Advertisement

ಮದ್ಯದಂಗಡಿ ಬೀಗ ಮುರಿದು ಕಳ್ಳತನ; ಸಾವಿರಾರು ರೂ. ಮೌಲ್ಯದ ಮದ್ಯ ದೋಚಿ ಪರಾರಿ

06:39 PM Oct 19, 2022 | Team Udayavani |

ಕುಣಿಗಲ್: ಮದ್ಯದ ಅಂಗಡಿಯ ಸಿಸಿ ಕ್ಯಾಮರಾ ಹಾನಿಗೊಳಿಸಿ ಅಂಗಡಿಯ ಶಟರ್ ಮುರಿದು ನಗದು ಸೇರಿದಂತೆ ಸಾವಿರಾರು ರೂ. ಬೆಲೆ ಬಾಳುವ ಮದ್ಯವನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ 48 ಎರಡನೇ ವಾರ್ಡ್ ಮಲ್ಲಾಘಟ್ಟದಲ್ಲಿ ಅ.18ರ ನಡೆದಿದೆ.

Advertisement

ಇಲ್ಲಿನ ಎಂಎಸ್‌ಐಎಲ್ ಅಂಗಡಿಯ ಶಟರ್‌ ಅನ್ನು ಆರೇ ಕೊಲಿನಿಂದ ಮೀಟಿದ ದುಷ್ಕರ್ಮಿಗಳು ಸಿಸಿ ಕ್ಯಾಮರಾ ಮುರಿದು ಒಳಗೆ ನುಗ್ಗಿ ಕ್ಯಾಶ್ ಬಾಕ್ಸ್ ಒಡೆದು ಅದರಲ್ಲಿದ್ದ 25 ಸಾವಿರ ರೂ. ನಗದು ಹಾಗೂ 28 ಸಾವಿರ ರೂ. ಬೆಲೆ ಬಾಳುವ ವಿವಿಧ ಮಾದರಿಯ ಮದ್ಯವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಎಂಎಸ್‌ಐಎಲ್ ಅಂಗಡಿಯ ಹೊರ ನೌಕರ ಸಿಬ್ಬಂದಿಯೊಬ್ಬರು ಎಂದಿನಂತೆ ಅ.18ರ ಮಂಗಳವಾರ ರಾತ್ರಿ ಸುಮಾರು 9.30 ಗಂಟೆಗೆ ಅಂಗಡಿ ಮುಚ್ಚಿ ಹೋಗಿದ್ದರು. ಆದರೆ ಅ.19ರ ಬುಧವಾರ ಬೆಳಗ್ಗೆ ಅಂಗಡಿ ಪಕ್ಕದ ಇನ್ನೊಂದು ಅಂಗಡಿಯ ಮಾಲೀಕರು ಮದ್ಯದಂಗಡಿ ಕಳ್ಳತನವಾಗಿದೆ ಎಂದು ಅಂಗಡಿಯ ಸಿಬ್ಬಂದಿ ಹರ್ಷರಿಗೆ ಪೋನ್ ಮೂಲಕ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹರ್ಷ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನ ದಳ ಹಾಗೂ ಬೆರಳಚ್ಚು ಪೊಲೀಸರು ಘಟನೆ ಸ್ಥಳಕ್ಕೆ ಬಂದು ಪರಿಶೀಲಿಸಿ ಮಾಹಿತಿ ಕಲೆ ಹಾಕಿದ್ದಾರೆ.

ವಾರದಲ್ಲಿ ಎರಡನೇ ಕಳ್ಳತನ:  ಇದೇ ತಿಂಗಳು 13ರಂದು ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ ಅವರ ಕಾಂಪ್ಲೆಕ್ಸ್ ಪಕ್ಕ ಇರುವ ಶ್ರೀನಿವಾಸ ಲಿಕ್ಕರ್ ಶಾಪ್‌ಗೆ ಕನ್ನ ಹಾಕಿದ ಕಳ್ಳರು ನಗದು ಸೇರಿದಂತೆ ಸುಮಾರು 1.5 ಲಕ್ಷ ರೂ. ವೆಚ್ಚದ ವಿವಿಧ ಮಾದರಿಯ ಮದ್ಯವನ್ನು ದೋಚಿಕೊಂಡು ಪರಾರಿಯಾಗಿದ್ದು, ಅದೇ ಮಾದರಿಯಲ್ಲಿ ಮಲ್ಲಾಘಟ್ಟ ಸಮೀಪ ಕಳವು ಮಾಡಲಾಗಿದೆ. ವಾರದಲ್ಲಿ ಇದು ಎರಡನೇ ಕಳ್ಳತನವಾಗಿದ್ದು, ಅಂಗಡಿಯ ಮಾಲೀಕರ ಆತಂಕಕ್ಕೆ ಕಾರಣವಾಗಿದೆ.

ಗಸ್ತು ಬಿಗಿಗೊಳಿಸಿ: ಈವರೆಗೂ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಜಾನುವಾರಗಳನ್ನು ಕಳವು ಮಾಡಲಾಗುತ್ತಿತು. ಆದರೆ ಈಗ ಲಿಕ್ಕರ್ ಅಂಗಡಿಗಳ ಬೀಗ ಮುರಿದು ಲಕ್ಷಾಂತರ ರೂ. ಬೆಲೆ ಬಾಳುವ ಮದ್ಯ ಕಳವು ಮಾಡಲಾಗುತ್ತಿದೆ. ಅದು ರಾಷ್ಟ್ರೀಯ ಹೆದ್ದಾರಿಯಲ್ಲೇ ನಡೆಯುತ್ತಿರುವ ಘಟನೆಯಿಂದ ನಾಗರೀಕರನ್ನು ಬೆಚ್ಚಿ ಬೀಳಿಸುತ್ತಿದೆ. ಅಪರಾಧ ವಿಭಾಗದ ಪೊಲೀಸರು ರಾತ್ರಿ ಸಮಯದಲ್ಲಿ ಗಸ್ತು ಬಿಗಿಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next