ಕೊಟ್ಟಿದ್ದ. ನಂತರ 6 ಮಂದಿ ಸಹಚರರ ಜತೆಗೆ ಜಯಶ್ರೀ ಮನೆಗೆ ನುಗ್ಗಿದ್ದ. ಪ್ರತಿರೋಧ ತೋರಿದ ಜಯಶ್ರೀಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಅವರ ಮೈ-ಮೇಲಿದ್ದ ಚಿನ್ನಾಭರಣ, ಮನೆಯಲ್ಲಿದ್ದ 120 ಗ್ರಾಂ ಚಿನ್ನಾಭರಣ, 2.5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು. \
ಸಿಕ್ಕಿ ಬಿದ್ದಿದ್ದು ಹೇಗೆ? : ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ನೇಪಾಳದ ಗಡಿ, ಲಕ್ನೋ, ಪುಣೆಗೆ ತೆರಳಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ಇತ್ತ ಆರೋಪಿಗಳು ಕೃತ್ಯ ಎಸಗಿದ ಬಳಿಕ ಲಕ್ನೋ ಮೂಲಕ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದರು. ಆದರೆ ತಮ್ಮ ಸಹಚರರು ಬಾರದ ಹಿನ್ನಲೆ ಕಾನ್ಪುರದಲ್ಲಿ ಉಳಿದಿದ್ದರು. ಪೊಲೀಸ್ ಕಾರ್ಯಾಚರಣೆ ವೇಳೆ ಲೈವ್ ಲೋಕೇಷನ್ ಪರಿಶೀಲಿಸಿದಾಗ ಆರೋಪಿಗಳು ಕಾನ್ಪುರದಲ್ಲಿ ಇರುವ ಸುಳಿವು ಸಿಕ್ಕಿತ್ತು. ಕೂಡಲೇ ಕಾನ್ಪುರಕ್ಕೆ ತೆರಳಿದ್ದ ಪೊಲೀಸರ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ನಗರಕ್ಕೆ ಕರೆ ತಂದಿದೆ. ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ 30 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ. ಭಾರತದ ಗಡಿ ದಾಟಿದ್ದರೆ ಆರೋಪಿಗಳನ್ನು ಬಂಧಿಸುವುದು ಸುಲಭವಿರಲಿಲ್ಲ. ಅಲ್ಲದೆ, ಅವರು ದರೋಡೆ ಮಾಡಿದ ಚಿನ್ನಾಭರಣ ಜಪ್ತಿ ಮಾಡುವುದು ಕಷ್ಟವಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.