ಶಿವಮೊಗ್ಗ: ಯುವಕನೊಬ್ಬ ಯುವತಿಯರ ಜತೆ ಇದ್ದ ಅಶ್ಲೀಲ ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದು, ಎಫ್ ಐಆರ್ ದಾಖಲಿಸುತ್ತಿದ್ದಾರೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ತೀರ್ಥಹಳ್ಳಿಯ ಎಬಿವಿಪಿ ಸಂಘಟನೆಯ ನಾಯಕ ಕೆಲವು ಯುವತಿಯರ ಜೊತೆಗೆ ಸಲುಗೆಯಿಂದ ಇರುವ ವಿಡಿಯೋಗಳು ವೈರಲ್ ಆಗಿತ್ತು. ಇದರ ಬೆನ್ನಿಗೆ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವಕನೊಬ್ಬ ಕೆಲವು ಯುವತಿಯರ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ತೀರ್ಥಹಳ್ಳಿಯಲ್ಲಿ ವೈರಲ್ ಆಗಿದೆ. ಯುವಕನನ್ನು ವಶಕ್ಕೆ ಪಡೆದಿದ್ದೇವೆ. ಆತನ ವಿರುದ್ಧ ಎಫ್ ಐಆರ್ ದಾಖಲಿಸಲಾಗುತ್ತಿದೆ. ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ.
ವೈರಲ್ ಮಾಡಿದರೆ ಶಿಕ್ಷೆ: ವಿಡಿಯೋ ವೈರಲ್ ಬೆನ್ನಿಗೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ ಎಚ್ಚರಿಕೆ ಸಂದೇಶ ಪ್ರಕಟಿಸಿದೆ. ಅಶ್ಲೀಲ ಫೋಟೊ, ವಿಡಿಯೋಗಳನ್ನು ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿರುವುದು ಗೊತ್ತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ರೀತಿ ಶೇರ್ ಮಾಡುವುದು ಮತ್ತು ಸ್ಟೋರ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ 67 (E) ಅಡಿ ಶಿಕ್ಷಾರ್ಹ ಅಪರಾಧ. ಆರೋಪ ಸಾಬೀತಾದರೆ 5 ವರ್ಷದವರೆಗೆ ಜೈಲು ಮತ್ತು ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಕುರಿತು ಗ್ರೂಪ್ ಅಡ್ಮಿನ್‌ಗಳು ಕೂಡ ಎಚ್ಚರ ವಹಿಸಬೇಕು ಎಂದು ಸೂಚಿಸಲಾಗಿದೆ.
ಇನ್ನು, ಎಬಿವಿಪಿ ನಾಯಕನ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ಎನ್ ಎಸ್ ಯುಐ ಸಂಘಟನೆ ಕಾರ್ಯಕರ್ತರು ತೀರ್ಥಹಳ್ಳಿ ಡಿವೈಎಸ್‌ಪಿಗೆ ದೂರು ನೀಡಿತ್ತು.