ನಾಟಕ, ಯಕ್ಷಗಾನ, ಸಂಘಟನೆ, ವಿವಿಧ ಸಂಘಗಳು ಹೀಗೆ ಕಲಾಸಕ್ತಿಯ ಹಲವು ಆಯಾಮಗಳಲ್ಲಿ ಸದಾ ವ್ಯಸ್ತರಾಗಿದ್ದು, ಅದೊಂದು ಆತ್ಮಕಾಯಕವೆಂಬಂತೆ ಮೌನವಾಗಿ ಕಾರ್ಯವೆಸಗುತ್ತಿದ್ದ ಯು. ದುಗ್ಗಪ್ಪರು ಮೌನವಾಗಿಯೇ ಮೌನದಲ್ಲಿ ಲೀನರಾಗಿದ್ದಾರೆ. ಎಪ್ರಿಲ್ 6ರಂದು ಕಚೇರಿಯ ಕಾರ್ಯ ಪೂರೈಸಿ, ಸ್ಪರ್ಧೆಯೊಂದಕ್ಕಾಗಿ ಮಕ್ಕಳ ಯಕ್ಷಗಾನ ತಂಡಕ್ಕೆ ತರಬೇತಿ ನೀಡಿ ಮನೆಗೆ ಬಂದು ಮಲಗಿದವರು ಮರಳಿ ಎಚ್ಚರಗೊಳ್ಳಲೇ ಇಲ್ಲ.
ಯಕ್ಷಗಾನದ ನಂಟು ನಿರಂತರ
ಯು. ದುಗ್ಗಪ್ಪ ವೃತ್ತಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉಡುಪಿ ಶಾಖೆಯಲ್ಲಿ ಅಧಿಕಾರಿಯಾಗಿದ್ದವರು. ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದ, ರಂಗನಟ, ಕಲಾಸಂಘಟಕ. ಅವರಿಗೆ ಯಕ್ಷಗಾನದ ಬಾಲ ಪಾಠವಾದುದು ತೋನ್ಸೆ ಕಾಂತಪ್ಪ ಮಾಸ್ತರರಿಂದ. ಮುಂದೆ ತೋನ್ಸೆ ಜಯಂತ್ ಕುಮಾರರ ಪ್ರೀತಿಯ ಶಿಷ್ಯನಾಗಿ ತರಬೇತಿ ಪಡೆದರು. ಕಾಲೇಜು ದಿನಗಳಲ್ಲಿ ಕಲ್ಯಾಣಪುರದ ಮಿಲಾಗ್ರಿಸ್‌ನಲ್ಲಿ ಅವರೇ ಯಕ್ಷಗಾನ ತಂಡದ ನಾಯಕ. ವಯಸ್ಸು ಐವತ್ತು ಕಳೆದ ಮೇಲೂ ಯಕ್ಷಗಾನ ಕಲಿಯುವ ಉತ್ಸಾಹ ಕುಂದಲಿಲ್ಲ. ಉಡುಪಿ ಯಕ್ಷಗಾನ ಕೇಂದ್ರದ ಜತೆಗೆ ನಿಕಟ ಸಂಪರ್ಕದಲ್ಲಿದ್ದರು. ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಹೊಸ ಹೊಸ ಹೆಜ್ಜೆ ಕಲಿಯುವ ಹುಮ್ಮಸ್ಸು ಅನು ದಿನವೂ ಅವರದಾಗಿತ್ತು. ಮಲ್ಪೆ ಆಸುಪಾಸಿನ ಹಲವು ಶಾಲೆಗಳ ವಾರ್ಷಿಕೋತ್ಸವಕ್ಕೆ ಯಕ್ಷಗಾನ ತರಬೇತಿ ನೀಡುತ್ತಿದ್ದರು. ಹತ್ತು ವರ್ಷಗಳಿಂದ ಯಕ್ಷಶಿಕ್ಷಣ ಟ್ರಸ್ಟ್‌ನ ಖಾಯಂ ಗುರು. ಬಡಾನಿಡಿಯೂರು ಗಜಾನನ ಯಕ್ಷಗಾನ ಕಲಾಸಂಘದ ಕಾರ್ಯಕಾರಿ ಸಮಿತಿಯ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಅಲ್ಲಿ ಮಕ್ಕಳ ಮತ್ತು ಮಹಿಳೆಯರ ತಂಡವನ್ನು ಕಟ್ಟಿ ಬೆಳೆಸಿದವರು ಅವರು. ಹುದ್ದೆ ಯಾವುದೇ ಇರಲಿ, ದುಗ್ಗಪ್ಪನವರ ತೊಡಗಿಸಿಕೊಳ್ಳುವಿಕೆ ಏಕಪ್ರಕಾರ. ಆ ಸಂಘಟನೆಯ ಕಾರ್ಯದರ್ಶಿ ಯಾಗಿ ಬೆಳ್ಳಿಹಬ್ಬ , ತೋನ್ಸೆ ಕಾಂತಪ್ಪ ಮಾಸ್ತರರ ಶತಮಾನೋತ್ಸವ, ತೋನ್ಸೆ ಜಯಂತ ಕುಮಾರರ ಷಷ್ಟéಬ್ದ ಸಂದರ್ಭಗಳಲ್ಲಿ ಕಾರ್ಯಕ್ರಮಗಳ ಯಶಸ್ಸಿನ ರೂವಾರಿಯಾಗಿ ದ್ದರು. ಯಕ್ಷಗಾನ ಸಂಘಟನೆಗೆ ಆರ್ಥಿಕ ಸಂಚಯನ ಹೇಗೆ ಮಾಡಬೇಕೆಂಬುದಕ್ಕೆ ಮಾದರಿಯಾಗಿ ಅವರ ಚಿಕ್ಕ ಮೇಳವಿತ್ತು. ಉಡುಪಿಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಸಕ್ರಿಯ ಸದಸ್ಯರಾಗಿದ್ದರು.
ಯಕ್ಷಗಾನ ಸಂಬಂಧೀ ಪುಸ್ತಕ ರಚನೆಯಲ್ಲೂ ಅವರು ಮುಂದಿದ್ದರು. ಅವರ “ಬಲ್ಲಿರೇನಯ್ಯ’, ಪೂರ್ವರಂಗದ ಕುರಿತ ಪಾಠಕ್ರಮವನ್ನು ಒಳಗೊಂಡಿರುವುದಲ್ಲದೇ ಯಕ್ಷಗಾನ ಅರ್ಥಗಾರಿಕೆಗೆ ಬೇಕಾದ ಅಪೂರ್ವ ಮಾಹಿತಿ ಸಂಗ್ರಹವಾಗಿ ಉಪಯುಕ್ತ. “ಚಿಕ್ಕಮೇಳ’, ಈ ಕಲಾಪ್ರಕಾರದ ಪರಿಚಯದೊಂದಿಗೆ ಚಿಕ್ಕಮೇಳದ ಕಲಾವಿದರಿಗೆ ಬೇಕಾದ ಮಾಹಿತಿಯ ಕೋಶದಂತಿದೆ. ಉಡುಪಿ ಜಿಲ್ಲೆಯ ಯಕ್ಷಗಾನ ಸಂಘಟನೆಗಳು, ಹವ್ಯಾಸಿ ಕಲಾವಿದರು, ಕಲಾಸಂಘಟಕರ ವಿಳಾಸ, ದೂರವಾಣಿ ಸಂಖ್ಯೆ ಹೊಂದಿರುವ ಸಂಗ್ರಹ ಯೋಗ್ಯ ಹೊತ್ತಗೆ “ಉಡುಪಿ ಯಕ್ಷಪರಂಪರೆ’. ಹಲವಾರು ಬಡ ವಿದ್ಯಾರ್ಥಿಗಳಿಗೆ ಯಕ್ಷಗಾನಕ್ಕೆ ಸಂಬಂಧಿ ವಿದ್ಯಾರ್ಥಿವೇತನ ಸಿಗುವಲ್ಲಿ ನೆರವಾದ ವರು ದುಗ್ಗಪ್ಪನವರು. ಹಲವು ಬಡ ಕಲಾವಿದರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದ ಗುಪ್ತದಾನಿ. ಸುಮನಸಾ ಕೊಡವೂರು ನಾಟಕ ತಂಡದಲ್ಲಿ ಯಕ್ಷಗಾನ ನಿರ್ದೇಶನ ಅವರದ್ದಾಗಿತ್ತು. ಅವರ ಈ ಕ್ಷೇತ್ರದ ಸಾಧನೆಗೆ ಗೌರವದ ಉಡುಗೊರೆಯಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯತ್ವ ಅವರನ್ನರಸಿ ಬಂದಿತ್ತು.
ನಾಟಕ ರಂಗದಲ್ಲೂ ದುಗ್ಗಪ್ಪ ಸಕ್ರಿಯರಾಗಿದ್ದವರು. ಉಡುಪಿಯ ರಂಗಭೂಮಿ ಸಂಸ್ಥೆಯೊಂದಿಗೆ ಅವರ ಸಂಬಂಧ ಗಾಢವಾದುದು. ನಾಟಕ ಕುರಿತಾದ ಸೆಳೆತ, ನಾಟಕ ದಲ್ಲಿ ಪಾತ್ರ ಮಾಡಬೇಕೆಂಬ ತುಡಿತ ಇಲ್ಲಿಗೆ ಬರುವಂತೆ ಮಾಡಿತು. ಬಂದ ಮೇಲೆ ಅದರ ಭಾಗವೇ ಆದರು. ಇದು ತಮ್ಮ ಸಂಸ್ಥೆಯೆಂಬ ಭಾವದಿಂದ ಅದರಲ್ಲಿ ಕ್ರಿಯಾಶೀಲ ರಾದರು. ಅವರ ಪ್ರಾಮಾಣಿಕ ದುಡಿಮೆಗೆ ಮೆಚ್ಚಿದ ಹಿರಿಯರು ಕಾರ್ಯಕಾರಿ ಸಮಿತಿ ಯಲ್ಲಿ ಅವರನ್ನು ಸೇರಿಸಿಕೊಂಡು ಜವಾಬ್ದಾರಿ ನೀಡಿದಾಗ ಅದನ್ನು ಸಮರ್ಥವಾಗಿ ನಿರ್ವಹಿಸಿದರು. ಕಳೆದ ವರ್ಷ ಸಂಸ್ಥೆಯ ಸುವರ್ಣಮಹೋತ್ಸವದ ಸಂದರ್ಭದಲ್ಲಿ ಕೋಶಾಧಿಕಾರಿಯಾಗಿದ್ದರು. ಸಂಭ್ರಮದ ಯಶಸ್ಸಿಗೆ ಅವರ ಕೊಡುಗೆ ಗಮನಾರ್ಹ.
ಇಷ್ಟಲ್ಲದೆ ದುಗ್ಗಪ್ಪನವರಿಗೆ ಭಜನೆಯಲ್ಲಿ ಅಪಾರ ಶ್ರದ್ಧೆಯಿತ್ತು. ಅವರೊಬ್ಬ ಸುಶ್ರಾವ್ಯ ಹಾಡುಗಾರ. ಮಲ್ಪೆ ಕಡಲತೀರದ ಜ್ಞಾನಜ್ಯೋತಿ ಭಜನಾ ಮಂಡಳಿ, ಹೇರೂರು ಭಜನಾ ಮಂಡಳಿಗಳಲ್ಲಿ ಸಕ್ರಿಯರಾಗಿದ್ದರು. ಮಲ್ಪೆ ಫಿಶರೀಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ, ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಹತ್ತು ಹಲವು ಸಂಘಟನೆಗಳಲ್ಲಿ ಇದ್ದರೂ ಹತ್ತರ ಜತೆಗೆ ಹನ್ನೊಂದಾಗದೆ ಸಂಪೂರ್ಣ ಬದ್ಧತೆಯಿಂದ ದುಡಿಯುವ ಅವರ ನಿಷ್ಠೆ ದೊಡ್ಡದು.
ಸಂಘಟನಾ ಚತುರ, ಸ್ನೇಹಜೀವಿ, ಮೃದುಮಾತಿನ ದುಗ್ಗಪ್ಪನವರು ಅಜಾತಶತ್ರು. ಎಲ್ಲರೊಡನೆ ಒಂದಾಗಿ ದುಡಿಯುವಲ್ಲಿ ಸಂತೋಷ ಕಂಡವರು, ನೋವು ನುಂಗಿ ನಲಿವು ಹಂಚಿದವರು.
ನಾರಾಯಣ ಎಂ. ಹೆಗಡೆ