ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ರಂಗಭೂಮಿ, ಕಿರುತರೆ ನಟ ಅನಿಲ್‌ಕುಮಾರ್ ನೀನಾಸಂ (50) ಬುಧವಾರ ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದಲೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅನಿಲ್ ಅವರನ್ನು ನಗರದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆರೋಗ್ಯ ಇನ್ನಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಅನಿಲ್‌ಅವರು ಪತ್ನಿ ಎಸ್.ರತ್ನ ಹಾಗು ಪುತ್ರಿ ಸ್ಕಂದ ಸೇರಿದಂತೆ ಅಪಾರ ಗೆಳೆಯರು ಹಾಗು ಕಲಾವಿದರನ್ನು ಅಗಲಿದ್ದಾರೆ.
ಅನಿಲ್‌ಕುಮಾರ್ ನೀನಾಸಂ ಪದವೀಧರರಾಗಿದ್ದರು. ಅವರು ನೀನಾಸಂನಲ್ಲಿರುವಾಗ ನಟ ದರ್ಶನ್ ಕೂಡ ಸಹಪಾಠಿಯಾಗಿದ್ದರು. ಇವರೊಂದಿಗೆ ಅನಿಲ್ ಅವರ ಪತ್ನಿ ರತ್ನ ಅವರು ಸಹ ನೀನಾಸಂ ಸಹಪಾಠಿಯಾಗಿದ್ದವರು. ನೀನಾಸಂ ತಿರುಗಾಟ ವೇಳೆ ಅನಿಲ್ ಅವರು ರತ್ನ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅನಿಲ್ ಕೇವಲ ನಟರಷ್ಟೇ ಆಗಿರಲಿಲ್ಲ. ಅವರೊಬ್ಬ ಅದ್ಭುತ ತಂತ್ರಜ್ಞರೂ ಆಗಿದ್ದರು. ನೀನಾಸಂ ತಿರುಗಾಟ ನಡೆಸಿದ ಅನಿಲ್, ಮೆಲ್ಲನೆ ಕಿರುತೆರೆ ಪ್ರವೇಶಿಸಿ, ಮೂಡಲ ಮನೆ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆ ಧಾರಾವಾಹಿಯಲ್ಲಿ ಅನಿಲ್ ಅವರ ನೈಜ ನಟನೆ ನೋಡಿದ ಅನೇಕ ಕಿರುತೆರೆ ನಿರ್ದೇಶಕರು ತಮ್ಮ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದರು. ವೈಶಾಲಿ ಕಾಸರವಳ್ಳಿ, ಬಿ.ಸುರೇಶ, ವಿನು ಬಳಂಜ, ಶ್ರುತಿನಾಯ್ಡು, ರಮೇಶ್ ಇಂದ್ರ ಸೇರಿದಂತೆ ಇನ್ನೂ ಅನೇಕ ನಿರ್ದೇಶಕರ ಜೊತೆ ಕೆಲಸ ಮಾಡಿದ್ದರು. ಅಳಿಗುಳಿ ಮನೆಮದರಂಗಿ ಜನುಮದ ಜೋಡಿ ಲಕ್ಷ್ಮೀ ಬಾರಮ್ಮ ಚಿ.ಸೌ.ಸಾವಿತ್ರಿ ಪ್ರೀತಿ ಪ್ರೇಮ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಅನಿಲ್ ನಟಿಸಿದ್ದರು. ಪ್ರಸ್ತುತ ಪ್ರಸಾರವಾಗುತ್ತಿರುವ ಬ್ರಹ್ಮಗಂಟು ಧಾರಾವಾಹಿಯಲ್ಲೂ ಅನಿಲ್ ಇದ್ದರು. ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ಪಲ್ಲಟದಲ್ಲೂ ಅಭಿನಯಿಸಿದ್ದ ಅನಿಲ್, ಇಲ್ಲಿಯವರೆಗೆ ಸುಮಾರು 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಿಲ್ ನಟಿಸಿದ್ದಾರೆ. ಇನ್ನೂ ಬಿಡುಗಡೆಯಾಗದ ಕವಲುದಾರಿ ಚಿತ್ರದಲ್ಲೂ ಅನಿಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಗುರುವಾರ (ಇಂದು) ಮಧ್ಯಾಹ್ನ 12 ಗಂಟೆಗೆ ತಿಪಟೂರಿನ ಬೈರಾಪುರದಲ್ಲಿ ನೆರವೇರಲಿದೆ. ಅನಿಲ್ ಅವರ ನಿಧನದ ಸುದ್ದಿ ತಿಳಿದ ತಕ್ಷಣ ರಂಗಭೂಮಿಯ ಅನೇಕ ಕಲಾವಿದರು, ಕಿರುತೆರೆ, ಹಿರಿತೆರೆಯ ನಟ, ನಟಿಯರು ಹೆಬ್ಟಾಳ ಸಮೀಪವಿರುವ ಅನಿಲ್ ಮನೆಗೆ ಬಂದು ಅಂತಿಮ ದರ್ಶನ ಪಡೆದರು. ನಟರಾದ ಅಚ್ಯುತಕುಮಾರ್, ನಿರ್ದೇಶಕ ರಾಘು ಶಿವಮೊಗ್ಗ, ಧರ್ಮೇಂದ್ರ, ಅಪ್ಪಣ್ಣ ಸೇರಿದಂತೆ ಅನೇಕ ಕಲಾವಿದರು ಅನಿಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.