Advertisement

ರಂಗಭೂಮಿಯೂ ಸಂತೋಷದ ಮೂಲ

12:17 PM Sep 07, 2018 | Team Udayavani |

ಯಲಹಂಕ: ಸಂಗೀತ, ನಾಟಕ, ಸಾಹಿತ್ಯಗಳ ಜೊತೆಯಲ್ಲಿ ರಂಗಭೂಮಿಯೂ  ಸಂತೋಷದ ಮೂಲಗಳಲ್ಲಿ ಒಂದು ಇದರಲ್ಲಿ  ಕೇವಲ ನಟರಷ್ಟೇ ಅಲ್ಲದೆ ಪ್ರೇಕ್ಷಕರು ಸಂತೋಷ ಪಡುತ್ತಾರೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಹೇಳಿದರು.

Advertisement

ಯಲಹಂಕ ಉಪನಗರದ ಎಸ್‌.ಬಿ.ಸಮೂಹ ಶಿಕ್ಷಣ ಸಂಸ್ಥೆಯ ಪ್ರದರ್ಶನ ಕಲಾವಿಭಾಗದ ರಂಗ ಸ್ಥಳ ನಾಟಕ ಶಾಲೆ ಉದ್ಘಾಟಿಸಿ ಮಾತನಾಡಿ, ಯುವಜನಾಂಗದ ಜೀವನೋತ್ಸಾಹವನ್ನು ಕಾಪಾಡಿಕೊಳ್ಳಲು ನಾಟಕಗಳು ಅತ್ಯವಶ್ಯಕ. ಉತ್ತಮ ಪ್ರತಿಭೆಗಳಿಗೆ ಕಿರುತೆರೆ ಸೇರಿದಂತೆ ಚಲನಚಿತ್ರರಂಗದಲ್ಲಿ ವಿಪುಲ ಅವಕಾಶಗಳಿದ್ದು, ಎಲ್ಲ ಆಯಾಮಗಳಿಂದ ಒಳ್ಳೆಯ ಪರಿಣಿತಿ ಪಡೆದು ಉತ್ತಮ ಕಲಾವಿದರಾಗಿ ಹೊರಹೊಮ್ಮಬೇಕು ಎಂದರು.

ಇಂದಿನ ಕಾಲಘಟ್ಟದಲ್ಲಿ ಜನರು ಬದುಕುವ ಉತ್ಸಾಹವನ್ನೇ ಕಳೆದುಕೊಂಡಿದ್ದಾರೆ. ಯುವಜನಾಂಗ ಮಾದಕ ವ್ಯಸನಿಗಳಾಗಿ ತಪ್ಪು ಆದರ್ಶಗಳ ಪಾಲನೆ ಮತ್ತು ಮಾದರಿಗಳ ಅನುಸರಣೆ ಯಿಂದ ಹಿರಿಯರ ಆದರ್ಶಗಳನ್ನು ಪಾಲಿಸುತ್ತಿಲ್ಲ ಎಂದು ವಿಷಾದಿಸಿದರು.

ಸಾಹಿತಿ ಡಾ.ನಾ.ಸೋಮೇಶ್ವರ್‌ ಮಾತನಾಡಿ, ರಂಗಭೂಮಿ ಎಲ್ಲಾ ಕಲೆಗಳ ತಾಯಿ. ಸಾಹಿತ್ಯ ಲೋಕದಲ್ಲಿ ಕಟ್ಟ ಕಡೆಯ ಸಾರಿ ಅರಳಿದ ಗುಚ್ಚ. ರಂಗಭೂಮಿ ಇದರಲ್ಲಿ ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಬಣ್ಣ, ಪರಿಕರಗಳಿವೆ. ಆಧುನಿಕ ಪರಿಕರಗಳನ್ನು ಬಳಿಸಿಕೊಂಡು ರಂಗ ಚಮತ್ಕಾರಗಳನ್ನು ಮಾಡುವ ಅವಕಾಶ ಪ್ರಸ್ತುತ ದಿನಗಳಲ್ಲಿದೆ.

ಸಮಗ್ರ ಬೆಳಣಿಗೆಯ ಜೊತೆಗೆ ಪರಿಪೂರ್ಣ ವ್ಯಕ್ತಿಗಳಾಗುವ ದಿಸೆಯಲ್ಲಿ ರಂಗಭೂಮಿ ನಿಮ್ಮನ್ನು ಕರೆದೊಯ್ಯಲಿದೆ ಎಂದರು. ಚಿತ್ರನಟ ಅನಿರುದ್ಧ್ ಮಾತನಾಡಿ, ಭವಿಷ್ಯದಲ್ಲಿ ಉತ್ತಮ ಕಲಾವಿದರಾಗಬೇಕೆಂಬ ಹಂಬಲ ಇರುವ ವರಿಗೆ ರಂಗಭೂಮಿ ತಾಯಿಯಿದ್ದಂತೆ; ಆತುರಪಡದೆ, ಅವಕಾಶಗಳು ಸಿಗದಿದ್ದರೆ ಬೇಸರಗೊಳ್ಳದೆ ಶ್ರ ದ್ಧೆಯಿಂದ ಶ್ರಮಿಸಿದರೆ ಜೀವನದಲ್ಲಿ ಉನ್ನತಿಗೆ ಏರಲು ಸಾಧ್ಯ ಎಂದು ತಿಳಿಸಿದರು.

Advertisement

ಕವಿ ಜರಗನಹಳ್ಳಿ ಶಿವಶಂಕರ್‌, ಹಿರಿಯ ರಂಗಕರ್ಮಿ ಜನಾರ್ದನ್‌-ಜೆನ್ನಿ, ”ರಂಗಸ್ಥಳ” ಯೋಜನಾ ನಿರ್ದೇಶಕ ಡಾ.ಎಸ್‌ಎಲ್‌ಎನ್‌.ಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಮು.ಕೃಷ್ಣಮೂರ್ತಿ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅ.ಬ.ಶಿ ವಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next