ವಾಡಿ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಗ್ರಾಮಗಳ ಮನೆಗಳಿಗೆ ಕನ್ನ ಹಾಕಿ ಹಣ ಹಾಗೂ ಚಿನ್ನಾಭರಣ ಲಪಟಾಯಿಸಿ ತಲೆಮರೆಸಿಕೊಂಡಿದ್ದ ಮನೆಗಳ್ಳನನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ನಿಜಾಮ ಗೇಟ್ ಬಡಾವಣೆ ನಿವಾಸಿ ಶೇಖಪಾಶಾ ಸೈಯದ್ ಪಾಶಾ ಬಂಧಿತ ಆರೋಪಿಯಾಗಿದ್ದು, 88 ಗ್ರಾಂ ಬಂಗಾರ, 350 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು 4.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಾಲವಾರ ವಲಯದ ತುನ್ನೂರು ಹಾಗೂ ಸುಗೂರ (ಎನ್) ಗ್ರಾಮಗಳ ಮನೆಗಳಿಂದ ಮತ್ತು ವಾಡಿ ಪಟ್ಟಣದ ನಿಜಾಮ ಗೇಟ್ ಹತ್ತಿರದ ಶ್ರೀ ಮರಗಮ್ಮ ದೇವಿ ದೇವಸ್ಥಾನದಿಂದ ಚಿನ್ನಾಭರಣ ಕಳವಾದ ಪ್ರಕರಣ 2021-22ನೇ ಸಾಲಿನಲ್ಲಿ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಬಂಧನಕ್ಕೆ ಜಾಲ ಬೀಸಿದ್ದರು. ಈ ಕುರಿತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಮಹಾಂತೇಶ ಪಾಟೀಲ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದ ಯಶಸ್ವಿ ಕಾರ್ಯಾಚರಣೆಯಿಂದ ಆರೋಪಿ ಸೆರೆಯಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ತನಿಖಾ ತಂಡದಲ್ಲಿ ಸಿಬ್ಬಂದಿಗಳಾದ ಲಕ್ಷ್ಮಣ, ಬಸವರಾಜ, ಬಸಲಿಂಗಪ್ಪ, ದತ್ತಾತ್ರೇಯ, ಮಧುಕರ ಇದ್ದರು. ಪೊಲೀಸರ ಯಶಸ್ವಿ ಕಾರ್ಯಾಚರಣೆ ತಿಳಿದು ಶುಕ್ರವಾರ ಠಾಣೆಗೆ ಆಗಮಿಸಿದ ಎಸ್‌ಪಿ ಇಶಾ ಪಂತ್ ಜಪ್ತಿ ಮಾಡಿಕೊಳ್ಳಲಾದ ಚಿನ್ನಾಭರಣವನ್ನು ವೀಕ್ಷಿಸಿದರು. ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿದರು.