Advertisement

Theft: ದಂಪತಿ ಯಾಮಾರಿಸಿ ಅರ್ಧ ಕೆಜಿ ಚಿನ್ನ ಕಳ್ಳತನ

10:07 AM Nov 26, 2023 | Team Udayavani |

ಬೆಂಗಳೂರು: ಇತ್ತೀಚೆಗೆ ಮೈಸೂರು ರಸ್ತೆಯಲ್ಲಿ ಕಾರು ಪಂಕ್ಚರ್‌ ಆಗಿದೆ ಎಂದು ದಂಪತಿಯ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿದ್ದ ಆಂಧ್ರದ ಓಜಿ ಕುಪ್ಪಂ ಗ್ಯಾಂಗ್‌ನ ಸದಸ್ಯನೊಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆಂಧ್ರದ ಚಿತ್ತೂರು ಜಿಲ್ಲೆಯ ಒರಂತಗಲ್‌ ಗೊಲ್ಲ ಕುಪ್ಪಂ(ಓಜಿ ಕುಪ್ಪಂ) ನಿವಾಸಿ ಗಿರಿ ಕುಮಾರ್‌ ಅಲಿಯಾಸ್‌ ಗಿರಿ(41) ಬಂಧಿತ. ಆರೋಪಿಯಿಂದ 25 ಲಕ್ಷ ರೂ. ಮೌಲ್ಯದ 449 ಗ್ರಾಂ ಚಿನ್ನ ಮತ್ತು ವಜ್ರಾಭರಣ ವಶಕ್ಕೆ ಪಡೆಯಲಾಗಿದೆ.

ಅ.21ರಂದು ದೂರುದಾರ ರಾಜೇಶ್‌ ದಂಪತಿ ಕೆಲ ತಿಂಗಳ ಹಿಂದೆ ಚಂದ್ರಾಲೇಔಟ್‌ನ ಬ್ಯಾಂಕ್‌ವೊಂದರಲ್ಲಿನ ಲಾಕರ್‌ನಲ್ಲಿಟ್ಟಿದ್ದ 500 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಕಾರಿನಲ್ಲಿ ಇರಿಸಿಕೊಂಡು ಮನೆ ಕಡೆಗೆ ಹೊರಟ್ಟಿದ್ದಾರೆ. ಅದಕ್ಕೂ ಮೊದಲು ಬ್ಯಾಂಕ್‌ಗೆ ತೆರಳಿ ದಂಪತಿಯ ಚಲನವಲನಗಳ ಮೇಲೆ ನಿಗಾವಹಿಸಿದ್ದ ಆರೋಪಿ ಮತ್ತು ತಂಡ ಕಾರಿನ ಹಿಂಬದಿ ಚಕ್ರ ಪಂಕ್ಚರ್‌ ಮಾಡಿದ್ದಾರೆ. ಕಾರು ಪಂಕ್ಚರ್‌ ಆಗಿರುವುದನ್ನು ಗಮನಿಸದ ದಂಪತಿ ಮನೆ ಕಡೆಗೆ ಹೊರಟ್ಟಿದ್ದಾರೆ. ಕೆಂಗೇರಿ ಮೈಸೂರು ರಸ್ತೆಯ ಬಿಡಿಎ ಅಪಾರ್ಟ್‌ಮೆಂಟ್‌ ಬಳಿ ನಿಧಾನಗತಿಯಲ್ಲಿ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ ಇಬ್ಬರು ದುಷ್ಕರ್ಮಿಗಳು, ಕಾರಿನ ಟೈಯರ್‌ ಪಂಕ್ಚರ್‌ ಆಗಿದೆ ಎಂದಿದ್ದಾರೆ. ಈ ವೇಳೆ ರಾಜೇಶ್‌ ಕಾರು ಪಕ್ಕಕ್ಕೆ ಹಾಕಿ ನೋಡಿದಾಗ ಟೈಯರ್‌ ಪಂಕ್ಚರ್‌ ಆಗಿರುವುದು ಗೊತ್ತಾಗಿದೆ.

ಈ ವೇಳೆ ಮತ್ತಿಬ್ಬರು ದ್ವಿಚಕ್ರ ವಾಹನದಲ್ಲಿ ಬಂದು ಸಮೀಪದಲ್ಲೇ ಪಂಕ್ಚರ್‌ ಅಂಗಡಿ ಇದೆ ಎಂದು ದಂಪತಿ ಗಮನ ಬೇರೆಡೆ ಸೆಳೆದಿದ್ದಾರೆ. ಆಗ ಇತರೆ ಇಬ್ಬರು ಆರೋಪಿಗಳು ಕಾರಿನ ಬಾಗಿಲು ತೆರೆದು ಚಿನ್ನಾಭರಣವಿದ್ದ ಬ್ಯಾಗ್‌ ಎತ್ತಿಕೊಂಡು ಪರಾರಿಯಾಗಿದ್ದಾರೆ. ಪಂಕ್ಚರ್‌ ಅಂಗಡಿ ಬಳಿಗೆ ಕಾರು ತೆಗೆದುಕೊಂಡು ಹೋಗಲು ರಾಜೇಶ್‌ ದಂಪತಿ ಕಾರಿನೊಳಗೆ ಕೂರಲು ನೋಡಿದಾಗ ಸೀಟಿನಲ್ಲಿಟ್ಟಿದ್ದ ಚಿನ್ನಾಭರಣವಿದ್ದ ಬ್ಯಾಗ್‌ ನಾಪತ್ತೆಯಾಗಿರುವುದು ಕಂಡು ಬಂದಿದೆ. ಬಳಿಕ ಕೆಂಗೇರಿ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದರು.

ಏನಿದು ಓಜಿ ಕುಪ್ಪಂ ಗ್ಯಾಂಗ್‌?:

Advertisement

ಈ ತಂಡದ ಸದಸ್ಯರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಒರಂತಗಲ್‌ ಗೊಲ್ಲ ಕುಪ್ಪಂ(ಓಜಿ ಕುಪ್ಪಂ) ಎಂಬ ಹಳ್ಳಿ ನಿವಾಸಿಗಳು. ವೃತ್ತಿಪರ ದರೋಡೆಕೋರರು. ಅಕ್ಕ-ಪಕ್ಕದ ರಾಜ್ಯಗಳಿಗೆ ಹೋಗುವ ಇವರು ಬೈಕ್‌ಗಳನ್ನು ಕಳವು ಮಾಡಿ, ನೊಂದಣಿ ಫ‌ಲಕಗಳನ್ನು ತೆಗೆದು ನಗರಾದ್ಯಂತ ಸುತ್ತಾಡಿ, ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳ ಬಳಿ ಕುಳಿತು ಹಣ, ಚಿನ್ನಾಭರಣ ತೆಗೆದುಕೊಂಡು ಬರುವ ಸಾರ್ವಜನಿಕರ ಮೇಲೆ ನಿಗಾ ವಹಿಸಿ, ಫಾಲೋ ಮಾಡಿ ಮಾರ್ಗ ಮಧ್ಯೆ, ಟೈಯರ್‌ ಪಂಕ್ಚರ್‌, ಆಯಿಲ್‌ ಸೋರಿಕೆ, ವಾಹನದ ಮೇಲೆ ಹಕ್ಕಿಗಳ ಕಸ ಹಾಕಿವೆ ಎಂದೆಲ್ಲ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಾರೆ.

ಸಿಸಿ ಕ್ಯಾಮೆರಾ ನೀಡಿದ ಸುಳಿವು:   ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳದ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ. ಆಗ ಆರೋಪಿ ಗಿರಿ ಚಲನವಲನಗಳು ಸೆರೆಯಾಗಿದ್ದವು. ಈ ಸುಳಿವಿನ ಮೇರೆಗೆ ಇದು ಓಜಿ ಕುಪ್ಪಂ ಗ್ಯಾಂಗ್‌ ಎಂಬುದು ಖಚಿತವಾಗಿದೆ. ಆನಂತರ ಪಿಎಸ್‌ಐ ಬೈರಪ್ಪ ನೇತೃತ್ವದ ತಂಡ ಆಂಧ್ರಪ್ರದೇಶದ ಓಜಿ ಕುಪ್ಪಂಗೆ ತೆರಳಿ ಕಾರ್ಯಾಚರಣೆ ನಡೆಸಿ ಆರೋಪಿ ಗಿರಿಯನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ. ಆರೋಪಿ ಈ ಹಿಂದೆ ನಗರದ ಜಿಗಣಿ, ಅಮೃತಹಳ್ಳಿ, ಆನೇಕಲ್‌ ಸೇರಿ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ದರೋಡೆ ಮಾಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಮತ್ತೆ ತಮ್ಮ ಗ್ಯಾಂಗ್‌ ಜತೆ ಸೇರಿಕೊಂಡು ಕಳವು ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next