Advertisement

ರಂಗಭೂಮಿ, ಸಿನಿಮಾ-ಕಿರುತೆರೆ ಸಾಧನೆ ಖುಷಿ ತಂದಿದೆ

10:35 AM Dec 11, 2017 | |

ಕಲಬುರಗಿ: ಮೇರು ನಟ ರಾಜಕುಮಾರ ಮಗನಲ್ಲ, ವಿಷ್ಣುವರ್ಧನ ಅಳಿಯನಲ್ಲ, ರವಿಚಂದ್ರನ್‌ ಸಹೋದರನಲ್ಲ. ಮಧ್ಯಮವರ್ಗದ ಮನೆತನದಿಂದ ಬಂದಿರುವ ನನಗೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರ ಬೆಳೆಸಿದ್ದನ್ನು ಹಾಗೂ ನಡೆದುಬಂದ ದಾರಿ ಅವಲೋಕನ ಮಾಡಿಕೊಂಡರೆ ಖುಷಿಯಾಗುತ್ತದೆ ಎಂದು ನಟ, ರಂಗ ಕಲಾವಿದ ಮಂಡ್ಯ ರಮೇಶ ಮನದಾಳದಿಂದ ನುಡಿದರು.

Advertisement

ಕಲಬುರಗಿ ರಂಗಾಯಣ, ರಂಗಸಂಗಮ ಕಲಾವೇದಿಕೆ ಮತ್ತು ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ರಂಗಾಯಣದ ಸಭಾಂಗಣದಲ್ಲಿ ಆಯೋಜಿಸಿದ್ದ ರಂಗ-ಸಿನಿಮಾ-ಕಿರುತೆರೆಯಲ್ಲಿ ಮಂಡ್ಯ ರಮೇಶ ಅವರ ಖಾಸ್‌ ಬಾತ್‌ ಕಾರ್ಯಕ್ರಮದಲ್ಲಿ ಮನ ಬಿಚ್ಚಿ ಮಾತನಾಡಿದ ಅವರು, ಆರಂಭದಲ್ಲಿ ಹಿರಿಯರಾದ ಪಂಢರಿಬಾಯಿ, ಕಲ್ಯಾಣಕುಮಾರ,
ಮೈನಾವತಿ ಅವರಂಥ ಹಿರಿಯರ ಜೊತೆ ನಟಿಸುವಾಗ ಆತಂಕ ಎದುರಾಗಿತ್ತು ಎಂದರು.

ನಿರ್ದೇಶಕರ ಆಣತಿಯಂತೆ ಪಾತ್ರ ಮಾಡುವುದನ್ನು ಕಲಿತುಕೊಳ್ಳಬೇಕು. ಇದಕ್ಕೂ ಮುನ್ನ, ಮೊದಲ ಗುರು ಎನಿಸಿಕೊಳ್ಳುವ ಕನ್ನಡಿ ಎದುರು ನಿಂತು ಕಲಿತರೆ ಮಾತ್ರ ನಟನಾಗಬಲ್ಲ ಎಂದು ಸಲಹೆ ನೀಡಿದರು. 

ಹಿರಿಯ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರಂತಹ ಖ್ಯಾತನಾಮರು ಮಾಡುತ್ತಿದ್ದ ಸಿನಿಮಾಗಳ ಲೋಕಕ್ಕೂ ಮತ್ತು ಈಗಿನ ಸಿನಿಮಾ ಲೋಕಕ್ಕೂ ಇರುವ ವ್ಯತ್ಯಾಸ ಬಹಳಷ್ಟಿದೆ. ಆಗಿನ ಬದುಕು ಮೌಲ್ಯಯುತವಾಗಿತ್ತು. ಈಗ ಬದುಕೇ ಕೆಟ್ಟು ನಿಂತಿದೆ. ಆಗಿನ ಪ್ರೇಕ್ಷಕರ ಅಪೇಕ್ಷೆಗೆ ತಕ್ಕಂತೆ ಸಿನಿಮಾಗಳು ಬರುತ್ತಿದ್ದವು. ಈಗಿನ ಅಭಿರುಚಿಗೆ ಅನುಗುಣವಾಗಿ ಸಿನಿಮಾ ಹಾಡುಗಳು ಬರುತ್ತಿವೆ. ಹೀಗಾಗಿ ಮೌಲ್ಯ ಎಂಬುದು ಬದಲಾವಣೆ ಆಗುತ್ತಲೇ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ನಾನು ಎಡವೂ ಅಲ್ಲ, ಬಲವು ಅಲ್ಲ. ಎಡಪಂಥೀಯದಲ್ಲಿ ಗಂಭೀರತೆಯನ್ನು, ಪ್ರಗತಿಯನ್ನು ಹಾಗೂ ಬಲಪಂಥದಲ್ಲಿ ರಾಷ್ಟ್ರೀಯತೆ, ದೇಶ ಕಟ್ಟುವುದನ್ನು ಪ್ರೀತಿಸುವ , ಮನುಷ್ಯ ಮುಖೀಯಾಗಿದ್ದೇನೆ. ರಂಗಮುಖೀಯಾಗಿರುವ ಹಿನ್ನೆಲೆಯಲ್ಲಿ ಜನರ ಪ್ರೀತಿ ನನಗೆ ಯಾವತ್ತೂ ಮೋಸ ಮಾಡಿಲ್ಲ ಎಂದು ಮನದಾಳದಿಂದ ನುಡಿದರು.

Advertisement

ಅಪಮಾನ ಸಿಗದಿದ್ದರೆ ಸನ್ಮಾನ ಆಗೋದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಅಪಮಾನ, ಧೂಳು, ಸಂತೆಯಲ್ಲಿಯೇ ಅನುಭವ ಸಿಗಲು ಸಾಧ್ಯ. ಅಳಲಾರದೆ ಇರುವ ಮಹಿಳೆ, ನಾಚಿಕೆಪಟ್ಟುಕೊಳ್ಳದ ಪುರುಷ ಇರಬಾರದು. ಬದುಕು ಕೆಟ್ಟಿರುವುದರಿಂದ ಅದರ ಪ್ರತಿಫಲನವಾದ ಸಿನಿಮಾ, ರಂಗಭೂಮಿಯೂ ಕೆಟ್ಟದಾಗಿ ಕಾಣುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆಧುನಿಕ ಪ್ರಜ್ಞೆಯನ್ನಿಟ್ಟುಕೊಂಡು ಐತಿಹಾಸಿಕ, ಪೌರಾಣಿಕ ನಾಟಕ ಮಾಡುವ ಆಸೆ ಇದೆ ಎಂದು ಮನದಾಳವನ್ನು ಹೇಳಿಕೊಂಡ ಅವರು, ಗ್ರಾಮೀಣದಿಂದ ಬಂದು 213 ಸಿನಿಮಾಗಳನ್ನು ನೂರಾರು ನಾಟಕಗಳನ್ನು ಮಾಡಿದ ಹೆಮ್ಮೆ
ನನಗಿದೆ ಎಂದರು.

ಐತಿಹಾಸಿಕ, ಪೌರಾಣಿಕ ನಾಟಕಗಳಲ್ಲಿ ಇಂದಿನ ಆಧುನಿಕ ಪ್ರಜ್ಞೆ ಸೇರಿಸಬೇಕು ಎಂಬುದು ತಮ್ಮ ಅಭಿಪ್ರಾಯವಾಗಿದ್ದು, ಹೊಸಬರು ಈ ಕ್ಷೇತ್ರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮರುಸೃಷ್ಟಿಯಾಗಬೇಕಿದೆ. ಜಗತ್ತನ್ನು ಸುತ್ತುವ ಮತ್ತು ಗ್ರಹಿಸುವ ಸುಖವೇ ದೊಡ್ಡದು ಎಂದು ಹೇಳಿದರು.

ರಂಗಾಯಣ ನಿರ್ದೇಶಕ ಮಹೇಶ ಪಾಟೀಲ, ರಂಗಸಂಗಮ ಕಲಾ ವೇದಿಕೆಯ ಡಾ| ಸುಜಾತಾ ಜಂಗಮಶೆಟ್ಟಿ, ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಬಿ.ಎಚ್‌.ನಿರಗುಡಿ ಇದ್ದರು. ಪತ್ರಕರ್ತರೂ ಆಗಿರುವ ರಂಗನಿರ್ದೇಶಕ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪ್ರಭಾಕರ ಸಾತಖೇಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ನಾಟಕ ಅಕಾಡೆಮಿ ಸದಸ್ಯ ಸಂದೀಪ, ಮಹಾಂತೇಶ ನವಲಕಲ್‌, ಸುರೇಶ ಬಡಿಗೇರ, ಶಿವರಂಜನ್‌ ಸತ್ಯಂಪೇಟೆ, ಎಚ್‌.ಎಸ್‌.ಬಸವಪ್ರಭು, ಶಿವಕವಿ ಹಿರೇಮಠ ಜೋಗೂರ, ರಾಜಶೇಖರ ಮಾಂಗ್‌, ಭೀಮರಾಯ, ಎನ್‌.ಎಸ್‌.ಹಿರೇಮಠ, ಮಿಲಿಂದ್‌, ಸಿದ್ಧರಾಮ ಪೊಲೀಸ್‌ ಪಾಟೀಲ, ವಿಶ್ವರಾಜ, ಜಗನ್ನಾಥ ತರನಳ್ಳಿ, ರಾಘವೇಂದ್ರ ಹಳಿಪೇಟ, ಮಹೇಶ ಗಂವಾರ, ಎಸ್‌.ಎಸ್‌.ಬೇತಾಳೆ ಸೇರಿದಂತೆ ರಂಗಾಯಣದ ಕಲಾವಿದರು, ಆಸಕ್ತರು ಖಾಸ್‌ಬಾತ್‌ದಲ್ಲಿ ಭಾಗವಹಿಸಿದ್ದರು. 

ಶೀಘ್ರದಲ್ಲಿ ಮಗದೊಮ್ಮೆ ಮಜಾ ಟಾಕೀಜ್‌: ಕಿರುತೆರೆಯಲ್ಲಿ ಮಜಾ ಟಾಕೀಜ್‌ ಆರಂಭ ಮಾಡುವಾಗ ಈ ಪರಿ ದಾಖಲೆ ಮಾಡುತ್ತದೆ ಎಂಬುದಾಗಿ ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ. ಆದರೆ, 300 ಎಪಿಸೋಡ್‌ಗಳಿಗಿಂತ ಹೆಚ್ಚು ದಾಟಿಹೋದಾಗ, ಕಿರುತೆರೆಯಲ್ಲಿ ಕಾಮಿಡಿ ಶೋ ಕಾರ್ಯಕ್ರಮವೊಂದು ದಾಖಲೆ ಮಾಡಿದ ಕೀರ್ತಿ ಮಜಾ ಟಾಕೀಸ್‌ಗೆ ಲಭಿಸಿತು. ಇದು ಬಹಳ ಖುಷಿ ತಂದಿದೆ. ಯಾವ ಧರ್ಮವನ್ನು ಟೀಕಿಸಿಲ್ಲ, ಯಾವ ಉಡುಪನ್ನು ಟೀಕಿಸಿಲ್ಲ. ನಮ್ಮನ್ನು ನಾವು ಗೇಲಿ ಮಾಡಿಕೊಂಡೇ ಮಜಾ ಟಾಕೀಸ್‌ ಖ್ಯಾತಿಯಾಯಿತು. ಶೀಘ್ರದಲ್ಲಿಯೇ ಮತ್ತೂಮ್ಮೆ ಮಜಾ ಟಾಕೀಸ್‌ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next