Advertisement

Theft: ಹಗಲಿನಲ್ಲಿ ಮನೆಗಳ ಶೋಧ; ರಾತ್ರಿ ಬೀಗ ಒಡೆದು ಕಳ್ಳತನ

11:32 AM Oct 17, 2023 | Team Udayavani |

ಬೆಂಗಳೂರು: ಹಗಲಿನ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ತಡರಾತ್ರಿ ಕಬ್ಬಿಣ ರಾಡ್‌ನಿಂದ ಆ ಮನೆಯ ಬೀಗ ಒಡೆದು ಕಳವು ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಕುವೆಂಪುನಗರದ ಸಿಂಗಾಪುರ ಲೇಔಟ್‌ ನಿವಾಸಿ ಅನಿಲ್‌ ದೇವ್‌(34) ಬಂಧಿತ.

ಆರೋಪಿಯಿಂದ 2.71 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನಾಭರಣ, 113 ಗ್ರಾಂ ಬೆಳ್ಳಿ ವಸ್ತುಗಳು, 54 ಸಾವಿರ ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಠಾಣಾ ವ್ಯಾಪ್ತಿಯ ಭೈರವೇಶ್ವರನಗರದ ನಿವಾಸಿ ರಮಾದೇವಿ ಎಂಬುವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರ ನೀಡಲು ಊರಿಗೆ ತೆರಳಿದ್ದರು. ಈ ವೇಳೆ ಆರೋಪಿ ಮನೆಯ ಬೀಗ ಮುರಿದು ಕಳ್ಳತನ ಮಾಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಉತ್ತರ ಪ್ರದೇಶ ಮೂಲದ ಆರೋಪಿ ಅನಿಲ್‌ ದೇವ್‌ ಕೆಲ ವರ್ಷಗಳಿಂದ ನಗರ ದಲ್ಲಿ ವಾಸವಾಗಿದ್ದು, ಐದು ವರ್ಷಗಳಿಂದ ನಗರದ ವಿವಿಧೆಡೆ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ವೃತ್ತಿಪರ ಕಳ್ಳನಾಗಿರುವ ಈತನ ವಿರುದ್ಧ ಸೋಲದೇವನಹಳ್ಳಿ, ಬಾಗಲಗುಂಟೆ, ಪೀಣ್ಯ, ಯಶವಂತಪುರ, ಬ್ಯಾಟರಾಯನಪುರ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಕೆಲ ಪ್ರಕರಣಗಳಲ್ಲಿ ಜೈಲು ಸೇರಿದ್ದ ಆರೋಪಿ ಜಾಮೀನು ಪಡೆದು ಹೊರಬಂದ ಬಳಿಕವೂ ತನ್ನ ಕೃತ್ಯ ಮುಂದುವರಿಸಿದ್ದನು.

ತಡರಾತ್ರಿ ಬೀಗ ಒಡೆದು ಕಳವು: ಆರೋಪಿ ಹಗಲು ಮತ್ತು ಸಂಜೆ ವೇಳೆ ನಗರದ ಕೆಲವೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ. ತಡರಾತ್ರಿಯಾದರೂ ಆ ಮನೆಗೆ ಯಾರು ಬಾರದನ್ನು ಖಚಿತ ಪಡಿಸಿಕೊಂಡು, ಬಳಿಕ ಆ ಮನೆಯ ಬಾಗಿಲ ಒಡೆದು ಒಳ ನುಗ್ಗಿ, ಒಡವೆ, ನಗದು ಸೇರಿ ಮೌಲ್ಯಯುತ ವಸ್ತು ದೋಚುತ್ತಿದ್ದ. ಕಳವು ವಸ್ತುಗಳನ್ನು ಪರಿಚಿತರ ಮೂಲಕ ವಿಲೇವಾರಿ ಮಾಡಿ, ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next