ಬೆಂಗಳೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ರಂಗಭೂಮಿಯ ಪಾತ್ರವೂ ಪ್ರಮುಖವಾಗಿದ್ದು, ವಿಭಿನ್ನ ರಂಗ ಪ್ರಯೋಗಗಳು ಹಳ್ಳಿಯವರೆಗೂ ತಲುಪಬೇಕಾದ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.
ರಂಗಪಂಚಮಿ ಸಂಸ್ಥೆ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಜನರನ್ನು ಎಚ್ಚರಿಸುವ ಪ್ರಬಲ ಮಾಧ್ಯಮ ರಂಗಭೂಮಿ ಎಂದು ತಿಳಿಸಿದರು.
ಶೈಕ್ಷಣಿಕ ಕ್ಷೇತ್ರಕ್ಕೆ ಕೆಲವು ಶಕ್ತಿಗಳು ಪ್ರವೇಶ ಮಾಡಿದ್ದು ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಭವಿಷ್ಯತ್ತಿ ದಾರಿ ದೀಪವಾಗಬೇಕಾಗಿರುವ ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ನಮ್ಮ ನಿಮ್ಮೆಲ್ಲರ ಮುಂದೆ ಇಂದಿಗೂ ಹಲವು ಸಾಧಕರು ಎಲೆ ಮರೆಕಾಯಿಯಂತೆ ಬದಕುತ್ತಿದ್ದಾರೆ. ಅವರನ್ನು ಹುಡುಕಿ ಗೌರವಿಸುವಂತ ಕೆಲಸ ನಡೆಯಬೇಕಾಗಿದೆ ಎಂದು ಹೇಳಿದರು.
ಜೀವನ ಶೈಲಿಯ ಬದಲಾವಣೆಯಿಂದಾಗಿ ಕೆಲವು ಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಹಿಂದೆ ತಂದೆ -ತಾಯಿಯರನ್ನು ಮಕ್ಕಳು ಆಸ್ಪತ್ರೆಗೆ ಕರೆತರುತ್ತಿದ್ದರು. ಆದರೆ ಈಗ ಪೋಷಕರೇ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಹಿರಿಯ ಚಿತ್ರ ನಟ ದೊಡ್ಡಣ್ಣ, ರಂಗಕಲಾವಿದ ಪ್ರಮೋದ್ ಶಿಗ್ಗಾಂವ್, ಮಂಡ್ಯ ರಮೇಶ್ ಸೇರಿದಂತೆ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ರಂಗಚೇತನ ಸಂಸ್ಕೃತಿ ಕೇಂದ್ರದ ಅಧ್ಯಕ್ಷ ಡಾ.ಡಿ.ಕೆ.ಚೌಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.